IPL Retention | 2025ರ ಐಪಿಎಲ್‌ಗೆ ಲೆಜೆಂಡ್‌ ಮಹಿ ಫಿಕ್ಸ್‌ – ರುತುರಾಜ್‌, ಜಡ್ಡುಗೆ ಬಂಪರ್‌

Public TV
2 Min Read

– 20 ಲಕ್ಷಕ್ಕೆ ಬಿಕರಿಯಾಗಿದ್ದ ಪಥಿರಣ ಈಗ 13 ಕೋಟಿ ಒಡೆಯ

ಮುಂಬೈ: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಉಸಿರು ಆಗಿರುವ ಲೆಜೆಂಡ್‌ ಕ್ರಿಕೆಟಿಗ ಎಂ.ಎಸ್‌ ಧೋನಿ (MS Dhoni) 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆವೃತ್ತಿಯಲ್ಲಿ ಮುಂದುವರಿಯುವುದು ಪಕ್ಕಾ ಆಗಿದೆ. ನಿರೀಕ್ಷೆಯಂತೆ ಎಂ.ಎಸ್‌ ಧೋನಿ ಅವರನ್ನ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಸಿಎಸ್‌ಕೆ ಫ್ರಾಂಚೈಸಿ ಉಳಿಸಿಕೊಂಡಿದ್ದು, ಧೋನಿ ಅಭಿಮಾನಿಗಳು ಫುಲ್‌ಖುಷ್‌ ಆಗಿದ್ದಾರೆ.

ನಾಯಕ ರುತುರಾಜ್‌, ಜಡ್ಡುಗೆ ಬಂಪರ್‌:
2024ರ ಐಪಿಎಲ್‌ ಆವೃತ್ತಿಯಲ್ಲಿ ಅಲ್ಪ ಮೊತ್ತಕ್ಕೆ ತಂಡದಲ್ಲಿ ಉಳಿದುಕೊಂಡಿದ್ದ ಸಿಎಸ್‌ಕೆ ಕ್ಯಾಪ್ಟನ್‌ ರುತುರಾಜ್‌ ಗಾಯಕ್ವಾಡ್‌ (Ruturaj Gaikwad), ಮತೀಶ ಪಥಿರಣ, ಶಿವಂ ದುಬೆ, ರವೀಂದ್ರ ಜಡೇಜಾ (Ravindra Jadeja) ಅವರ ಸಂಭಾವನೆಯಲ್ಲಿ ಭಾರಿ ಏರಿಕೆ ಕಂಡಿದೆ.

ನಿರೀಕ್ಷೆಗೂ ಮೀರಿದಂತೆ ನಾಯಕ ರುತುರಾಜ್‌ ಗಾಯಕ್ವಾಡ್‌ ಹಾಗೂ ರವೀಂದ್ರ ಜಡೇಜಾ ಅವರನ್ನು ತಲಾ 18 ಕೋಟಿ ರೂ.ಗಳಿಗೆ ಚೆನ್ನೈ ತಂಡ ಉಳಿಸಿಕೊಂಡಿದೆ. ಇನ್ನುಳಿದಂತೆ ಮತೀಶ ಪಥಿರಣ 13 ಕೋಟಿ ರೂ., ಶಿವಂ ದುಬೆ 12 ಕೋಟಿ ರೂ.ಗೆ ರಿಟೇನ್‌ ಆದ್ರೆ, ಎಂ.ಎಸ್‌ ಧೋನಿ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಕೇವಲ 4 ಕೋಟಿ ರೂ.ಗಳಿಗೆ ರೀಟೇನ್‌ ಆಗಿದ್ದಾರೆ.

ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ನಾಯಕ ರುತುರಾಜ್‌ 6 ಕೋಟಿ ರೂ., ಮತೀಶ ಪಥಿರಣ 20 ಲಕ್ಷ ರೂ., ರವೀಂದ್ರ ಜಡೇಜಾ 16 ಕೋಟಿ ರೂ., ಶಿವಂ ದುಬೆ 4 ಕೋಟಿ ರೂ. ಹಾಗೂ ಎಂ.ಎಸ್‌ ಧೋನಿ 12 ಕೋಟಿ ರೂ. ಸಂಭಾವನೆ ಪಡೆದಿದ್ದರು.

ಯಾರ ಸಂಭಾವನೆ ಎಷ್ಟು?
* ರುತುರಾಜ್‌ ಗಾಯಕ್ವಾಡ್‌ – 18 ಕೋಟಿ ರೂ.
* ರವೀಂದ್ರ ಜಡೇಜಾ – 18 ಕೋಟಿ ರೂ.
* ಮತೀಶ ಪಥಿರಣ – 13 ಕೋಟಿ ರೂ.
* ಶಿವಂ ದುಬೆ – 12 ಕೋಟಿ ರೂ.
* ಎಂ.ಎಸ್‌ ಧೋನಿ – 4 ಕೋಟಿ ರೂ. (ಅನ್‌ಕ್ಯಾಪ್ಡ್‌ ಪ್ಲೇಯರ್‌)

ಮಹಿ ಏಕೆ ಅನ್‌ಕ್ಯಾಪ್ಡ್‌ ಪ್ಲೇಯರ್‌?
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದ ಆಟಗಾರರನ್ನು ಅನ್‌ಕ್ಯಾಪ್ಡ್‌ ಪ್ಲೇಯರ್‌ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅವರು ನಿಯಮದಂತೆ 4 ಕೋಟಿ ರೂ. ಮಾತ್ರವೇ ಸಂಭಾವನೆ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ಮುಂದಿನ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ.

Share This Article