ಸೈಕ್ಲಿಂಗ್ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ: ಸುನೀಲ್ ಗೌಡ ಪಾಟೀಲ್

Public TV
2 Min Read

– ಸೈಕ್ಲಿಂಗ್ ಅನುಭವ ಬಿಚ್ಚಿಟ್ಟ ವಿ.ಪ ಸದಸ್ಯ

ವಿಜಯಪುರ: ಸೈಕ್ಲಿಂಗ್ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬರು ತಮ್ಮ ಆಧುನಿಕ ಜೀವನದ ಒತ್ತಡದಿಂದ ಮುಕ್ತಿಹೊಂದಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೈಕಲ್ ಬಳಸುವುದು ಅವಶ್ಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲ್‍ಗೌಡ ಪಾಟೀಲ್ ಹೇಳಿದ್ದಾರೆ.

ಗೋಲಗುಂಬಜ್ ಆವರಣದಿಂದ ಆರಂಭಗೊಂಡ ಸೈಕ್ಲಿಂಗ್ ಜಾಥಾಕ್ಕೆ ಚಾಲನೆ ನೀಡಲಾಯಿತು. ಬಳಿಕ ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುನೀಲ್ ಗೌಡ, ನಾನು ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿಯಾಗಿದ್ದಾಗ ನೂರು ಕೆ.ಜಿ ತೂಕ ಹೊಂದಿದ್ದೆ. ಆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಟ್ರೇಡ್ ಮಿಲ್ ಮೇಲೆ ವಿವರೀತವಾಗಿ ಓಡಿದ ಪರಿಣಾಮ ನನ್ನ ಎರಡು ಕಾಲುಗಳ ಸಂಧಿಗಳಲ್ಲಿ ನೋವು ಉಂಟಾಯಿತು. ಅದನ್ನು ಉಪಚರಿಸಲು ದೇಶ-ವಿದೇಶದ ಎಲ್ಲ ತಜ್ಞವೈದ್ಯರಿಗೆ ಸಂದರ್ಶಿಸಿದರೂ ಗುಣಮುಖವಾಗಲಿಲ್ಲ. ಕೊನೆಗೆ ಕ್ರಿಕೆಟ್ ತಾರೆ ಸಚಿನ ತೆಂಡೂಲ್ಕರ್ ಫಿಟ್‍ನೆಸ್ ಕೋಚ್ ಅನಂತ್ ಜೋಶಿಯವರನ್ನು ಸಂಪರ್ಕಿಸಿದಾಗ ಅವರು ಸೈಕ್ಲಿಂಗ್ ಮಾತ್ರ ಇದಕ್ಕೆ ಪರಿಹಾರ ಎಂದರು. ಅಂದಿನಿಂದ ನಾನು ಮನೆಯಲ್ಲಿಯೇ ಸೈಕ್ಲಿಂಗ್ ಮಾಡುತ್ತಿದ್ದೆ ಎಂದು ತಮ್ಮ ಅನುಭವವನ್ನ ಸುನೀಲ್‍ಗೌಡ ಹಂಚಿಕೊಂಡರು.

ವಿಜಯಪುರದಲ್ಲಿ ಇತ್ತೀಚೆಗೆ ಸೈಕ್ಲಿಂಗ್ ಟ್ರೆಂಡ್ ಬೆಳೆದಿರುವುದರಿಂದ ವಾರದಲ್ಲಿ ಎರಡು ದಿನವಾದರು ಸೈಕ್ಲಿಂಗ್ ಬಳಗದ ಸದಸ್ಯರೊಂದಿಗೆ ಪಾಲ್ಗೊಳ್ಳುತ್ತೇನೆ. ಅಲ್ಲದೆ ಬಿ.ಎಲ್.ಡಿ.ಇ ಸಂಸ್ಥೆಯ ಶಾಲೆ-ಕಾಲೇಜುಗಳಲ್ಲಿ ಸಹ ಮುಂದಿನ ದಿನಗಳಲ್ಲಿ ಸೈಕಲ್ ಬಳಸಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ವಿಜಯಪುರ ಸೈಕ್ಲಿಂಗ್ ವೆಲೋಡ್ರೋಮ್‍ಗೆ ನನ್ನ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಸಹ ಅನುದಾನ ನೀಡುತ್ತೇನೆ ಎಂದರು.

ನಗರದ ಹಿರಿಯ ವೈದ್ಯ ಡಾ. ರವಿ ಚೌಧರಿ, ಡಾ. ಎಲ್.ಎಸ್ ಪಾಟೀಲ್, ಡಾ. ಆನಂದ ಝಳಕಿ ಮಾತನಾಡಿ, ಸೈಕ್ಲಿಂಗ್‍ನ ಮಹತ್ವವನ್ನ ವಿವರಿಸಿದರು. ನಂತರ ರಾಜೀವ್ ಗಾಂಧಿ ಆರೋಗ್ಯ ವಿವಿ ಉಪಕುಲಸಚಿವ ಡಾ. ಗಿರೀಶ್ ಸೋನವಾಲಕರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಗೋಲಗುಂಬಜ್‍ನಿಂದ ಆರಂಭಗೊಂಡ ಜಾಥಾ ಗಾಂಧಿಚೌಕ, ಶಿವಾಜಿವೃತ್ತ, ಮೀನಾಕ್ಷಿ ವೃತ್ತ, ಕೇಂದ್ರ ಬಸ್ ನಿಲ್ದಾಣ, ಬಾಗಲಕೋಟೆ ರಸ್ತೆ ಮೂಲಕ ಎ.ವಿ.ಎಸ್ ಆಯುರ್ವೇದ ಕಾಲೇಜು ತಲುಪಿತು. ಜಾಥಾದಲ್ಲಿ ನಗರದ ವೃತ್ತಿಪರ ಸೈಕ್ಲಿಸ್ಟ್ ಗಳು, ಹವ್ಯಾಸಿ ಸೈಕ್ಲಿಂಗ್ ಪಟುಗಳು, ಆಯುರ್ವೇದ ಕಾಲೇಜು ಅಧ್ಯಾಪಕರು ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *