ಕೊರೊನಾಗೆ ತಿಥಿ ಮಾಡಿ, ನೀವು ಅತಿಥಿ ಆಗ್ಬೇಡಿ – ಕ್ರೇಜಿ ಸ್ಟಾರ್ ಎಚ್ಚರಿಕೆ

Public TV
2 Min Read

ಬೆಂಗಳೂರು: ಕೊರೊನಾ ವಿರುದ್ಧ ದೇಶದ ಹೋರಾಟಕ್ಕೆ ಎಲ್ಲರೂ ಸಾಥ್ ನೀಡಿ, ಸರ್ಕಾರದ ಆದೇಶಕ್ಕೆ ಸಹಕರಿಸಿ, ಮನೆಯಲ್ಲಿಯೇ ಇದ್ದು ಸೋಂಕು ಹರಡುವಿಕೆಗೆ ಕಡಿವಾಣ ಹಾಕಿ ಎಂದು ಸ್ಯಾಂಡಲ್‍ವುಡ್, ಟಾಲಿವುಡ್, ಬಾಲಿವುಡ್ ಸೇರಿದಂತೆ ಅನೇಕ ಸಿನಿಮಾ ಕಲಾವಿದರು, ನಟ, ನಟಿಯರು ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಕೆಲ ಜನರು ಮಾತ್ರ ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ಭೀಕರತೆ ಅರಿಯದೆ ಮುರ್ಖತನ ಪ್ರದರ್ಶಿಸುತ್ತಿದ್ದಾರೆ. ಇದನ್ನು ಕಂಡು ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮದೇ ಶೈಲಿಯಲ್ಲಿ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಕೊರೊನಾ ವೈರಸ್ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ನಾವು ಏನು ಮಾಡಬೇಕು? ನಮ್ಮ ಜವಾಬ್ದಾರಿಗಳೇನು ಎಂದು ಬೆಂಗಳೂರು ಸಿಟಿ ಪೊಲೀಸರ ಸಹಯೋಗದಲ್ಲಿ ಸಿದ್ಧಪಡಿಸಿರುವ ವಿಡಿಯೋದಲ್ಲಿ ರವಿಚಂದ್ರನ್ ತಿಳಿಸಿದ್ದಾರೆ. ಈ ಕೊರೊನಾಗೆ ತಿಥಿ ಮಾಡ್ಬೇಕು ಅಂದ್ರೆ ನೀವು ಮನೆಯಲ್ಲೇ ಇದ್ದು ಸುರಕ್ಷಿತರಾಗಿರಿ. ಸುಮ್ಮನೆ ಹೊರಬಂದು ಸೋಂಕಿಗೆ ಅತಿಥಿ ಆಗಬೇಡಿ ಎಂದು ಮಲ್ಲ ಕಿವಿ ಮಾತು ಹೇಳಿದ್ದಾರೆ.

ವಿಡಿಯೋದಲ್ಲಿ ಕ್ರೇಜಿ ಸ್ಟಾರ್ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ವಿಡಿಯೋದಲ್ಲಿ ಮನೋರಂಜನ್ ಮತ್ತು ವಿಕ್ರಂ ಕೂಡ ತಂದೆಗೆ ಸಾಥ್ ಕೊಟ್ಟಿದ್ದಾರೆ. ಕೊರೊನಾಗೆ ಬೆಂಕಿ ಹಚ್ಚಬೇಕು ಅಂದರೆ ನಿಮ್ಮನೆ ದೀಪ ಆರಬಾರದು. ಹೀಗಾಗಿ ನೀವಷ್ಟೂ ಜನ ಮನೆಯಲ್ಲಿರಬೇಕು. ದೇವಸ್ಥಾನಗಳೆಲ್ಲವೂ ಮುಚ್ಚಿದೆ ಅಂದರೆ ದೇವರು ಇಲ್ಲ ಅಂತಾನಾ? ಡಾಕ್ಟರ್ಸ್‍ಗಳಲ್ಲಿ, ನರ್ಸ್‍ಗಳಲ್ಲಿ, ಪೊಲೀಸರಲ್ಲಿ ಹಾಗೂ ಈ ಸಂದರ್ಭದಲ್ಲಿ ಸೇವೆ ಮಾಡುತ್ತಿರುವ ಪ್ರತಿಯೊಬ್ಬರಲ್ಲಿಯೂ ಆ ದೇವರು ಇದ್ದಾನೆ. ಆ ದೇವರ ಮೇಲೆ ನಿಮಗೆ ನಂಬಿಕೆ ಇದ್ದರೆ ನೀವು ಮಾಡಬೇಕಿರುವುದು ಇಷ್ಟೇ. ಅವರಷ್ಟೂ ಜನರಕ್ಕೆ ಒಂದು ಸಲ್ಯೂಟ್, ನಮಸ್ಕಾರ, ಒಂದು ಫ್ಲೈಯಿಂಗ್ ಕಿಸ್ ಕೊಟ್ಟು ಧ್ಯನವಾದ ಹೇಳಿ ಎಂದಿದ್ದಾರೆ.

ಎಷ್ಟು ಜನ್ಮವೆತ್ತಿದರೂ ನಮಗಾಗಿ ಈ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವವರ ಋಣ ತೀರಿಸಲು ಆಗೊಲ್ಲ. ಅದನ್ನು ತೀರಿಸಬೇಕು ಅಂತ ನಿಮಗೆ ಅನಿಸಿದರೆ ನೀವು ಮನೆಯಲ್ಲಿಯೇ ಇರಿ. ವೈದ್ಯರು, ಪೊಲೀಸರಿಗೆ ಕೊರೊನಾ ವಿರುದ್ಧ ಹೋರಾಡಲು ಬಿಡಿ. ನಿಮ್ಮ ಜೊತೆ ಹೋರಾಡುವುದಲ್ಲ ಪೊಲೀಸರ ಕೆಲಸವಲ್ಲ ಎಂದು ತಿಳಿ ಹೇಳಿದ್ದಾರೆ.

ಕೊರೊನಾಗೆ ತಿಥಿ ಮಾಡಬೇಕು ಅಂದರೆ ನೀವು ಅದಕ್ಕೆ ಅತಿಥಿಯಾಗಬಾರದು. ಮನುಷ್ಯನಿಗೆ ಕಷ್ಟ ಬಂದಾಗಲೇ ಆ ಪರಿಸ್ಥಿತಿಯನ್ನು ಆತ ಹೇಗೆ ನಿಭಾಯಿಸುತ್ತಾನೆ ಎನ್ನೋದರ ಮೇಲೆ ಆತನ ವ್ಯಕ್ತಿತ್ವ ಗೊತ್ತಾಗುತ್ತೆ. ಅಂತಹದೊಂದು ಪರೀಕ್ಷೆ ನಮ್ಮೆಲ್ಲರಿಗೂ ಬಂದಿದೆ. ಈ ಪರೀಕ್ಷೆಯನ್ನು ನಾವು ಪಾಸು ಮಾಡಬೇಕು ಎಂದರೆ ನೀವೆಲ್ಲರೂ ಮನೆಯಲ್ಲಿ ಇರಬೇಕು. ಸಾಮಾಜಿಕ ಅಂತರವನ್ನು ಪಾಲಿಸಬೇಕು. ಆದರೆ ಫೇಲ್ ಆಗಬೇಕು ಎಂದರೆ ನಿಮ್ಮಿ ಇಷ್ಟ. ನೀವು ಮನೆಯಿಂದ ಹೊರಗೆ ಬನ್ನಿ. ಆಗ ನಿಮಗೆ ನಿಮ್ಮ ಹೆಸರು ಕೂಡ ನೆನಪಿರೊಲ್ಲ. ಏಕೆಂದರೆ ಅದೊಂದು ಪೇಷೆಂಟ್ ನಂಬರ್ ಆಗಿಬಿಡುತ್ತದೆ. ನೀವು ಪೇಷೆಂಟ್ ಆಗಲು ಬಯಸಿದ್ದೀರಾ ಅಥವಾ ಮನೆಯಲ್ಲಿ ಪೇಷೆನ್ಸ್ ನಿಂದ ಇರಲು ಬಯಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ವಿಡಿಯೋ ಕೊನೆಯಲ್ಲಿ ಕ್ರೇಜಿ ಸ್ಟಾರ್ ಮತ್ತೊಮ್ಮೆ ಡಾಕ್ಟರ್‍ಗಳಿಗೆ, ನರ್ಸ್‍ಗಳಿಗೆ, ಪೊಲೀಸರಿಗೆ, ಅವರ ಕುಟುಂಬದವರಿಗೆ, ಸರ್ಕಾರದವರಿಗೆ ಹಾಘೂ ನಮಗಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರಿಗೂ ನಮ್ಮ ಕಡೆಯಿಂದೊಂದು ಸಲ್ಯೂಟ್ ಎಂದು ಧನ್ಯವಾದ ತಿಳಿಸಿದ್ದಾರೆ.

ಈ ವಿಡಿಯೋವನ್ನು ರವಿಚಂದ್ರನ್ ಪುತ್ರ ನಟ ಮನೋರಂಜನ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾವು ಮನೆಯಲ್ಲೇ ಉಳಿದರೆ ಮಾತ್ರ ಕೋವಿಡ್-19 ಅರೆಸ್ಟ್ ಆಗಲು ಸಾಧ್ಯ, ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ ಎಂದು ಕ್ಯಾಪ್ಷನ್ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *