ಯುಪಿ ಪೊಲೀಸರಿಗೆ ಹೆದರಿ 12,291 ಕ್ರಿಮಿನಲ್‍ಗಳು ಶರಣು

Public TV
1 Min Read

ಲಕ್ನೋ: ಕ್ರಿಮಿನಲ್ ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರಿಗೆ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣ ಬೆಂಬಲ ನೀಡಿದ್ದು, ಪರಿಣಾಮವಾಗಿ ಇದುವರೆಗೂ 12 ಸಾವಿರದ 291 ಕ್ರಿಮಿನಲ್ ಗಳು ಶರಣಾಗಿದ್ದಾರೆ ಎಂದು ಯುಪಿ ಡಿಜಿಪಿ ಒಪಿ ಸಿಂಗ್ ತಿಳಿಸಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಡಿಜಿಪಿ, ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವವರಿಗೆ ಭಯ ಆರಂಭವಾಗಿದ್ದು, ಸ್ವತಃ ಅವರೇ ತಮ್ಮ ಜಾಮೀನು ರದ್ದು ಮಾಡಿ ಜೈಲಿನಲ್ಲೇ ಉಳಿದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಆಗ್ರಾ ಪೊಲೀಸರು ಸೈಬರ್ ಕ್ರೈಂ ವಿಭಾಗವನ್ನು ಕೂಡ ಆರಂಭಿಸಿದ್ದು, ಇದರಿಂದ ಅಪರಾಧ ಪ್ರಕರಣಗಳನ್ನು ತಡೆಯಲು ಸಹಕಾರಿ ಆಗಲಿದೆ. ಆಗ್ರಾ ಐತಿಹಾಸಿಕ ನಗರ ಆಗಿರುವುದರಿಂದ ಪ್ರವಾಸಿ ತಾಣವಾಗಿದೆ. ವಿಶ್ವದ ಬೇರೆ ಬೇರೆ ಭಾಗದಿಂದ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಂತಹ ಕ್ರಿಮಿನಲ್ ಗಳಿಂದ ಆಗ್ರಾ ನಗರಕ್ಕೆ ಕಪ್ಪು ಚುಕ್ಕೆ ಬರುತ್ತಿತ್ತು. ಅದ್ದರಿಂದ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಆಗ್ರಾ ಎಸ್‍ಎಸ್‍ಪಿ ಅಮಿತ್ ಪಾಠಕ್ ತಿಳಿಸಿದ್ದಾರೆ.

ಪ್ರತಿ ಪೊಲೀಸ್ ಠಾಣೆಯಲ್ಲಿ ನಡೆಯುವ ಕ್ರಿಮಿನಲ್ ಅಪರಾಧಗಳು ಸೇರಿದಂತೆ, ಟ್ರಾಫಿಕ್ ಸಮಸ್ಯೆಗೆ ಆಯಾ ಪ್ರದೇಶದ ಠಾಣೆಗಳನ್ನೇ ಹೊಣೆ ಮಾಡಲಾಗುತ್ತಿದೆ. ಇತ್ತೀಚೆಗೆ ಕರ್ತವ್ಯಲೋಪ ಆರೋಪ ಮಾಡಿದ ಮೇರೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಪೊಲೀಸರಿಗೆ ಎನ್‍ಜಿಒಗಳು ಕೂಡ ಸಹಕಾರ ನೀಡುತ್ತಿವೆ ಎಂದರು.

ಕೆಲ ದಿನಗಳ ಹಿಂದೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪ್ರಮುಖ 3 ರಾಜ್ಯಗಳನ್ನು ಕಳೆದುಕೊಂಡ್ರೂ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಕ್ರಿಮಿನಲ್ ಚಟುವಟಿಕೆ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದರಂತೆ ಕ್ರಿಮಿನಲ್ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿರುವ ಉತ್ತರ ಪ್ರದೇಶ ಡಿಜಿಪಿ ಎಲ್ಲಾ ಪೊಲೀಸ್ ಠಾಣೆಗಳು ಕ್ರಿಮಿನಲ್ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *