ದೀರ್ಘ ರಜೆ ಮೇಲೆ ಇರಾನ್‌ನಿಂದ ಬಂದಿದ್ದ ದಂಪತಿ ಕೊಡಗಿನಲ್ಲೇ ಲಾಕ್‌

2 Min Read

– ಮಕ್ಕಳಿಬ್ಬರು ಇರಾನ್‌ನಲ್ಲೇ ಲಾಕ್‌ – ಪಾಸ್‌ಪೋರ್ಟ್‌ ಅವಧಿ ಮುಕ್ತಾಯದ ಆತಂಕ

ಮಡಿಕೇರಿ: ದೀರ್ಘ ರಜೆಯ ಮೇಲೆ ತಮ್ಮ ಮಕ್ಕಳನ್ನ ಬಿಟ್ಟು ಇರಾನ್‌ನಿಂದ (Iran) ಬಂದಿದ್ದ ದಂಪತಿ ಕೊಡಗಿನಲ್ಲೇ ಲಾಕ್‌ ಆಗಿದ್ದಾರೆ. ವಿಮಾನ ಸೇವೆ ರದ್ದಾದ ಕಾರಣ ಇರಾನ್‌ಗೆ ಮರಳಲಾಗದೇ ಕೊಡಗಿನಲ್ಲೇ ಉಳಿಯುವಂತಾಗಿದೆ. ಮತ್ತೊಂದು ಕಡೆ ದಂಪತಿಯ ಪಾಸ್‌ಪೋರ್ಟ್‌ ಅವಧಿ ಮುಕ್ತಾಗೊಳ್ಳುವ ಹಂತದಲ್ಲಿದ್ದು, ಮತ್ತೆ ಇರಾನ್‌ಗೆ ಹೋಗಲು ಸಾಧ್ಯವಾಗುತ್ತೋ ಇಲ್ವೋ ಅನ್ನೋ ಆತಂಕದಲ್ಲಿದ್ದಾರೆ.

ಇರಾನ್‌ ಪ್ರಜೆಯೊಂದಿಗೆ ವಿವಾಹವಾಗಿದ್ದ ಕೊಡಗು (Kodagu) ಮೂಲದ ಮಹಿಳೆ ದೀರ್ಘ ರಜೆಯ ಮೇಲೆ ತವರೂರಾದ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಾಂತೂರಿಗೆ ಬಂದಿದ್ದರು. ಕೊಡಗು ಮೂಲದ ಶ್ರೀಮತಿ ನವೀನ್‌ ಅವರು 40 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಇರಾನ್‌ನ ನಾದರ್‌ ಅವರೊಂದಿಗೆ ಪರಿಚಯವಾಗಿತ್ತು. ಬಳಿಕ ಪ್ರೀತಿಸಿ ವಿವಾಹವಾದರು, ನಂತರ ದಂಪತಿ ಇರಾನ್‌ನ ಬೋಜ್‌ನೂರ್‌ ಪ್ರದೇಶದಲ್ಲಿ ನೆಲೆಸಿದ್ದರು.

ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಸಿವಿಲ್ ಇಂಜಿನಿಯರ್ ಆಗಿದ್ದು, ಮತ್ತೊಬ್ಬರು ಆರ್ಕಿಟೆಕ್ಟ್ (ವಾಸ್ತುಶಿಲ್ಪಿ) ಆಗಿದ್ದಾರೆ. ಈ ಕುಟುಂಬವು ಇರಾನಿನಲ್ಲಿ ದಾಳಿಂಬೆ, ಗ್ರೇಪ್, ಆಪಲ್, ಬ್ಲೂಬೆರಿ, ಬಾದಾಮಿ, ಏಪ್ರಿಕೋಟ್, ಖರ್ಜೂರ, ಪಿಸ್ತಾ ಸೇರಿದಂತೆ ಹಲವು ವಿದೇಶಿ ಹಣ್ಣುಗಳ ಫಾರ್ಮ್‌ಗಳನ್ನ ಹೊಂದಿದ್ದು, ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ದಂಪತಿ, ಮಾರ್ಚ್‌ನಲ್ಲಿ ಮರಳಿ ಇರಾನ್‌ಗೆ ತೆರಳುತ್ತಿದ್ದರು. ಈ ಬಾರಿಯೂ ಡಿಸೆಂಬರ್‌ನಲ್ಲಿ ಕೊಡಗಿಗೆ ಬಂದಿದ್ದು, ಮಾರ್ಚ್ 16 ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್‌ನ ಬೋಜ್‌ನೂರ್‌ಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಮೆರಿಕ–ಇರಾನ್ ಯುದ್ಧದ ಪರಿಣಾಮವಾಗಿ ವಿಮಾನ ರದ್ದಾಯಿತು. ನಂತರ ಏಪ್ರಿಲ್ 15 ರಂದು ಮತ್ತೊಮ್ಮೆ ಪ್ರಯಾಣ ಬುಕ್ ಮಾಡಿದ್ದರು, ಆ ವಿಮಾನವೂ ರದ್ದಾಯಿತು.

ಇನ್ನೂ ದಂಪತಿಗಳ ಪಾಸ್‌ಪೋರ್ಟ್‌ ಅವಧಿ ಮುಂದಿನ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಇದು ಸಂಭವಿಸಿದ್ರೆ, ಇನ್ನಷ್ಟು ದಿನ ಕೊಡಗಿನಲ್ಲೇ ಉಳಿಯಬೇಕಾಗುತ್ತದೆ. ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್‌ನಲ್ಲಿ ಇಂಟರ್ನೆಟ್‌ ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ. ಇದರಿಂದಾಗಿ ತಮ್ಮ ಮಕ್ಕಳನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಯುದ್ಧ ಪರಿಸ್ಥಿತಿಯಿಂದಾಗಿ ಬದುಕು ಅತಂತ್ರವಾದಂತಾಗ್ತಿದೆ, ಈ ಯುದ್ದ ಅದಷ್ಟು ಬೇಗಾ ಮುಗಿಯಲ್ಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಗೋಳಿಡುತ್ತಿದ್ದಾರೆ.

Share This Article