17,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಅಟಲ್‌ ಸೇತು ರಸ್ತೆಯಲ್ಲಿ ಬಿರುಕು – ಭಾರೀ ಭ್ರಷ್ಟಾಚಾರ ಆರೋಪ; ಬಿಜೆಪಿ ತಿರುಗೇಟು

Public TV
3 Min Read

– 5 ತಿಂಗಳ ಹಿಂದೆ ಪ್ರಧಾನಿ ಮೋದಿಯಿಂದ ಚಾಲನೆಗೊಂಡಿದ್ದ ʻಅಟಲ್‌ ಸೇತುʼ

ಮುಂಬೈ: ದೇಶದ ಅತೀ ಉದ್ದದ ಸಮುದ್ರ ಸೇತುವೆ ಅಟಲ್‌ ಸೇತು (Atal Setu) ಎಂದು ಕರೆಯಲಾಗುವ ʻಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ʼನಲ್ಲಿ (MTHL) ಬಿರುಕು ಕಾಣಿಸಿಕೊಂಡಿದ್ದು, ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕಳೆದ ಐದು ತಿಂಗಳ ಹಿಂದೆಯಷ್ಟೇ ಪ್ರಧಾನಿ ಮೋದಿ (Narendra Modi) ಅಟಲ್‌ ಸೇತುಗೆ ಚಾಲನೆ ನೀಡಿದ್ದರು.

ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಾನಾ ಪಟೋಲೆ (Nana Patole), ರಸ್ತೆ ಮೇಲೆ ಸಂಚರಿಸಿ, ಬಿರುಕು ಬಿಟ್ಟ ಜಾಗವನ್ನು ತೋರಿಸಿ ರಸ್ತೆ ಸುರಕ್ಷತೆಯ ಬಗ್ಗೆ ಪರಿಶೀಲಿಸಿದ್ದಾರೆ. ಜೊತೆಗೆ ಅದರ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮರದ ಪಟ್ಟಿಯನ್ನು ಬಿರುಕಿನೊಳಗೆ ಇಳಿಸಿ, ಬಿರುಕಿನ ಆಳದ ಪ್ರಮಾಣವನ್ನು ತೋರಿಸಿದ್ದಾರೆ. ಬಳಿಕ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.

ಅಲ್‌ ಸೇತು ಉದ್ಘಾಟನೆಯಾದ ಕೆಲ ತಿಂಗಳಲ್ಲೇ ಸೇತುವೆಯ ಬಳಿ ಅರ್ಧ ಕಿಮೀ ನಷ್ಟು ರಸ್ತೆ ಬಿರುಕು ಬಿಟ್ಟಿದೆ. ನಾನು ಬರೀ ಆರೋಪ ಮಾಡುವ ಬದಲು ನಿಜವಾಗಿಯೂ ಏನಾಗಿದೆ ಎಂಬುದನ್ನು ಜನರಿಗೆ ತೋರಿಸಲು ಬಂದಿದ್ದೇನೆ. ಸರ್ಕಾರವು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತದೆ. ಆದರೆ, ಇಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ನೋಡಿ. ಸೇತುವೆ ಮೇಲಿನ ರಸ್ತೆ ಬಿರುಕು ಬಿಟ್ಟಿದೆ ಎಂದು ಪಟೋಲೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

ಅಲ್ಲದೇ ಸರ್ಕಾರವು ಜನರ ದುಡ್ಡನ್ನು ಜೇಬಿಗೆ ಇಳಿಸಿಕೊಂಡು, ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನು ಜನ ಕಿತ್ತೆಸೆಯಬೇಕು. ಸೇತುವೆಗೆ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರಿಟ್ಟಿದ್ದಾರೆ. ನಮಗೆ ಅವರ ಬಗ್ಗೆ ಗೌರವ ಇದೆ. ಆದರೆ, ಅವರ ಹೆಸರಿನ ಸೇತುವೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಮೋದಿ ಅವರು ಈ ಕುರಿತು ಗಮನಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ತಿರುಗೇಟು:
ನಾನಾ ಪಟೋಲೆ ಅವರ ಆರೋಪಕ್ಕೆ ಆಡಳಿತಾರೂಢ ಬಿಜೆಪಿ ಯೋಜನೆಯ ನೋಡಲ್ ಏಜೆನ್ಸಿಯಾಗಿರುವ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ಸ್ಪಷ್ಟನೆ ನೀಡಿದೆ. ಬಿರುಕು ಬಿಟ್ಟಿರುವುದು ಅಟಲ್‌ ಸೇತುವೆಯ ಮೇಲೆ ಅಲ್ಲ, ನವಿ ಉಲ್ವೆಯಿಂದ ಬರುವ ಸರ್ವಿಸ್‌ ರಸ್ತೆಯಲ್ಲಿ ಎಂದು ತಿಳಿಸಿದೆ. ಇದನ್ನೂ ಓದಿ: ಮೋದಿಯಿಂದ ದೇಶದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ – 2 ಗಂಟೆ ಪ್ರಯಾಣ 20 ನಿಮಿಷಕ್ಕೆ ಇಳಿಕೆ

ಇನ್ನೂ ಈ ಬಗ್ಗೆ ಸ್ಪಷನೆ ನೀಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಟಲ್‌ ಸೇತುಗೆ ಯಾವುದೇ ಅಪಾಯವಿಲ್ಲ. ಕಾಂಗ್ರೆಸ್‌ ಆರೋಪ ಸುಳ್ಳು. ಪಟೋಳೆ ಅವರು ಹಂಚಿಕೊಂಡಿರುವ ಚಿತ್ರ ಸರ್ವೀಸ್‌ ರಸ್ತೆಯದ್ದು ಎಂದು ತಿಳಿಸಿದ್ದಾರೆ.

ಇದು ಸರ್ವಿಸ್ ರಸ್ತೆ, ಇದು ಮುಖ್ಯ ಸೇತುವೆಯ ಸಂಪರ್ಕ ಭಾಗವಾಗಿದೆ. ಇವುಗಳಲ್ಲಿ ಸಣ್ಣಪುಟ್ಟ ಬಿರುಕುಗಳಾಗಿದ್ದು, ಅವುಗಳನ್ನು ದುರಸ್ತಿ ಮಾಡಲಾಗುತ್ತಿದೆ. ಇದರಿಂದಾಗಿ ಯಾವುದೇ ಸಂಚಾರ ವ್ಯತ್ಯಯ ಉಂಟಾಗಿಲ್ಲ ಎಂದು ಅಟಲ್‌ ಸೇತು ಯೋಜನೆ ಮುಖ್ಯಸ್ಥ ಕೈಲಾಶ್ ಗಣತ್ರ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರದ ಸಾಧನೆ ಹಾಡಿಹೊಗಳಿದ ರಶ್ಮಿಕಾ ಮಂದಣ್ಣಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

5 ತಿಂಗಳ ಹಿಂದೆ ಉದ್ಘಾಟನೆ:
ಕಳೆದ 5 ತಿಂಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ಸೇತುವೆಯನ್ನು ಉದ್ಘಾಟಿಸಿದ್ದರು. ನಟಿ ರಶ್ಮಿಕಾ ಮಂದಣ್ಣ ಸಹ ಈ ಸೇತುವೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈ ಸಮುದ್ರ ಸೇತುವೆಯು ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ (Mumbai To Navi Mumbai) ಸಂಪರ್ಕ ಕಲ್ಪಿಸಲಿದ್ದು, ಎರಡು ಗಂಟೆಗಳ ಪ್ರಯಾಣವನ್ನ 15-20 ನಿಮಿಷಗಳಲ್ಲಿ ತಲುಪಬಹುದಾಗಿದೆ. ರಾಜ್ಯದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಗೆ MTHL ಮತ್ತಷ್ಟು ಸಂಪರ್ಕ ಕಲ್ಪಿಸುತ್ತದೆ. 17,840 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ MTHL, 6 ಲೇನ್ ಮಾರ್ಗ ಹೊಂದಿದೆ. ಸಮುದ್ರದ ಮೇಲೆ 16.50 ಕಿಲೋಮೀಟರ್ ಮತ್ತು ಭೂಮಿಯಲ್ಲಿ 5.50 ಕಿಲೋಮೀಟರ್ ಉದ್ದವನ್ನು ಹೊಂದಿದೆ.

Share This Article