ನಮ್ಮನೆ ಮಕ್ಕಳು ಸುರಕ್ಷಿತವಾಗಿ ಮನೆಗೆ ಹಿಂದಿರುಗುವ ಗ್ಯಾರಂಟಿ ಯಾವಾಗ ಕೊಡ್ತೀರಿ? – ಸಿಎಂಗೆ ಸಿ.ಟಿ ರವಿ ಪ್ರಶ್ನೆ

By
2 Min Read

ಬೆಂಗಳೂರು: ಯುವಕನೊಬ್ಬ ವಿದ್ಯಾರ್ಥಿನಿಯನ್ನು ಹುಬ್ಬಳ್ಳಿಯ ಬಿವಿಬಿ ಕಾಲೇಜು (BVB College) ಕ್ಯಾಂಪಸ್‌ನಲ್ಲೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನ ಬೆಚ್ಚಿ ಬೀಳುವಂತೆ ಮಾಡಿದೆ.

ಘಟನೆ ಕುರಿತು ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಮಾಜಿ ಸಚಿವ ಸಿ.ಟಿ ರವಿ (CT Ravi), ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಮುಖ್ಯಮಂತ್ರಿಗಳೇ ಎಂಥಹ ಪರಿಸ್ಥಿತಿ ನಿರ್ಮಾಣವಾಗಿದೆ ರಾಜ್ಯದಲ್ಲಿ? ಕಾನೂನು ಸುವ್ಯವಸ್ಥೆ ಎಲ್ಲಿದೆ? ಮನೆಯಿಂದ ಹೊರಬಂದ ನಮ್ಮ ಮನೆ ಮಕ್ಕಳು ಸುರಕ್ಷಿತವಾಗಿ ಮನೆಗೆ ಹಿಂದಿರುಗುವ ಗ್ಯಾರೆಂಟಿ ಯಾವಾಗ ಕೊಡುತ್ತೀರಿ? ಬದುಕುವ ಮತ್ತು ಸುರಕ್ಷತೆಯ ಗ್ಯಾರಂಟಿ ಕೊಡದ ನಿಮ್ಮ ಸರ್ಕಾರದ ಮೇಲೆ ಯಾರಿಗೂ ಯಾವ ಭರವಸೆಯು ಇಲ್ಲ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಏನಿದು ಪ್ರಕರಣ?
ಯುವಕನೊಬ್ಬ ವಿದ್ಯಾರ್ಥಿನಿಯನ್ನು ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲೇ ಕೊಲೆ ಮಾಡಿದ್ದಾನೆ. ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಕೊಲೆಯಾದ ವಿದ್ಯಾರ್ಥಿನಿ. ಅದೇ ಕಾಲೇಜಿನ ವಿದ್ಯಾರ್ಥಿ ಫೈಜಲ್ 9 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಪ್ರಥಮ ವರ್ಷದ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ನೇಹಾಗೆ ಕ್ಯಾಂಪಸ್‌ನಲ್ಲೇ 9 ಬಾರಿ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ನೇಹಾಳನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಆಕೆ ಪ್ರಾಣ ಬಿಟ್ಟಿದ್ದಾಳೆ.

ಪ್ರೀತಿ ತಿರಸ್ಕರಿಸಿದ್ದಕ್ಕೆ ಕೊಲೆ ಶಂಕೆ:
ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿದ್ದ ಫೈಜಲ್ ಕೆಲ ದಿನಗಳಿಂದ ನೇಹಾ ಬೆನ್ನು ಬಿದ್ದಿದ್ದ. ಆದರೆ ನೇಹಾ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿ ಪರಾರಿಯಾಗುತ್ತಿದ್ದಾಗ ಫೈಜಲ್‌ನನ್ನು ಅಲ್ಲಿದ್ದ ವ್ಯಕ್ತಿಗಳು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಈಗ ಫೈಜಲ್‌ನನ್ನು ಬಂಧಿಸಿದ್ದಾರೆ.

Share This Article