ಉಸಿರಾಡುವ ಗಾಳಿಗೊಂದು ಟ್ಯಾಕ್ಸ್ ಹಾಕೋದು ಬಾಕಿ ಇದೆ: ಸಿ.ಟಿ ರವಿ ಕಿಡಿ

Public TV
1 Min Read

ನವದೆಹಲಿ: ಹಾಲಿನ ದರ ಏರಿಕೆ ಮಾಡಿರುವುದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ಕಿಡಿಕಾರಿದ್ದು, ಉಸಿರಾಡುವ ಗಾಳಿಗೊಂದು ಟ್ಯಾಕ್ಸ್ ಹಾಕೋದು ಬಾಕಿ ಇದೆ ಎಂದಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದರ ದರ ಉಳಿಸಿದ್ದಾರೆ ಇವರು. ಎಲ್ಲಾ ದರವನ್ನು ಸಹ ಇವರು ಏರಿಕೆ ಮಾಡಿದ್ದಾರೆ. ಕೇವಲ ಹಾಲು, ಪೆಟ್ರೋಲ್ ಮಾತ್ರ ಅಲ್ಲ, ಎಲ್ಲವನ್ನ ಏರಿಕೆ ಮಾಡಿದ್ದಾರೆ. ಇನ್ನು ಉಸಿರಾಡುವ ಗಾಳಿಗೆ ಒಂದು ಟ್ಯಾಕ್ಸ್ ಹಾಕೋದು ಬಾಕಿ ಇದೆ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಸೌಧ ಮಾರಾಟ ಮಾಡಿ ಅಂತ ಅವರಿಗೆ ಸಲಹೆ ಕೊಡುತ್ತಾರೆ. ಆಸ್ತಿ ಮಾರಿ ಅಂತ ಸಲಹೆ ಕೊಡೋಕೆ ವಿದೇಶದಿಂದ ನೇಮಕ ಮಾಡಿಕೊಳ್ಳಬೇಕಾ?. ಮನೆ ಸುಟ್ರೆ ಇದ್ದಿಲು ಸಿಗುತ್ತೆ ಅಂತ ಅವರು ಸಲಹೆ ಕೊಡ್ತಾರೆ. ಈ ಮನೆ ಹಾಳು ಸಲಹೆ ಪಡೆಯೋಕೆ ಸಿದ್ದರಾಮಯ್ಯನವರು ಬೇಕಾ?. ಖಜಾನೆ ದಿವಾಳಿ ಆಗಿದೆ, ಅದಿಕೆ 11 ತಿಂಗಳಿಂದ ಗುತ್ತಿಗೆದಾತರಿಗೆ ಬಿಲ್ ಕೊಟ್ಟಿಲ್ಲ. ಅಧಿಕೃತವಾಗಿ ರೈತರ ಆತ್ಮಹತ್ಯೆ ಸಂಖ್ಯೆ 750 ದಾಟಿದೆ ಎಂದು ಗರಂ ಆದರು.

ಇವರು ಯಾವುದನ್ನೂ ಬಿಟ್ಟಿಲ್ಲ. ಇವರು ಬಿಟ್ಟಿರೋದು ಉಸಿರಾಡೋ ಗಾಳಿ ಹಾಗೂ ಹೆಣ ಈ ಎರಡನ್ನ ಮಾತ್ರ ಅವರು ಬಿಟ್ಟಿದ್ದಾರೆ. ಬಿತ್ತನೆ ಬೀಜದ ದರ ಸಹ ಇವರು ಏರಿಕೆ ಮಾಡಿದ್ದಾರೆ, ಅತ್ಯಂತ ಪಾಪದ ಕೆಲಸ. ಪೆಟ್ರೋಲ್ ದರ ಏರಿಕೆ ಮಾಡಿದ್ರು, ಬಸ್ ಚಾರ್ಜ್ ಹೆಚ್ಚಳ ಮಾಡೋ ಬಗ್ಗೆ ಹೇಳಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯ ಬೆಲೆ ಏರಿಕೆ ಮಾಡದ ವಸ್ತು ಇಲ್ಲಾ ಅಂತ ಆಗಿದೆ ಎಂದು ಸಿ.ಟಿ ರವಿ ಕಿಡಿಕಾರಿದರು.

Share This Article