ಕ್ರಿಪ್ಟೋಕರೆನ್ಸಿಗೆ ನಿಷೇಧವಿಲ್ಲ- ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ

Public TV
3 Min Read

ನವದೆಹಲಿ: ನಿನ್ನೆ ಸಂಜೆ ದೇಶದಲ್ಲಿ ಕೇಳಿ ಬಂದ ಒಂದೇ ಒಂದು ಸುದ್ದಿ ದೊಡ್ಡ ಸಂಚಲನವನ್ನು ಮೂಡಿಸಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚಿಂತಿಸಿದೆ. ಈ ಸಂಬಂಧ ಅಧಿವೇಶದಲ್ಲಿ ಬಿಲ್ ಮಂಡಿಸಲಿದ್ದು, ಭಾರತದಲ್ಲಿ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿಗಳು ನಿಷೇಧವಾಗಲಿದೆ ಎಂದು ವರದಿಯಾಗಿತ್ತು.

ನಿನ್ನೆ ರಾತ್ರಿ ಈ ಸುದ್ದಿ ಹೊರ ಬರುತ್ತಿದ್ದಂತೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವಾಗಿತ್ತು. ಕ್ರಿಪ್ಟೋಕರೆನ್ಸಿಗಳಲ್ಲಿ ದಾಖಲೆಯ ಪ್ರಮಾಣದ ಇಳಿಕೆ ಕಂಡು ಬಂದಿತ್ತು. ಕ್ರಿಪ್ಟೋಕರೆನ್ಸಿಯ ಅಗ್ರಗಣ್ಯ ಬಿಟ್ ಕಾಯಿನ್ ಬೆಲೆ ಭಾರೀ ಕುಸಿತವಾಗಿತ್ತು. 1 ಬಿಟ್ ಬೆಲೆ 44 ಲಕ್ಷ ಮೌಲ್ಯದಿಂದ ಇದು 38 ಲಕ್ಷಕ್ಕೆ ಕುಸಿತ ಕಂಡಿತ್ತು. ಕೆಲವೇ ಗಂಟೆಗಳಲ್ಲಿ ಈ ಪ್ರಮಾಣದಲ್ಲಿ ಕುಸಿತ ಕಂಡಿದ್ದು ಇದೇ ಮೊದಲು ಎನ್ನಲಾಗಿದೆ. ಸದ್ಯ 41 ಲಕ್ಷದ ಆಸುಪಾಸಿನಲ್ಲಿ ಬಿಟ್ ಕಾಯಿನ್ ಸ್ಥಿರವಾಗಿದೆ.
ಇದನ್ನೂ ಓದಿ: ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ – ಗಂಭೀರ್‌ಗೆ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ

ಬಿಟ್ ಕಾಯಿನ್ ಹೊರತುಪಡಿಸಿ ಬಹುತೇಕ ಕ್ರಿಪ್ಟೋಕರೆನ್ಸಿಗಳ ಪರಿಸ್ಥಿತಿಯೂ ಇದೇ ಆಗಿದ್ದು, ಸಣ್ಣ ಹೂಡಿಕೆದಾರರು ಗಾಬರಿಯಿಂದ ಹಣ ಹಿಂದೆ ಪಡೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಭಾರತದಲ್ಲಿ ಹತ್ತು ಕೋಟಿಗೂ ಅಧಿಕ ಜನರು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದು ಅಮೆರಿಕಾಕ್ಕಿಂತ ಹೆಚ್ಚು ಜನರು ಭಾರತದಲ್ಲಿ ಬಳಕೆದಾರರಿದ್ದಾರೆ ಎನ್ನಲಾಗಿದೆ‌.

ಕ್ರಿಪ್ಟೋ ಕರೆನ್ಸಿಗಳ ಬೆಲೆಯಲ್ಲಿ ಈ ಏರುಪೇರು ಆಗುತ್ತಿರುವ ಹೊತ್ತಲ್ಲೇ ಈಗ ಸರ್ಕಾರದ ಮೂಲಗಳಿಂದ ಮತ್ತೊಂದು ಸುದ್ದಿ ಹೊರ ಬಂದಿದೆ. ಸರ್ಕಾರದ ನಿಲುವು ಹೂಡಿಕೆದಾರಲ್ಲಿ ಕೊಂಚ ನಿರಾಳತೆ ತಂದಿದೆ. ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ತಂತ್ರಜ್ಞಾನ ಆಧಾರಿತ ಕರೆನ್ಸಿ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಅನುಮತಿಸುತ್ತದೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗೆ ನಿಷೇಧವಾಗಲ್ಲ, ಬದಲಿಗೆ ಅದಕ್ಕೊಂದು ಕಾನೂನು ಚೌಕಟ್ಟು ನೀಡಬಹುದು ಎನ್ನಲಾಗುತ್ತಿದೆ.

ಆರ್‌ಬಿಐ ತನ್ನ ಹೊಸ ಡಿಜಿಟಲ್ ಕರೆನ್ಸಿ ಜಾರಿಗೆ ತರುತ್ತಿದ್ದು, ಉಳಿದಂತೆ ಕ್ರಿಪ್ಟೋಕರೆನ್ಸಿಗಳು ಮುಂದುವರಿಯಲಿದೆ. ಆದರೆ ಕ್ರಿಪ್ಟೋಕರೆನ್ಸಿಗಳಿಂದ ಆಗಬಹುದಾದ ಅಪಾಯಗಳನ್ನು ತಡೆಯುವ ಪ್ರಯತ್ನದಲ್ಲಿದೆ. ಕ್ರಿಪ್ಟೋಕರೆನ್ಸಿಗಳ ಮೂಲಕ ನಡೆಯಬಹುದಾದ ಹವಾಲಾ ದಂಧೆ, ವಿದೇಶಗಳಿಗೆ ಹಣ ಅಕ್ರಮ ವರ್ಗಾವಣೆ, ಭೂಗತ ಲೋಕದ ಚಟುವಟಿಕೆಗಳು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಕ್ರಿಪ್ಟೋಕರೆನ್ಸಿ ಬಳಕೆ ಇವುಗಳನ್ನು ತಡೆಯುವ ಲೆಕ್ಕಚಾರದಲ್ಲಿ ಸರ್ಕಾರ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕೊರೊನಾ ವೈರಸ್‌ ಡೆಲ್ಟಾ ರೂಪಾಂತರಿಗೆ ಕೋವ್ಯಾಕ್ಸಿನ್‌ ಶೇ. 50 ಪರಿಣಾಮಕಾರಿ

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಬಿಐ ಮತ್ತು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧ, ಅಪಾಯಗಳ ಮತ್ತು ನಕಲಿ ಜಾಹೀರಾತುಗಳ ಬಗ್ಗೆ ಚರ್ಚೆ ಮಾಡಲಾಗಿತ್ತು. ತಜ್ಞರ ಸಲಹೆ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಈಗ ಕಠಿಣ ಕಾನೂನು ತರಲು ಮಸೂದೆ ಮಂಡಿಸಲಿದ್ದಾರೆ.

ಸರ್ಕಾರ ಕ್ರಿಪ್ಟೋಕರೆನ್ಸಿಯನ್ನು ಭಾರತದ ಅಧಿಕೃತ ಕರೆನ್ಸಿಯಾಗಿ ಒಪ್ಪಿಕೊಳ್ಳುವುದಿಲ್ಲ ಅಂದರೆ ಕ್ರಿಪ್ಟೋಕರೆನ್ಸಿ ಮೂಲಕ ಯಾವುದೇ ಅಧಿಕೃತ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಿಲ್ಲ‌. ಅದೊಂದು ಇಂಟರ್‌ನೆಟ್‌ ಆಧರಿತ ವ್ಯವಹಾರವಾಗಿ ಮುಂದುವರಿಯಲಿದೆ. ಅದಕ್ಕೆ ತೆರಿಗೆ ವಿಧಿಸುವ ಸಾಧ್ಯತೆಗಳು ಹೆಚ್ಚು ಕಂಡು ಬರುತ್ತಿದೆ. ಅಲ್ಲದೇ ಹವಾಲಾ ಮತ್ತು ಭಯೋತ್ಪಾದಕ ಚಟುವಟಿಕಗಳಿಗೆ ಕ್ರಿಪ್ಟೋಕರೆನ್ಸಿ ಸಹಾಯವಾಗದಂತೆ ಕಾನೂನು ರೂಪಿಸಬಹುದು ಎನ್ನಲಾಗುತ್ತಿದೆ. ಇನ್ನೂ ಮುಖ್ಯವಾಗಿ ಕ್ರಿಪ್ಟೋಕರೆನ್ಸಿ ಸಂಬಂಧಿಸಿದ ಜಾಹೀರಾತುಗಳಿಗೆ ಕಠಿಣ ಷರತ್ತುಗಳು ವಿಧಿಸಬಹುದು ಎನ್ನಲಾಗುತ್ತಿದೆ.

ಕ್ರಿಪ್ಟೋಕರೆನ್ಸಿಗಳು “ತಪ್ಪು ಕೈಗೆ ಬೀಳಬಾರದು ಮತ್ತು ನಮ್ಮ ಯುವಕರನ್ನು ಹಾಳು ಮಾಡಬಾರದು” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಅಂತರಾಷ್ಟ್ರೀಯ ಭಾಷಣದಲ್ಲಿ ಹೇಳಿದ್ದರು. ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಒಗ್ಗೂಡಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಸರ್ಕಾರ ಮತ್ತು ಆರ್‌ಬಿಐ ಇತ್ತೀಚೆಗೆ ಈ ಕುರಿತು ಸುಳಿವು ನೀಡಿದ್ದವು. ಕ್ರಿಪ್ಟೋಕರೆನ್ಸಿಯನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಪ್ಪಿಸಲು ಅದರ ಮೇಲೆ ಬಲವಾದ ನಿಯಂತ್ರಣ ಹೇರುವ ಪ್ರಯತ್ನಗಳು ನಡೆಯಬಹುದು ಎಂದು ಚರ್ಚೆಯಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *