24 ಗಂಟೆಗಳಲ್ಲಿ 549 ಮಂದಿಗೆ ಸೋಂಕು, 17 ಜನ ಸಾವು

Public TV
2 Min Read

– ಪಿಪಿಇ ಲಭ್ಯತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ

ನವದೆಹಲಿ: ಕೋವಿಡ್-19 ಚಿಕಿತ್ಸೆ ನೀಡಲು ಅಗತ್ಯವಿರುವ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಲಭ್ಯತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಆದರೆ ಇವುಗಳನ್ನು ಸರಿಯಾಗಿ ಬಳಸಬೇಕು ಎಂದು ಒತ್ತಿ ಹೇಳಿದೆ.

ದೆಹಲಿಯಲ್ಲಿ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗ್ರವಾಲ್, ಕಳೆದ 24 ಗಂಟೆಗಳಲ್ಲಿ 549 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ 17 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 166ಕ್ಕೆ ಏರಿಕೆ ಕಂಡಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 5734 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 473 ಜನರು ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದರು.

ಹರ್ಯಾಣದ ಕರ್ನಾಲ್‍ನಲ್ಲಿ ‘ಅಡಾಪ್ಟ್ ಎ ಫ್ಯಾಮಿಲಿ’ ಅಭಿಯಾನದಡಿ 13,000 ನಿರ್ಗತಿಕ ಕುಟುಂಬಗಳಿಗೆ 64 ಲಕ್ಷ ರೂ.ಗಳ ಸಹಾಯ ನೀಡಲಾಗುತ್ತಿದೆ. ಪಿಪಿಇ (ವೈಯಕ್ತಿಕ ರಕ್ಷಣಾ ಸಲಕರಣೆ), ಮಾಸ್ಕ್ ಮತ್ತು ವೆಂಟಿಲೇಟರ್ ಗಳ ಸರಬರಾಜು ಈಗ ಪ್ರಾರಂಭವಾಗಿದೆ. ಭಾರತದಲ್ಲಿ 20 ದೇಶೀಯ ತಯಾರಕರನ್ನು ಪಿಪಿಇಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ. 1.7 ಕೋಟಿ ಪಿಪಿಇಗಳಿಗೆ ಆದೇಶಗಳನ್ನು ನೀಡಲಾಗಿದೆ ಮತ್ತು ಸರಬರಾಜು ಪ್ರಾರಂಭವಾಗಿದೆ. 49,000 ವೆಂಟಿಲೇಟರ್ ಗಳಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ರೈಲ್ವೆ ಇಲಾಖೆ 2,500ಕ್ಕೂ ಹೆಚ್ಚು ವೈದ್ಯರನ್ನು ಮತ್ತು 35,000 ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದೆ. ಅವರ 586 ಆರೋಗ್ಯ ಘಟಕಗಳು, 45 ಉಪ ವಿಭಾಗೀಯ ಆಸ್ಪತ್ರೆಗಳು, 56 ವಿಭಾಗೀಯ ಆಸ್ಪತ್ರೆಗಳು, 8 ಉತ್ಪಾದನಾ ಘಟಕ ಆಸ್ಪತ್ರೆಗಳು ಮತ್ತು 16 ವಲಯ ಆಸ್ಪತ್ರೆಗಳು ತಮ್ಮ ಮಹತ್ವದ ಸೌಲಭ್ಯಗಳೊಂದಿಗೆ ಕೋವಿಡ್-19 ವಿರುದ್ಧ ಹೋರಾಡಲು ಸಿದ್ಧವಾಗಿದೆ ಎಂದು ಲಾವ್ ಅಗರ್‍ವಾಲ್ ಮಾಹಿತಿ ನೀಡಿದ್ದಾರೆ.

80,000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ 5,000 ಬೋಗಿಗಳನ್ನು ಪ್ರತ್ಯೇಕ ಘಟಕಗಳಾಗಿ ಪರಿವರ್ತಿಸುತ್ತಿದೆ. ಅದರಲ್ಲಿ 3,250 ಅನ್ನು ಬೆಡ್‍ಗಳಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಧಿಕಾರಿ ಮಾತನಾಡಿ, ಈವರೆಗೆ 1,30,000 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 5,734 ಮಾದರಿಗಳಲ್ಲಿ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತರ ಸಂಖ್ಯೆ ಕಳೆದ 1ರಿಂದ 1.5 ತಿಂಗಳುಗಳಲ್ಲಿ ಶೇ.3ರಿಂದ 5ರ ನಡುವೆ ಇದೆ. ಇದು ಗಣನೀಯವಾಗಿ ಹೆಚ್ಚಿಲ್ಲ ಎಂದು ತಿಳಿಸುತ್ತದೆ. ಬುಧವಾರ ನಾವು 13,143 ಮಾದರಿಗಳನ್ನು ಪರೀಕ್ಷಿಸಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *