ಎತ್ತಿಗೆ ಸ್ನಾನ ಮಾಡಿಸಲು ಹೋದಾಗ ಮೊಸಳೆ ದಾಳಿ – ಮಾಲೀಕನ ಜೀವ ಉಳಿಸಿದ ಎತ್ತು

Public TV
1 Min Read

ಬಾಗಲಕೋಟೆ: ಎತ್ತಿನ ಮೈ ತೊಳೆಯಲು ಹೋಗಿದ್ದಾಗ ರೈತನ ಮೇಲೆ ಮೊಸಳೆ ದಾಳಿ ನಡೆಸಿದ್ದು, ಸಾಕಿದ ಎತ್ತು ರೈತನ ಜೀವ ಉಳಿಸಿರುವ ರೋಚಕ ಘಟನೆ ಜಿಲ್ಲೆಯ ಬೀಳಗಿ ( Bilagi) ತಾಲ್ಲೂಕಿನ ಹೊನ್ಯಾಳ ಗ್ರಾಮದ ಬಳಿ ಆಲಮಟ್ಟಿ (Almatti) ಜಲಾಶಯದ ಹಿನ್ನೀರಲ್ಲಿ ನಡೆದಿದೆ.

ದಾಳಿಗೊಳಗಾದ ರೈತನನ್ನು ಹೊನ್ಯಾಳ (Honyal)  ಗ್ರಾಮದ ನಿವಾಸಿ ಧರಿಯಪ್ಪ ಮೇಟಿ(32) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ದೇವಾಲಯಗಳಲ್ಲಿ ವಿಶೇಷ ಆಯುಧಪೂಜೆ – ವಾಹನಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ ಜನ

ಹೊನ್ಯಾಳ ಗ್ರಾಮದ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ರೈತ ಎತ್ತಿನ ಮೈ ತೊಳೆಯಲು ಹೋಗಿದ್ದ. ಆ ವೇಳೆ ರೈತನ ಮೇಲೆ ಮೊಸಳೆ ದಾಳಿ ನಡೆಸಿದ್ದು, ಆತನ ಬಲಗೈಗೆ ಬಾಯಿಹಾಕಿದೆ. ಗಾಬರಿಯಲ್ಲಿ ಏನೂ ತೋಚದೇ ಪಕ್ಕದಲ್ಲಿದ್ದ ಎತ್ತಿನ ಹಗ್ಗವನ್ನು ತನ್ನ ಎಡಗೈಯಿಂದ ಹಿಡಿದುಕೊಂಡಿದ್ದಾನೆ. ಹಗ್ಗ ಹಿಡಿದಿದ್ದನ್ನು ಕಂಡ ಎತ್ತು ತನ್ನ ಮಾಲೀಕನನ್ನು ನೀರಿನಿಂದ ಹೊರಗೆ ಎಳೆದಿದೆ. ಆತನನ್ನು ಎತ್ತು ಹೊರಕ್ಕೆ ಎಳೆದಾಗ ಮೊಸಳೆ ಓಡಿಹೋಗಿದ್ದು, ರೈತನ ಬಲಗೈ ಕತ್ತರಿಸಿದೆ. ಆದರೆ ಸಾಕಿದ ಎತ್ತು ತನ್ನ ಮಾಲೀಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.

ಗಾಯಳು ಧರಿಯಪ್ಪನನ್ನು ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಬೀಳಗಿ ಶಾಸಕ ಜೆಟಿ ಪಾಟೀಲ್ (JT Patil) ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳ ಜೊತೆ ದೂರವಾಣಿ ಕರೆಯ ಮೂಲಕ ಮಾತನಾಡಿ, ಸೂಕ್ತ ಪರಿಹಾರ ಕೊಡಬೇಕು ಹಾಗೂ ಎಲ್ಲ ದಾಖಲೆಗಳನ್ನು ಕಲೆ ಹಾಕಿ ಪರಿಹಾರಕ್ಕೆ ಪ್ರಕ್ರಿಯೆ ನಡೆಸಲು ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಆಯುಧ ಪೂಜೆಯ ದಿನದಂದೇ ಸಿಹಿಸುದ್ದಿ ಕೊಟ್ಟ ಯುವ- ಚಿತ್ರದ ಪೋಸ್ಟರ್‌ ಔಟ್

Share This Article