ಕ್ರಿಕೆಟ್ ಬೆಟ್ಟಿಂಗ್, ಕಾರ್ಡ್ಸ್‌ ಆಡಲು ಮನೆ ಕಳ್ಳತನ ಮಾಡುತ್ತಿದ್ದ ಕ್ರೇಜಿ ಕಳ್ಳ ಅರೆಸ್ಟ್

Public TV
2 Min Read

ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕಾರ್ಡ್ಸ್‌ ಆಡಲೆಂದೇ ಮನೆ ಕಳ್ಳತನ ಮಾಡುತ್ತಿದ್ದ ಕ್ರೇಜಿ ಕಳ್ಳನೊಬ್ಬನನ್ನು ನಗರದ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸಂತೋಷ್ (30) ಬಂಧಿತ ಆರೋಪಿ. ಈ ಕಿಲಾಡಿ ಕೇಡಿ ಅರ್ಧ ಕರ್ನಾಟಕದ ಖಾಕಿಗಳಿಗೆ ಬೇಕಾಗಿದ್ದಾನೆ. ಈತನ ಮೇಲೆ ಚಿಕ್ಕಮಗಳೂರು 6, ಮಂಡ್ಯ 2, ಹಾಸನ, ತುಮಕೂರು, ಮೈಸೂರಲ್ಲಿ ತಲಾ ಒಂದು ಪ್ರಕರಣಗಳಿವೆ. ರಾಮನಗರದಲ್ಲಿ ಬರೋಬ್ಬರಿ 18 ಪ್ರಕರಣಗಳಿದ್ದು, ಆರು ತಿಂಗಳ ಹಿಂದೆ ಈತ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದನು.

BRIBE

ಆದರೂ ಸಹಿತ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದು ಶುಕ್ರವಾರ ಪೊಲೀಸರ ಅತಿಥಿಯಾಗಿದ್ದಾನೆ. ಈತ ಕೇವಲ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕಾರ್ಡ್ಸ್‌ ಆಡುವುದಕ್ಕೆ ಕಳ್ಳತನ ಮಾಡುತ್ತಿದ್ದನು. ಅವನೋಬ್ಬ ಮೋಜಿನ ಕಳ್ಳ. ಒಬ್ಬನೇ ಕಳ್ಳತನ ಮಾಡುತ್ತಿದ್ದ. ಕದ್ದ ದುಡ್ಡಲ್ಲಿ ಲಕ್ಷ-ಲಕ್ಷ ಕಾಡ್ರ್ಸ್ ಆಡುತ್ತಿದ್ದ. ಒಂದೂರಲ್ಲಿ ಕಳ್ಳತನ ಮಾಡಿದರೆ ಮತ್ತೊಂದು ಊರಲ್ಲಿ ಕಾರ್ಡ್ಸ್‌ ಆಡುತ್ತಿದ್ದ. ಬಳ್ಳಾರಿ, ರಾಯಚೂರಿನಲ್ಲಂತು ಎಲ್ಲರಿಗೂ ಈತ ಚಿರಪರಿಚಿತನಾಗಿದ್ದಾನೆ.

ಕಳ್ಳತನ ಮಾಡಲು ಈತ ಒಬ್ಬನೇ ಹೋಗುತ್ತಿದ್ದ. ತನ್ನ ಜುಪಿಟರ್ ಬೈಕಿನಲ್ಲಿ ಒಂದು ರೌಂಡ್ ಹಾಕಿ ಯಾವ ಮನೆ ಬೀಗ ಹಾಕಿದೆ ಎಂದು ನೋಡಿಕೊಳ್ಳತ್ತಿದ್ದನು. ನಂತರ ಲಾಕ್ ಮುರಿದು ಸಲೀಸಾಗಿ ಕೆಲಸ ಮುಗಿಸಿಕೊಂಡು ಅದೇ ಬೈಕಿನ ಡಿಕ್ಕಿಯಲ್ಲಿ ಎಲ್ಲಾ ತುಂಬಿಕೊಂಡು ಹೋಗುತ್ತಿದ್ದ. ಕಳೆದ ತಿಂಗಳು ನಗರದ ದಂಟರಮಕ್ಕಿ, ಮೂಗ್ತಿಹಳ್ಳಿಯಲ್ಲಿ ಕಳ್ಳತನವಾಗಿತ್ತು. ಎರಡೂ ಕಳ್ಳತನ ಶೈಲಿ ಒಂದೇ ರೀತಿಯಲ್ಲಿತ್ತು. ಪೊಲೀಸರು ಫಿಂಗರ್ ಪ್ರಿಂಟ್ ಆಧಾರದ ಮೇಲೆ ಇವನ ಟ್ರಾಕ್ ರೆಕಾರ್ಡ್ ಬೆನ್ನತ್ತಿದಾಗ ಖಾಕಿಗಳ ಕೈಗೆ ಸಿಕ್ಕಿಬಿದ್ದಿದಾನೆ. ಅದು 52 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ-ಬೆಳ್ಳಿ-ಹಣದ ಸಮೇತ.

ಸಂತೋಷ್ ರಾತ್ರಿ ಫುಲ್ ಪಾರ್ಟಿ ಮಾಡುತ್ತಿದ್ದ, ಹಗಲಲ್ಲಿ ಮಾತ್ರ ಕಳ್ಳತನ ಮಾಡುತ್ತಿದ್ದ. ಕದ್ದ ಒಡವೆಗಳನ್ನು ಪರಿಚಿತ ಮಹಿಳೆಯರನ್ನು ಪುಸಲಾಯಿಸಿ ಅವರ ಕೈನಲ್ಲಿ ಅಡಮಾನವಿಡಿಸುತ್ತಿದ್ದ. ನಾನು ಹೋದರೆ ಕಳ್ಳ ಅಂತಾರೆ. ನೀವೇ ಕದ್ದಿದ್ದೀರಾ ಅಂತಾರೆ. ನಾನು ಗ್ಯಾಂಬ್ಲಿಂಗ್ ಆಡ್ತೀನಿ. ಕಾರ್ಡ್ಸ್‌ ಆಟದಲ್ಲಿ ಸೋತು ದುಡ್ಡಿಲ್ಲ ಅಂತ ಒಡವೆ ಅಡವಿಡುತ್ತಿದ್ದೇನೆ ಎಂದು ಮಹಿಳೆಯರ ದಾರಿ ತಪ್ಪಿಸುತ್ತಿದ್ದ.

ಪ್ರಕರಣದ ಬೆನ್ನತ್ತಿದ್ದ ಕಾಫಿನಾಡ ಪೊಲೀಸರು ಇವನ ಹೆಜ್ಜೆ ಗುರುತುಗಳನ್ನ ಕಂಡು ದಂಗಾಗಿದ್ದಾರೆ. ಒಂದು ಕೇಸ್‍ನಲ್ಲಿ ಕರೆದುಕೊಂಡು ಹೋದರೆ ಮತ್ತೊಂದು ಕೇಸಲ್ಲಿ ಸಿಕ್ಕಿಬೀಳುತ್ತಿದ್ದ. ಒಂದು ಜ್ಯುವೆಲ್ಲರಿ ಶಾಪ್‍ಗೆ ಹೋದರೆ ಮತ್ತೆರಡರಲ್ಲಿ ಸಿಗುತ್ತಿದ್ದ. ಹೀಗೆ ನಗರದ ಕಳ್ಳತನ ಪ್ರಕರಣದ ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ ಐದು ಜಿಲ್ಲೆಯ 11 ಕೇಸ್‍ಗಳಲ್ಲಿ ಸಿಕ್ಕಿಬಿದ್ದಿದ್ದಾನೆ.

ಕ್ರಿಕೆಟ್ ಬೆಟ್ಟಿಂಗ್ ಆಡೋದರಲ್ಲಿ ಇವನು ಪಂಟರ್. ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ಹುಡುಗಿಯರ ಮ್ಯಾಚ್ ಯಾವುದನ್ನೂ ಬಿಡುತ್ತಿರಲಿಲ್ಲ. ಕದ್ದ ದುಡ್ಡಲ್ಲಿ ಎಲ್ಲದಕ್ಕೂ ಲಕ್ಷ-ಲಕ್ಷ ಬೆಟ್ಟಿಂಗ್ ಕಟ್ಟುತ್ತಿದ್ದನು. ಆನ್‍ಲೈನ್ ಸೈಬರ್ ಮ್ಯಾಚ್ ಕೂಡ ಬಿಡದೇ ಬೆಟ್ಟಿಂಗ್ ಆಡುತ್ತಿದ್ದ. ಮೋಜಿಗೋಸ್ಕರವೇ ಕದ್ದು ಕಂಡವರ ದುಡ್ಡಲ್ಲಿ ಮಜಾ ಮಾಡುತ್ತಿದ್ದ. ಈತನನ್ನ ಕಾಫಿನಾಡ ಪೊಲೀಸರು ಬಂಧಿಸಿ ಜೈಲಿನಲ್ಲಿ ಮುದ್ದೆ ಮುರಿಯುಲು ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *