ಬೆಂಗಳೂರು: ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ(Vinay Kulkarni) ಭವಿಷ್ಯ ಇಂದು ನಿರ್ಧಾರ ಆಗಲಿದೆ. 2016ರಲ್ಲಿ ನಡೆದಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‌ಗೌಡ (Yogesh Gowda) ಕೊಲೆ ಪ್ರಕರಣದ ಆರೋಪಿಯಾಗಿರುವ 21 ಜನರ ಭವಿಷ್ಯವನ್ನು ಇಂದು ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ನಿರ್ಧಾರ ಮಾಡಲಿದೆ.
2016ರಲ್ಲಿ ಕೊಲೆ ನಡೆದಾಗ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೇ ಯೋಗಿಶ್ ಗೌಡ ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ದಿದ್ದರಿಂದ ಹೈಪ್ರ‍್ರೊಫೈಲ್ ಕೇಸ್ ಆಗಿತ್ತು. ಈ ಕೊಲೆಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ವಿನಯ್ ಕುಲಕರ್ಣಿ ಹೆಸರು ಬಂದಿದ್ದರಿಂದ ಮತ್ತಷ್ಟು ಸಂಚಲನ ಮೂಡಿಸಿತ್ತು.
ಈ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಎ-15 ಆಗಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿಗಳು ಕೂಡಾ ಇದರಲ್ಲಿ ತಳಕು ಹಾಕಿಕೊಂಡಿದ್ದಾರೆ. ಇನ್ನು ಈ ಕೊಲೆ ನಡೆದಿದ್ದಾದರೂ ಏಕೆ ಎನ್ನುವುದಕ್ಕೆ ಸಿಬಿಐ ಹಲವು ಸಾಕ್ಷಿ ನ್ಯಾಯಾಲಯದ ಮುಂದೆ ಇಟ್ಟಿದೆ.
ಕೊಲೆಯಾಗಿದ್ದು ಯಾಕೆ?
2016ರ ಜೂನ್ 15ರಂದು ಧಾರವಾಡ ಸಪ್ತಾಪೂರ ಜಿಮ್ ನಲ್ಲಿ ಯೋಗಿಶಗೌಡ ಕೊಲೆ ನಡೆದಾಗ ಆಗಷ್ಟೇ ಅವರು ಜಿಲ್ಲಾ ಪಂಚಾಯತ್ ಸದಸ್ಯ ಆಗಿದ್ದರು. ಯೋಗೇಶ್‌ಗೌಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಟ್ಟ ಏರಲು ವಿನಯ್ ಕುಲಕರ್ಣಿ ಕಾರಣವಾಗಿದ್ದರು.
ಒಪ್ಪಂದದಂತೆ ಒಂದು ವರ್ಷದ ಬಳಿಕ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಿತ್ತು. ಅದರೆ ಅಧಿಕಾರ ಹಸ್ತಾಂತರ ಮಾಡದ್ದು ವಿನಯಕ್ ಕುಲಕರ್ಣಿ ಸಿಟ್ಟಿಗೆ ಕಾರಣವಾಗಿತ್ತು.
ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸ್ಥಾನಕ್ಕೆ ಯೋಗೇಶ್ ಗೌಡ ನಿಂತಾಗ ಎಲೆಕ್ಷನ್ ನಡೆಯಬೇಕಿದ್ದ ದಿನವೇ ಅವರನ್ನು ಬಂಧಿಸಲಾಗಿತ್ತು. ಪಿಎಸ್‌ಐ ಮೇಲೆ ಹಲ್ಲೆ ಎಸಗಿದ ಆರೋಪದ ಅಡಿ ಅವರನ್ನು ಬಂಧಿಸಲಾಗಿತ್ತು. ಹೀಗಿದ್ದರೂ ಜೈಲಿನಲ್ಲಿದ್ದಾಗಲೇ ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ದಿದ್ದರು. ಇದು ರಾಜಕೀಯ ದ್ವೇಷಕ್ಕೆ ಕಾರಣವಾಗಿತ್ತು.
ಚುನಾವಣೆಯಲ್ಲಿ ಗೆದ್ದು ಬಂದ ನಂತರ 2016ರ ಏಪ್ರಿಲ್‌ನಲ್ಲಿ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ವಿನಯ ಕುಲಕರ್ಣಿ ಅವರ ಜೊತೆ ಮಾತಿನ ಚಕಮಕಿ ಕೂಡಾ ನಡೆದಿತ್ತು. ಇದು ವಿನಯ್ ಕುಲಕರ್ಣಿ ಅವರನ್ನು ಕೆರಳಿಸಿದ್ದರಿಂದ ಇವರ ನಡುವೆ ಮತ್ತಷ್ಟು ವೈಮನಸ್ಸಿಗೆ ಕಾರಣ ಆಗಿತ್ತು.
ಏಪ್ರಿಲ್ ಕಳೆದ ಬಳಿಕ ಜೂನ್ 15 ರಂದು ಯೋಗೇಶ್ ಗೌಡ ಧಾರವಾಡದ ಸಪ್ತಾಪೂರದ ಉದಯ್ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
ರಾಜಕೀಯ ದ್ವೇಷದಿಂದಲೇ ಕೊಲೆ ನಡೆದಿದೆ ಎಂದು ಬಿಜೆಪಿ ಆರೋಪಗಳ ಸುರಿಮಳೆಗೈದಿತ್ತು. ಪೊಲೀಸರು ಕೂಡ ಎಫ್‌ಐಆರ್‌ನಲ್ಲಿ ಜಮೀನು ವಿವಾದದಿಂದಲೇ ಕೊಲೆ ನಡೆದಿದೆ ಎಂದು ದಾಖಲಿಸಿದ್ದರು. ಹೆಚ್ಚಿನ ತನಿಖೆ ನಡೆಸಲು ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಬಿಜೆಪಿ ಘಟಾನುಘಟಿ ನಾಯಕರು ಅಂದಿನ ಗೃಹ ಸಚಿವ ಪರಮೇಶ್ವರ್ ಮೇಲೆ ಒತ್ತಡ ಹೇರಿದ್ದರು. ಸರ್ಕಾರ ಮಾತ್ರ ಹೆಚ್ಚಿನ ತನಿಖೆಗೆ ಮುಂದಾಗಿರಲಿಲ್ಲ. ಬಳಿಕ 2019ರಲ್ಲಿ ಬಿಎಸ್‌ವೈ ಸರ್ಕಾರ ರಚನೆಯಾದ ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ತನಿಖೆ ಆರಂಭಿಸಿದ ಸಿಬಿಐ ಸಿಬಿಐ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಮಾಡಿತ್ತು.
ಕೊಲೆಯ ಸಾಕ್ಷಿ ನಾಶ ಮಾಡಲು ವಿನಯ ಕುಲಕರ್ಣಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು ಎಂದು ಕೂಡಾ ಸಿಬಿಐ ತನಿಖೆಯಲ್ಲಿ ಹೇಳಿತ್ತು. ಹೀಗಾಗಿ ವಿನಯ್ ಕುಲಕರ್ಣಿ ಅವರನ್ನು 2020ರಲ್ಲಿ ಸಿಬಿಐ ಬಂಧನ ಮಾಡಿತ್ತು. ಅಲ್ಲದೇ ಪೊಲೀಸ್ ಎಫ್‌ಐಆರ್‌ನಲ್ಲಿ ಇರುವ ಆರೋಪಿಗಳು ಕೊಲೆ ಮಾಡಿಲ್ಲ ಎನ್ನುವ ಅಂಶ ಕೂಡಾ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿತ್ತು.

