ಕಲ್ಲು ತೂರಾಟ ನಡೆಸೋ ಹೆಣ್ಮಕ್ಕಳನ್ನು ಕಟ್ಟಿಹಾಕಲು ಸಿದ್ಧಗೊಂಡಿದೆ CRPF `ಸೂಪರ್ 500′ ಮಹಿಳಾ ತಂಡ

Public TV
1 Min Read

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೇನೆಯ ವಿರುದ್ಧ ಯುವಕರ ಜೊತೆ ಯುವತಿಯರು ಭಾಗಿಯಾಗಿ ಕಲ್ಲು ತೂರಾಟ ನಡೆಸುತ್ತಿದ್ದು, ಈಗ ಯುವತಿಯರನ್ನು ನಿಯಂತ್ರಿಸಲು ಸಿಆರ್‌ಪಿಎಫ್‌ ಮಹಿಳಾ ಸೂಪರ್ 500 ತಂಡ ಸಿದ್ಧವಾಗಿದೆ.

ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ, ಹೆಣ್ಣು ಮಕ್ಕಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಸಿಆರ್‌ಪಿಎಫ್‌ ನ 500 ಮಹಿಳೆಯರಿಗೆ ತರಬೇತಿ ನೀಡಿ ತಂಡವನ್ನು ತಯಾರು ಮಾಡಿದೆ.

ಕಲ್ಲು ತೂರಾಟ ನಡೆಸುವ ಹೆಣ್ಣು ಮಕ್ಕಳ ಮೇಲೆ ಕ್ರಮಕೈಗೊಳ್ಳುವುದು ಸೂಕ್ಷ್ಮ ವಿಚಾರ ಎಂದು ಅರಿತಿರುವ ಸರ್ಕಾರ ಮಹಿಳಾ ಪಡೆಯಿಂದಲೇ ಇವರನ್ನು ನಿಯಂತ್ರಿಸುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದೆ.

ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಲು ಈ ತಂಡಕ್ಕೆ ಕಠಿಣ ತರಬೇತಿಯನ್ನು ನೀಡಿದೆ. ಕತ್ತಲಿನಲ್ಲೂ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಕೆಲವೇ ನಿಮಿಷಗಳಲ್ಲಿ ಗನ್ ಬಳಕೆ ಮಾಡುವುದು ಹೇಗೆ ಎಂಬಂತಹ ತರಬೇತಿ ಇದರಲ್ಲಿ ಸೇರಿದೆ.

ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಕಾಶ್ಮೀರ ಪ್ರತ್ಯೇಕವಾದಿ ಹೋರಾಟ ನಡೆಸುವ ನಾಯಕರು ಪಾಕಿಸ್ತಾನದೊಂದಿಗೆ ಕೈಜೋಡಿಸಿದ್ದು, ಕಲ್ಲು ತೂರಾಟ ನಡೆಸುವ ಗುಂಪುಗಳಿಗೆ ಸಹಕಾರ ನೀಡುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸೈನ್ಯ ಈ ಕ್ರಮಕ್ಕೆ ಮುಂದಾಗಿದೆ. ಮಹಿಳಾ ತಂಡ ಕಾರ್ಯಾಚರಣೆಗೆ ಸಿದ್ಧಪಡಿಸಿದ ಕಾರಣ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಯೋಧರ ಮೇಲಿನ ಒತ್ತಡ ಕಡಿಮೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *