ಬೆಂಗ್ಳೂರಿನ ಗರ್ಭಿಣಿಗೆ ಕೊರೊನಾ ಇಲ್ಲ, ಫಲಿತಾಂಶ ನೆಗೆಟಿವ್ – ಎಡವಟ್ ಆಗಿದ್ದು ಎಲ್ಲಿ?

Public TV
1 Min Read

ಬೆಂಗಳೂರು: ಬಿಟಿಎಂ ಲೇಔಟ್ ನ ಕೊರೊನಾ ಪಾಸಿಟಿವ್ ಸೋಂಕಿತೆ ಎಂದು ಬಿಂಬಿಸಲಾಗಿದ್ದ ಗರ್ಭಿಣಿ ಶೀಘ್ರವೇ ಡಿಸ್ಚಾರ್ಜ್ ಆಗಲಿದ್ದಾರೆ.

ಖಾಸಗಿ ಲ್ಯಾಬ್ ನಲ್ಲಿ ಗರ್ಭಿಣಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅಲ್ಲಿ ಸ್ಯಾಂಪಲ್ ಪರೀಕ್ಷೆಯ ವೇಳೆ ತಪ್ಪಾಗಿದೆ  ಎಂಬ ಮಾಹಿತಿ ಸಿಕ್ಕಿತ್ತು. ಆದಾದ ಬಳಿಕ ಎರಡನೇ ಪರೀಕ್ಷೆಯ ಮಾದರಿಯನ್ನು ಕಾಯದೇ ಏಕಾಏಕಿ ಆಡ್ಮಿಟ್ ಮಾಡಿಕೊಳ್ಳಲಾಗಿತ್ತು. ಈ ಮಧ್ಯೆ ವೈದ್ಯರು ಈ ಮಾಹಿತಿಯನ್ನು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ ಪರಿಣಾಮ ಸರ್ಕಾರ ಅಧಿಕೃತವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ಗರ್ಭಿಣಿಗೆ ಸೋಂಕು ತಗಲಿರುವುದನ್ನು ದೃಢಪಡಿಸಿತ್ತು.

ಇಂದು ಗರ್ಭಿಣಿಯ ಪರೀಕ್ಷಾ ವರದಿ ಬಂದಿದ್ದು ಫಲಿತಾಂಶ ನೆಗೆಟಿವ್ ಬಂದಿದೆ. ನಂತರ ಪಾಸಿಟಿವ್ ಎಂದು ಘೋಷಣೆ ಮಾಡಲು ಯಾವೆಲ್ಲ ಮಾನದಂಡಗಳನ್ನು ಪರಿಗಣಿಸಲಾಗಿದೆ ಎಂದು ಅವಲೋಕನ ಮಾಡಿದಾಗ ಖಾಸಗಿ ಲ್ಯಾಬ್ ಮಾದರಿಯನ್ನು ಪರಿಗಣಿಸಿಯೇ ಅಂತಿಮ ತೀರ್ಮಾನಕ್ಕೆ ಬಂದಿರುವ ವಿಚಾರ ಗೊತ್ತಾಗಿದೆ.

ಈಗ ಗರ್ಭಿಣಿಯನ್ನು ಡಿಸ್ಚಾರ್ಜ್ ಮಾಡಲು ರೆಡಿ ಮಾಡುತ್ತಿದ್ದೇವೆ. ಆಕೆ ಮುಂದೆ ಖಾಸಗಿ ಆಸ್ಪತ್ರೆಗೆ ಹೋಗಬಹುದು. ಅಲ್ಲೇ ಡೆಲಿವರಿ ಮಾಡಿಸಿಕೊಳ್ಳಬಹುದು ಎಂದು ಆರೋಗ್ಯ ಅಧಿಕಾರಿ ಶ್ರೀನಿವಾಸ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಸೋಂಕು ಇಲ್ಲದ ವ್ಯಕ್ತಿಗೆ ಸೋಂಕು ಇದೆ ಎಂದು ಹೇಳಿದ ಈ ಪ್ರಕರಣದಿಂದ ಆರೋಗ್ಯ ಇಲಾಖೆಗೆ ಹಿನ್ನೆಡೆಯಾಗಿದೆ

ಬಿಟಿಎಂ ಲೇಔಟ್‍ನ ಗರ್ಭಿಣಿ ಜಯನಗರದ ಪ್ರಸಿದ್ಧ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ವೈದ್ಯರು ಮೇ 9ರಂದು ಹೆರಿಗೆ ಆಗಬಹುದು ಎಂದು ತಿಳಿಸಿದ್ದರು. ಗರ್ಭಿಣಿ ತಪಾಸಣೆ ವೇಳೆ ವೈದ್ಯರು ವೈಯಕ್ತಿಕ ಸುರಕ್ಷಿತ ಸಾಧನವನ್ನು ಬಳಸಿದ್ದರು. ಈ ಗರ್ಭಿಣಿಗೆ ವಿದೇಶ ಸಂಪರ್ಕ ಅಥವಾ ಸೋಂಕಿತರ ಜೊತೆಗೆ ಯಾವುದೇ ಸಂರ್ಪಕ ಇರಲಿಲ್ಲ. ಆದರೂ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿತ್ತು. ಗರ್ಭಿಣಿ ಜೊತೆ ನೇರ ಸಂಪರ್ಕ ಹೊಂದಿದ್ದ 6 ಮಂದಿ ಮತ್ತು ಪರೋಕ್ಷ ಸಂಪರ್ಕ ಹೊಂದಿದ್ದ 12 ಮಂದಿಯನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *