ಇದ್ದಕ್ಕಿದ್ದಂತೆ ಕಿರುಚಿ, ಹಲ್ಲೆ ನಡೆಸಿದ್ರು- ಮೊರಾದಾಬಾದ್ ದಾಳಿ ವಿವರಿಸಿದ ಸಂತ್ರಸ್ತ ವೈದ್ಯ

Public TV
2 Min Read

– ಟೆರೇಸ್‍ ಮೇಲಿಂದ ಕಲ್ಲು ಎಸೆದಿದ್ದ ಮಹಿಳೆಯರು
– 7 ಜನ ಮಹಿಳೆಯರು ಸೇರಿದಂತೆ 17 ಮಂದಿ ಅರೆಸ್ಟ್

ಲಕ್ನೋ: ಮೊರಾದಾಬಾದ್‍ನಲ್ಲಿ ನಡೆದ ಭೀಕರ ದಾಳಿಯಲ್ಲಿ ಗಾಯಗೊಂಡ ವೈದ್ಯಕೀಯ ತಂಡದ ಸದಸ್ಯರಲ್ಲಿ ಒಬ್ಬರಾದ ಡಾ.ಎಸ್.ಸಿ.ಅಗರ್ವಾಲ್ ಚೇತರಿಸಿಕೊಂಡಿದ್ದು, ತಮ್ಮ ಮೇಲೆ ನಡೆದ ಹಲ್ಲೆಯನ್ನು ವಿವರಿಸಿದ್ದಾರೆ.

”ಸರ್ತಾಜ್ ಎಂಬ ಕೊರೊನಾ ವೈರಸ್ ಪಾಸಿಟಿವ್ ರೋಗಿ ಮೃತಪಟ್ಟಿದ್ದ. ಹೀಗಾಗಿ ತಕ್ಷಣವೇ ಆತನೊಂದಿಗೆ ನೇರ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‍ನಲ್ಲಿ ಇರಿಸಬೇಕಿತ್ತು. ಆದ್ದರಿಂದ ಮೊದಲ ದಿನ ಮೃತ ರೋಗಿಯ ಪತ್ನಿ ಮತ್ತು ಹಿರಿಯ ಮಗನನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಯಿತು. ಆದರೆ ಇಬ್ಬರು ಚಿಕ್ಕ ಮಕ್ಕಳು ಮೃತ ವ್ಯಕ್ತಿಯ ತಮ್ಮನ ಮನೆಯಲ್ಲಿದ್ದರು. ಹೀಗಾಗಿ ಮರುದಿನ ಅಂದ್ರೆ ಏಪ್ರಿಲ್ 15ರಂದು ಮಕ್ಕಳಿದ್ದ ಮನೆಗೆ ಹೋಗಿದ್ದೆವು. ಈ ವೇಳೆ ಅವರೊಂದಿಗೆ ಮಾತನಾಡಿ, ವಿಶ್ವಾಸದಿಂದ ಕರೆದೊಯ್ಯಲು ಅಂಬುಲೆನ್ಸ್‌ಗೆ ಕರೆ ಮಾಡಿದ್ವಿ ಎಂದು ಎಂದು ಅಗರ್ವಾಲ್ ಹೇಳಿದರು.

ನಗರದಲ್ಲಿ ವಾಹನ ಸಂಚಾರ ಇಲ್ಲದೆ ಇರುವುದರಿಂದ ಅಂಬುಲೆನ್ಸ್ ಸ್ಥಳಕ್ಕೆ ಅರ್ಧ ಗಂಟೆಯಲ್ಲಿ ಬಂದಿತ್ತು. ಆದರೆ ಮೃತ ಕೊರೊವಾ ವೈರಸ್ ರೋಗಿಯ ಸಂಬಂಧಿಕರನ್ನು ಅಂಬುಲೆನ್ಸ್‌ನಲ್ಲಿ ಕುಳಿತುಕೊಳ್ಳುವಂತೆ ಕೇಳಿಕೊಂಡೆವು. ಈ ವೇಳೆ ಟೆರೇಸ್‍ನಲ್ಲಿದ್ದ ಕೆಲ ಮಹಿಳೆಯರು ಇದ್ದಕ್ಕಿದ್ದಂತೆ ಕಿರುಚಿ, ಅಂಬುಲೆನ್ಸ್‌ ಮೇಲೆ ಕಲ್ಲು ತೂರಲು ಆರಂಭಿಸಿದರು ಎಂದು ತಿಳಿಸಿದರು.

ಕಾಲುದಾರಿಗಳಲ್ಲಿ ಒಂದು ದೊಡ್ಡ ಗುಂಪು ಜಮಾಯಿಸಿತ್ತು. ಹೀಗಾಗಿ ರಕ್ಷಣೆಗಾಗಿ ನಾವು ಪೊಲೀಸರಿಗೆ ಮಾಹಿತಿ ನೀಡಿದ್ವಿ. ಹೀಗಾಗಿ 6-7 ಜನ ಪೊಲೀಸರು ಶೀಘ್ರವೇ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಭರವಸೆ ನೀಡಿದರು. ಪೊಲೀಸರು ಪರಿಸ್ಥಿತಿಯನ್ನು ಪರಿಶೀಲಿಸುವಾಗ, ಸ್ಥಳದಲ್ಲಿ ಜಮಾಯಿಸಿದ್ದ ಗುಂಪು ಗೋ ಬ್ಯಾಕ್.. ಗೋ ಬ್ಯಾಕ್ ಎಂದು ಕೂಗಲು ಆರಂಭಿಸಿತು. ಅಷ್ಟೇ ಅಲ್ಲದೆ ಆರೋಗ್ಯ ಇಲಾಖೆ ಸಿಬ್ಬಂದಿ ನಮ್ಮನ್ನು ಕರೆದೊಯ್ದು ಹಿಂಸೆ ನೀಡುತ್ತಾರೆ, ಊಟ ಕೊಡುವುದಿಲ್ಲ. ಕೊರೊನಾ ಸೋಂಕಿನ ಚುಚ್ಚುಮದ್ದು ನೀಡುತ್ತಾರೆ. ಅಂತಿಮವಾಗಿ ಅದು ನಮ್ಮನ್ನು ಕೊಲ್ಲುತ್ತದೆ ಎಂದು ಕೂಗಲು ಪ್ರಾರಂಭಿಸಿದರು ಎಂದು ಅಗರ್ವಾಲ್ ಘಟನೆ ವಿವರಿಸಿದ್ದಾರೆ.

”ಇದ್ದಕ್ಕಿದ್ದಂತೆ ಗುಂಪೊಂದು, ಅವರಿಗೆ ಹೊಡೆಯಿರಿ, ಅವರನ್ನು ಹೊಡೆಯಿರಿ ಎಂದು ಕೂಗಲು ಪ್ರಾರಂಭಿಸಿತು. ಈ ವೇಳೆ ಮೃತ ರೋಗಿಯ ನಾಲ್ವರು ಸಂಬಂಧಿಕರು ತಪ್ಪಿಸಿಕೊಂಡರು. ಇತ್ತ ಗುಂಪು ಅಂಬುಲೆನ್ಸ್ ಅನ್ನು ಧ್ವಂಸ ಮಾಡಲು ಪ್ರಾರಂಭಿಸಿತು. ಅಂಬುಲೆನ್ಸ್ ಚಾಲಕ ಮತ್ತು ಓರ್ವ ವೈದ್ಯಕೀಯ ಸಿಬ್ಬಂದಿ ಅಂಬುಲೆನ್ಸ್ ಒಳಗೆ ಹೋಗಲು ಯಶಸ್ವಿಯಾದರು. ಆದರೆ ಒಂದು ದೊಡ್ಡ ಕಲ್ಲು ನನ್ನ ಮುಖದ ಮೇಲೆ ಬಿತ್ತು. ಬಲವಾದ ಹೊಡೆತ ಬಿದ್ದಿದ್ದರಿಂದ ಕೆಳಗೆ ಬಿದ್ದೆ. ಆಗ ಎದ್ದು ನಡೆಯಲು ಪ್ರಾರಂಭಿಸಿದಾಗ ಕೆಲವರು ಕೋಲಿನಿಂದ ತಲೆಗೆ ಹೊಡೆದರು. ಅದೇ ಸಮಯದಲ್ಲಿ ಮಹಿಳೆಯರು ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದರು” ಎಂದು ತಿಳಿಸಿದರು. ಈ ಮೂಲಕ ಇದೊಂದು ಯೋಜಿತ ಹಲ್ಲೆ ಎಂಬ ಅಭಿಪ್ರಾಯವನ್ನು ಪರೋಕ್ಷವಾಗಿ ಅಗರ್ವಾಲ್ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಬುಧವಾರ ನಡೆದಿದ್ದು, ಗುರುವಾರ ಬೆಳಗ್ಗೆ ಉತ್ತರ ಪ್ರದೇಶದ ಪೊಲೀಸರು ಏಳು ಮಹಿಳೆಯರು ಸೇರಿದಂತೆ 17 ಮಂದಿಯನ್ನು ಬಂಧಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‍ಎಸ್‍ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವೊಂದು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Share This Article
Leave a Comment

Leave a Reply

Your email address will not be published. Required fields are marked *