ರಾಯಚೂರಿನಲ್ಲಿ ಹಾಲು ಬದಲು ಆಲ್ಕೋಹಾಲ್ ನೀಡ್ತಿವೆ ಹಸು, ಎಮ್ಮೆಗಳು

Public TV
2 Min Read

ರಾಯಚೂರು: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ನಿಜ. ಹಸು, ಎಮ್ಮೆ ಹಾಲು ಆರೋಗ್ಯಕ್ಕೆ ಒಳ್ಳೆಯದು. ಆದರೆ ಈ ಎಮ್ಮೆ, ಆಕಳುಗಳೇ ಮದ್ಯಪಾನ ನೀಡುತ್ತಿರುವ ವಿಚಿತ್ರ ಪ್ರಕರಣವೊಂದು ರಾಯಚೂರಿನಲ್ಲಿ ನಡೆದಿದೆ.

ರಾಯಚೂರಿನ ಸಿಂಧನೂರು ತಾಲೂಕಿನ ಗಾಂಧಿನಗರ, ಸತ್ಯವತಿ ಕ್ಯಾಂಪ್, ತಾಯಮ್ಮ ಕ್ಯಾಂಪ್‍ಗಳಲ್ಲಿ ಹಸು, ಎಮ್ಮೆಗಳು ಈ ರೀತಿಯ ಹಾಲನ್ನು ಕೊಡುತ್ತಿವೆ. ಸ್ವಲ್ಪ ಮಟ್ಟಿಗೆ ಬಿಯರ್ ವಾಸನೆ, ಉಪ್ಪಿನ ರುಚಿ, ಕೊಂಚ ಹಳದಿ ಬಣ್ಣದಲ್ಲಿರುವ ಬಿಯರ್ ನೊರೆಯ ಹಾಲು ಮಕ್ಕಳ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಎನ್ನುವ ಆತಂಕ ಮೂಡಿದೆ.

ಬಿಯರ್ ತಯಾರಿಕೆಯಲ್ಲಿ ಬಳಸಿ ಕೊನೆಗೆ ಉಳಿದ ಮಡ್ಡಿ ಪದಾರ್ಥವನ್ನು ಜಾನುವಾರುಗಳಿಗೆ ತಿನ್ನಿಸುತ್ತಿರುವುದರಿಂದ ಈ ಹಾಲು ಬರುತ್ತಿದೆ. ಬಿಯರ್ ತಯಾರಿಕಾ ಕಂಪೆನಿಗಳು ಕೆಲಸಕ್ಕೆ ಬಾರದೇ ಬಿಸಾಡುತ್ತಿದ್ದ ಬಿಯರ್ ಹೊಟ್ಟನ್ನು 10 ರೂ.ಗೆ ಒಂದು ಕೆ.ಜಿಯಂತೆ ಲಾರಿಯಲ್ಲಿ ತಂದು ರೈತರಿಗೆ ಟನ್ ಗಟ್ಟಲೆ ಮಾರುತ್ತಿವೆ. ಬಿಯರ್ ಹೊಟ್ಟು ತಿಂದರೆ ಎಮ್ಮೆ ಹಸುಗಳು ಹೆಚ್ಚು ಹಾಲು ಕೊಡುತ್ತವೆ ಅಂತ ರೈತರು ಬಳಸುತ್ತಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ಬಿಯರ್ ಹೊಟ್ಟನ್ನು ಬಳಸುತ್ತಿರುವ ಗ್ರಾಮಸ್ಥರು ಜಾನುವಾರುಗಳು ಕೆಚ್ಚಲು ನಿಂತು ಹಾಲುಕೊಡದ ಸ್ಥಿತಿಗೆ ಬಂದಾಗ ತಮ್ಮ ಹಸು, ಎಮ್ಮೆಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಹೊಟ್ಟು ತಿಂದ ನಶೆಯಲ್ಲಿ ಜಾನುವಾರುಗಳು ಎರಡರಿಂದ ಮೂರು ಲೀಟರ್ ಹೆಚ್ಚು ಹಾಲು ಕೊಡುತ್ತವೆ. ಆದರೆ ಹೊಟ್ಟು ಕೊಡದಿದ್ದರೆ ಮೂರ್ನಾಲ್ಕು ದಿನ ಹಾಲನ್ನೇ ಕೊಡುವುದಿಲ್ಲ.

ಗಾಂಧಿನಗರದಲ್ಲಿ ಒಟ್ಟು ನಾಲ್ಕು ಹಾಲಿನ ಡೈರಿಗಳಿದ್ದು ಹೆಚ್ಚು ಹಾಲಿಗಾಗಿ ಡೈರಿಯವರೇ ರೈತರಿಗೆ ಬಿಯರ್ ಹೊಟ್ಟನ್ನು ನೀಡುತ್ತಿದ್ದಾರೆ. ಬಿಯರ್ ಹೊಟ್ಟಿನಿಂದ ಜಾನುವಾರುಗಳಿಗೆ ಕೀಲು ನೋವು, ಕೆಚ್ಚಲು ಕಟ್ಟದಿರುವ ಸಮಸ್ಯೆಯಂತೂ ಕಾಣಿಸಿಕೊಂಡಿದೆ. ಆದರೆ ಚಿಕ್ಕಮಕ್ಕಳು, ವಯಸ್ಕರ ಮೇಲೆ ಈ ಹಾಲು ಯಾವೆಲ್ಲಾ ಪರಿಣಾಮ ಬೀರಬಹುದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಬೀಚಪಲ್ಲಿ ಹಾಗೂ ನಂದ್ಯಾಲದಿಂದ ಈ ಬಿಯರ್ ಹೊಟ್ಟು ಬರುತ್ತಿದೆ. ಈ ಹೊಟ್ಟನ್ನು ಬಳಸುವ ರೈತರು ಆ ಹಾಲನ್ನು ತಾವು ಕುಡಿಯದೇ ನೇರವಾಗಿ ಡೈರಿಗಳಿಗೆ ಹಾಕುತ್ತಿದ್ದಾರೆ. ಸದ್ಯ ಜಿಲ್ಲಾ ಆರೋಗ್ಯ ಇಲಾಖೆ ಹಾಲಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ. ಹಾಲಿನಲ್ಲಿ ಮದ್ಯಪಾನ ಪತ್ತೆಯಾದರೆ ನಿಜಕ್ಕೂ ಈ ಬಿಯರ್ ಹಾಲು ಡೆಂಜರಸ್ ಎನ್ನುವುದು ಸಾಬೀತಾಗುತ್ತದೆ. ಸದ್ಯಕ್ಕಂತೂ ವೈದ್ಯರಿಗೆ ಈ ಬೀಯರ್ ಹಾಲು ಸವಾಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *