ಸ್ಪೀಕರ್ ಮಾತು, ಕೃತಿಗೆ ಸಂಬಂಧವೇ ಇಲ್ಲದಂತೆ ನಡೆದುಕೊಳ್ತಿದ್ದಾರೆ – ಸಿಟಿ ರವಿ ಅಸಮಾಧಾನ

Public TV
1 Min Read

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಪಕ್ಷದ ಬಂಡಾಯ ಶಾಸಕರನ್ನು ಅನರ್ಹ ಮಾಡಿರುವ ಸ್ಪೀಕರ್ ನಿರ್ಧಾರಕ್ಕೆ ಬಿಜೆಪಿ ಶಾಸಕ ಸಿಟಿ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಎಸ್‍ ಯಡಿಯೂರಪ್ಪ ಅವರು ಸಿಎಂ ಆಗುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿ ಮಲ್ಲೇಶ್ವರದಲ್ಲಿರುವ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ವಿಧಾನ ಸಭಾಧ್ಯಕ್ಷರು ನಿನ್ನೆ ತೆಗೆದುಕೊಂಡ ನಿರ್ಣಯ ಸರಿಯಿಲ್ಲ. ಕೆಲ ತಿಂಗಳ ಹಿಂದೆ ಕೊಟ್ಟಿರುವ ಶಾಸಕರ ಅನರ್ಹ ದೂರಿಗೆ ಈಗ ಅವರನ್ನು ಅನರ್ಹ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ರಾಜೀನಾಮೆ ವಿಚಾರವಾಗಿ ತೀರ್ಮಾನ ಮಾಡಿ ಎಂದು ಹೇಳಿದ್ದರು ಕೂಡ ಅವರು ಅನರ್ಹ ಮಾಡಿದ್ದಾರೆ. ಆ ಮೂಲಕ ಸ್ಪೀಕರ್ ಮಾತು ಮತ್ತು ಕೃತಿಗೆ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ ಸ್ಪೀಕರ್ ಅವರಿಗೆ ನಾನು ತಪ್ಪು ಮಾಡುತ್ತಿದ್ದೇನೆ ಎನ್ನುವಂತೆ ಕಂಡು ಬಂದರು. ಆದ್ದರಿಂದಲೇ ಅವರು ಒಂದೂವರೆ ಗಂಟೆಗಳ ಕಾಲ ವಿವರಣೆ ನೀಡಿದ್ದಾರೆ. ಸಭಾಧ್ಯಕ್ಷರ ಸ್ಥಾನದಲ್ಲಿ ಇರುವ ಅವರು, ಪಕ್ಷಪಾತಿಯಂತೆ ನಡೆದುಕೊಂಡಿದ್ದಾರೆ. ಅವರಿಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಕಳೆದ 14 ತಿಂಗಳಿಂದ ಪಂಚ ತಾರಾ ಹೋಟೆಲ್‍ನಲ್ಲಿದ್ದುಕೊಂಡೇ ಆಡಳಿತ ಮಾಡುತ್ತಿದ್ದ ಕುಮಾರಸ್ವಾಮಿ ಅವರ ವಾಸ್ತವ್ಯದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ರೆಸಾರ್ಟ್ ವಾಸ್ತವ್ಯದ ಬಗ್ಗೆಯೂ ಮಾತನಾಡಬೇಕಿತ್ತು. ಅಲ್ಲದೇ ಎಲ್ಲೋ ಒಂದು ಕಡೆ ಸ್ಪೀಕರ್ ಅವರ ನಡೆ ಅನುಮಾನ ಹುಟ್ಟಿಸಿದೆ. ಸಭಾಧ್ಯಕ್ಷರೇ ಸುಪ್ರೀಂ ಅಲ್ಲ, ಅಂತಿಮವಾಗಿ ನ್ಯಾಯಾಲಯ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂಬ ವಿಶ್ವಾಸ ಇದೆ ಎಂದರು.

ಬಿಎಸ್‍ವೈ ಅವರು ಬಹುಮತ ಸಾಬೀತು ಪಡಿಸುವ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಬಹುಮತ ಸಾಬೀತು ಪಡೆಸಬೇಕಾಗಿರುವುದು ವಿಧಾನ ಸೌಧದಲ್ಲಿ ವಿನಃ, ರಾಜಭವನದಲ್ಲಿ ಅಲ್ಲ. ಎಲ್ಲರೂ ಕಾದು ನೋಡಿ. ಸದನದಲ್ಲೇ ಕುಮಾರಸ್ವಾಮಿ ಅವರ ವಿಶ್ವಾಸ ಮತಯಾಚನೆ ನಡೆದಿದ್ದು, ಅಲ್ಲಿ ಅವರು ವಿಫಲರಾದರು. ಆದರೆ ಬಿಎಸ್‍ವೈ ಅವರು ಖಂಡಿತ ಬಹುಮತ ಸಾಬೀತು ಪಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *