ಕುತ್ತಿಗೆ ತಿರುವಿ, ಕೊಂಬನ್ನು ಎಳೆದಾಡಿ ಕಾರ್ಕಳ ರಸ್ತೆಯಲ್ಲಿ ಗೋವು ಕಳ್ಳತನ

Public TV
2 Min Read

ಉಡುಪಿ: ಜಿಲ್ಲೆಯಲ್ಲಿ ಸದಾ ಚಾಲ್ತಿಯಲ್ಲಿರುವ ಗೋವು ಕಳ್ಳತನ ಇಂದೂ ಮುಂದುವರೆದಿದೆ. ಕಾರ್ಕಳ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರ ಗೋವು ಕಳ್ಳತನವಾಗುತ್ತಿದ್ದು ಯುಗಾದಿ ದಿನವೂ ದುಷ್ಟರ ಅಟ್ಟಹಾಸ ಮುಂದುವರಿದಿದೆ.

ಸರ್ಕಾರಕ್ಕೆ ಕಾನೂನು-ಸುವ್ಯವಸ್ಥೆಗೆ ಸವಾಲೆಸೆಯುವ ರೀತಿಯಲ್ಲಿ ರಾಜಾರೋಷವಾಗಿ ದನಕಳ್ಳತನವನ್ನು ದುಷ್ಕರ್ಮಿಗಳು ಉಡುಪಿ ಜಿಲ್ಲೆಯಲ್ಲಿ ಮುಂದುವರೆಸಿದ್ದಾರೆ. ಬೆಳಗ್ಗಿನ ಜಾವ 2.45ಕ್ಕೆ ದುಬಾರಿ ಕಾರಿನಲ್ಲಿ ಬಂದ ಗೋಕಳ್ಳರು ರಸ್ತೆ ಬದಿಯಲ್ಲಿದ್ದ ನಾಲ್ಕೈದು ದನಗಳನ್ನು ಕಳ್ಳತನ ಮಾಡಿದ್ದಾರೆ. ಈ ಪೈಕಿ ಒಂದು ದನ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಎಚ್‍ಡಿಕೆ ರಾಜಕೀಯ ಜೀವನವೇ ಒಂದು ಡ್ರಾಮಾ, ಅವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ: ಬಿಜೆಪಿ ಕಿಡಿ

ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿದ್ದ ದನಗಳಿಗೆ ಕದೀಮರು ಹಿಂಡಿ ಆಸೆ ತೋರಿಸಿದ್ದಾರೆ. ಬಕೆಟ್‍ನಲ್ಲಿ ಇದ್ದ ಹಿಂಡಿಯನ್ನು ಹಸು ತಿನ್ನುವ ಸಂದರ್ಭ ಅಮಾನುಷವಾಗಿ ಕುತ್ತಿಗೆಯನ್ನು ತಿರುವಿ, ಕೊಂಬು ಹಿಡಿದು ಎಳೆದಾಡಿ ಕಾರಿನ ಹಿಂಬದಿ ಸಿಟಿಗೆ ಹಸುವನ್ನು ತುಂಬಿಸಿದ್ದಾರೆ. ಕ್ಷಣಮಾತ್ರದಲ್ಲಿ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಉಡುಪಿ ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ಗೋ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ನಗರದಲ್ಲಿ ಎಗ್ಗಿಲ್ಲದೆ ಗೋವು ದರೋಡೆ ಪ್ರಕರಣಗಳು ನಡೆಯುತ್ತಿದ್ದರೂ, ಪೊಲೀಸರು ಈವರೆಗೆ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಬಹಳ ಸಂಶಯಕ್ಕೆ ಕಾರಣವಾಗಿದೆ.

ಮಾರಕಾಸ್ತ್ರಗಳನ್ನು ತೋರಿಸಿ, ಐಷಾರಾಮಿ ಕಾರುಗಳನ್ನು ಬಳಸಿ, ಗ್ರಾಮೀಣ ಪ್ರದೇಶದಲ್ಲಿರುವ ಮನೆಗಳಿಗೆ ಗೋಕಳ್ಳರು ದಾಳಿ ಮಾಡುತ್ತಿದ್ದಾರೆ. ಹಟ್ಟಿಗೆ ನುಗ್ಗಿ ದನಗಳನ್ನು ಕದ್ದೊಯ್ಯುತ್ತಿದ್ದಾರೆ. ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಹಲವು ಕಡೆ ಆಹೋರಾತ್ರಿ ಪ್ರತಿಭಟನೆಗಳು ನಡೆದರೂ, ಗೋ ಕಳ್ಳತನ ಮಾಡುವವರ ಬಗ್ಗೆ ನಿಖರ ಮಾಹಿತಿಯಿದ್ದರೂ ಕಠಿಣ ಕ್ರಮ ಕೈಗೊಳ್ಳದಿರುವ ದರ ಬಗ್ಗೆ ಬಲವಾದ ಸಂಶಯವಿದೆ. ರಕ್ಷಕ ವರ್ಗ ಕೂಡ ಇದರಲ್ಲಿ ಶಾಮಿಲ್ ಆಗಿರುವ ಬಗ್ಗೆ ಗುಮಾನಿ ಇದೆ ಎಂದು ಕಾರ್ಕಳದ ಹಿಂದೂಜಾಗರಣ ವೇದಿಕೆಯ ಕಾರ್ಯಕರ್ತ ಉಮೇಶ್ ಬಂಗ್ಲೆಗುಡ್ಡೆ ಹೇಳಿದ್ದಾರೆ.

ಸರ್ಕಾರ, ಮತ್ತು ಪೊಲೀಸರ ವೈಫಲ್ಯತೆಗೆ ಹಿಂದೂ ಜಾಗರಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ನಕಲಿ ನಂಬರ್ ಪ್ಲೇಟ್ ಬಳಸಿ ಕಾರಿನಲ್ಲಿ ಸಾಗಾಟವಾಗುತ್ತಿದ್ದ ದನ, ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮವಾಗಿಲ್ಲ. ಘಟನೆ ಬಗ್ಗೆ ಈವರೆಗೆ ಪ್ರಕರಣ ದಾಖಲಾಗಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಯನ್ನು ರಾಜ್ಯ ಸರ್ಕಾರ ಜಾರಿಗೆ ತಂದರೂ ಅದನ್ನು ಅನುಷ್ಠಾನ ಮಾಡದೇ ಇರುವುದು ವಿಪರ್ಯಾಸ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *