ಮತ್ತೊಂದು ಪಾಸಿಟಿವ್ – ದುಬೈನಿಂದ ಬಂದ ಬೆಂಗ್ಳೂರಿನ ಮಹಿಳೆಗೆ ಕೊರೊನಾ

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಕೊರೊನಾ ಕೇಸ್ ದೃಢಪಟ್ಟಿದೆ. 67 ವರ್ಷದ ಬೆಂಗಳೂರಿನ ಮಹಿಳೆಗೆ ಕೊರೊನಾ ಬಂದಿದೆ.

ಇಂದು ಸಂಜೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಿ, ಓರ್ವ ಮಹಿಳೆಗೆ ಕೊರೊನಾ ಬಂದಿರುವುದು ದೃಢಪಟ್ಟಿದೆ. ಇಂದು 32 ಜನ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಎಸಿ ಇರುವ ಕೊಠಡಿಗಳಲ್ಲಿ ವೈರಸ್ ಪೀಡಿತರು ಇದ್ದರೆ ಬಹಳ ವೇಗವಾಗಿ ಕೊರೊನಾ ಹರಡುತ್ತಿದೆ. ಹೀಗಾಗಿ ಎಲ್ಲ ರೆಸ್ಟೋರೆಂಟ್ ಗಳು ಎಸಿ ಆಫ್ ಮಾಡುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆ ಕುರ್ಚಿಗಳ ನಡುವೆ 1 ಮೀಟರ್ ಅಂತರ ಇರಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಜನಸಂದಣಿ ಆದಷ್ಟು ಕಡಿಮೆಯಾಗಬೇಕು. ದಂತ ಚಿಕಿತ್ಸಾಲಯಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಬೇಕು. ಇದು ತೀರ ತುರ್ತು ಚಿಕಿತ್ಸೆ ಅಲ್ಲ. ಹೀಗಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯ ದಂತ ಚಿಕಿತ್ಸಾಲಯವನ್ನು ಮಾರ್ಚ್ 30ರವರೆಗೆ ಸ್ಥಗಿತ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮೊದಲ ಕೇಸ್ ಆಗಿ ದಾಖಲಾಗಿದ್ದ ಡೆಲ್ ಕಂಪನಿಯ ಟೆಕ್ಕಿಯ ಕುಟುಂಬದ ಬಗ್ಗೆ ಮಾತನಾಡಿ, ವ್ಯಕ್ತಿ ಅವರ ಹೆಂಡತಿ ಹಾಗೂ ಮಗು ಈಗ ಗುಣಮುಖರಾಗಿದ್ದಾರೆ. ಆದರೆ ಡಿಸ್ಚಾರ್ಜ್ ಆಗಲು ಕೆಲ ಶಿಷ್ಟಾಚಾರಗಳನ್ನು ಪಾಲನೆ ಮಾಡಬೇಕು. 24 ಗಂಟೆಯ ಒಳಗೆ ಎರಡು ಬಾರಿ ಪರೀಕ್ಷೆ ಮಾಡಿ ಆಗ ನೆಗೆಟಿವ್ ಬಂದರೆ ಮಾತ್ರ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ವಿವರಿಸಿದರು.

ಕರ್ನಾಟಕದ 11ನೇ ಕೇಸ್ ಆಗಿರುವ 67 ವರ್ಷ ವಯಸ್ಸಿನ ಬೆಂಗಳೂರಿನ ಮಹಿಳಾ ರೋಗಿ ದುಬೈಯಿಂದ ಗೋವಾ ಮೂಲಕ ಮಾರ್ಚ್ 9 ರಂದು ಮರಳಿದ್ದರು. ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ ಹೊಸದಾಗಿ 3 ಕೇಸ್ ದೃಢಪಟ್ಟಿದ್ದು ಕಲಬುರಗಿಯ ಮೃತ ವ್ಯಕ್ತಿ ಸೇರಿ ಕೊರೊನಾ ಪೀಡಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಕೇಸ್ 8: ಕೊರೊನಾ ಪೀಡಿತ ಮೈಂಡ್ ಟ್ರೀ ಟೆಕ್ಕಿ ಜೊತೆ ಅಮೆರಿಕಕ್ಕೆ ತೆರಳಿದ್ದ 32 ವರ್ಷ ವಯಸ್ಸಿನ ಸಹೋದ್ಯೋಗಿ ಮಾರ್ಚ್ 8 ರಂದು ಲಂಡನ್ ಮೂಲಕ ಬೆಂಗಳೂರಿಗೆ ಬಂದಿದ್ದ. ಈತನ ಆರೋಗ್ಯ ಸ್ಥಿರವಾಗಿದೆ. ಈತನ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 50 ಮಂದಿಯನ್ನು ಪತ್ತೆ ಮಾಡಲಾಗಿದ್ದು ಅವರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ. ಅವರೆಲ್ಲರನ್ನೂ ಕಡ್ಡಾಯವಾಗಿ ಅವರ ಮನೆಗಳಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.

ಕೇಸ್ 9: ಕೊರೊನಾದಿಂದ ಮೃತಪಟ್ಟ ಕಲಬುರಗಿಯ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ 63 ವರ್ಷದ ವೈದ್ಯರಿಗೆ ವೈರಸ್ ಬಂದಿದೆ. ಈ ವೈದ್ಯರ ಸಂಪರ್ಕಕ್ಕೆ 50 ಮಂದಿ ಮತ್ತು ಮನೆಯ 7 ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಯಾವುದೇ ಲಕ್ಷಣ ಕಂಡು ಬಂದಿಲ್ಲ. ಎಲ್ಲರು ಮನೆಯಲ್ಲಿ ಕಡ್ಡಾಯವಾಗಿ ಪ್ರತ್ಯೇಕವಾಗಿದ್ದಾರೆ.

ಕೇಸ್ 10: 20 ವರ್ಷ ವಿದ್ಯಾರ್ಥಿನಿ ಲಂಡನ್‍ನಿಂದ ಮಾರ್ಚ್ 14 ರಂದು ಬೆಂಗಳೂರಿಗೆ ಬಂದಿದ್ದಾಳೆ. ಈಕೆಯ ಸಂಪರ್ಕಕ್ಕೆ ಬಂದ 5 ಮಂದಿಯನ್ನು ಪತ್ತೆ ಮಾಡಿ ಪರೀಕ್ಷಿಸಲಾಗಿದೆ.

ಇಂದು ಬೆಂಗಳೂರಿನಲ್ಲಿ 14 ಮಂದಿ, ದಕ್ಷಿಣ ಕನ್ನಡದಲ್ಲಿ 7, ಉತ್ತರ ಕನ್ನಡದಲ್ಲಿ 4, ಕೊಡಗಿನಲ್ಲಿ 2, ಬಳ್ಳಾರಿ, ಚಿಕ್ಕಮಗಳೂರು, ಕೊಡಗು, ಉಡುಪಿ, ಬೀದರ್, ಗದಗ್, ಉಡುಪಿಯಲ್ಲಿ ಒಬ್ಬರು ಒಳ ರೋಗಿಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 58 ಮಂದಿ ಪ್ರತ್ಯೇಕ ನಿಗಾದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *