ಧಾರಾವಿ ಸ್ಲಂನಲ್ಲಿ ಕೊರೊನಾ ನಿಯಂತ್ರಣ ಅಸಾಧ್ಯ ಯಾಕೆ? ಜನಸಾಂದ್ರತೆ ಎಷ್ಟಿದೆ?

Public TV
1 Min Read

ಮುಂಬೈ: ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತರು ಇರುವ ಮಹಾರಾಷ್ಟ್ರಕ್ಕೆ ಧಾರಾವಿ ಸ್ಲಂನಲ್ಲಿ ಕೊರೊನಾ ನಿಯಂತ್ರಿಸುವುದು ದೊಡ್ಡ ತಲೆನೋವಾಗಿದೆ.

ಹೌದು. ಶನಿವಾರ 80 ವರ್ಷದ ವ್ಯಕ್ತಿ ಮೃತಪಟ್ಟಿದ್ದು ಇಲ್ಲಿಯವರೆಗೆ ಈ ಸ್ಲಂನಲ್ಲಿ ಒಟ್ಟು 4 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ 11 ಮಂದಿಗೆ ಪಾಸಿಟಿವ್ ಬಂದಿದ್ದು, ಒಟ್ಟು 28 ಜನರಿಗೆ ಸೋಂಕು ಬಂದಿದೆ.

ಸೋಂಕು ಪೀಡಿತರ ಪೈಕಿ ಹಲವು ಮಂದಿ ಪ್ರಯಾಣದ ಮಾಹಿತಿಯನ್ನು ಸರಿಯಾಗಿ ನೀಡುತ್ತಿಲ್ಲ. ಅಷ್ಟೇ ಅಲ್ಲದೇ ನಿವಾಸಿಗಳು ಲಾಕ್‍ಡೌನ್ ನಿಯಮವನ್ನು ಸರಿಯಾಗಿ ಪಾಲನೆ ಮಾಡದೇ ಇರುವುದು ಸರ್ಕಾರಕ್ಕೆ ದೊಡ್ಡ ಸಮಸ್ಯೆ ತಂದಿದೆ.

ಯಾಕೆ ಸಮಸ್ಯೆ?
ಏಷ್ಯಾದ ಅತಿ ದೊಡ್ಡ ಸ್ಲಂ ಎನಿಸಿಕೊಂಡಿರುವ ಧಾರಾವಿಯಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಮಹಾರಾಷ್ಟ್ರದ ಒಟ್ಟು ಜನ ಸಂಖ್ಯೆ 11.24 ಕೋಟಿ ಇದ್ದರೆ ಜನಸಾಂದ್ರತೆ(ಪ್ರತಿ ಚದರ ಕಿ.ಮೀ.ಗೆ ಇರುವ ಜನಸಂಖ್ಯೆ) 365 ಇದೆ. ಗ್ರೇಟರ್ ಮುಂಬೈಯ ಒಟ್ಟು ಜನಸಂಖ್ಯೆ 1.24 ಕೋಟಿ ಇದ್ದರೆ ಜನ ಸಾಂದ್ರತೆ 28,426 ಇದೆ.

ಸದ್ಯ ಭಾರತದ ಕೊರೊನಾ ಹಾಟ್‍ಸ್ಪಾಟ್ ಗಳಲ್ಲಿ ಒಂದಾದ ಧಾರಾವಿ ಸ್ಲಂನಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದರೆ ಜನ ಸಾಂದ್ರತೆ 3,33,333 ಇದೆ. ಗುಂಪು ಸೇರದೇ ಅಂತರ ಕಾಯ್ದುಕೊಳ್ಳುವುದೆ ಕೊರೊನಾ ನಿವಾರಣೆಗೆ ಇರುವ ಏಕೈಕ ಕ್ರಮ. ಹೀಗಿರುವಾಗ ಧಾರಾವಿ ಸ್ಲಂನಲ್ಲಿ ಇದು ಯಶಸ್ವಿಯಾಗುತ್ತಾ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಮುಂದಿನ ಎರಡು ವಾರದಲ್ಲಿ ಧಾರಾವಿಯ ಸುಮಾರು 7 ಲಕ್ಷ ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಒಟ್ಟು 1,666 ಮಂದಿಗೆ ಕೊರೊನಾ ಬಂದಿದ್ದು, 110 ಮಂದಿ ಮೃತಪಟ್ಟಿದ್ದಾರೆ. 1,368 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 188 ಮಂದಿ ಗುಣಮುಖರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *