ಹೈದರಾಬಾದ್: ರೈಲ್ವೇ ಹಳಿಯಲ್ಲಿ ಪ್ರೇಮಿಗಳಿಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ತೆಲಂಗಾಣದ ಭೋಂಗೀರ್ ಜಿಲ್ಲೆಯಲ್ಲಿ ನಡೆದಿದೆ.
ಗಣೇಶ್(22) ಮತ್ತು ಪೂಜಿತಾ(16) ಶವವಾಗಿ ಪತ್ತೆಯಾದ ಪ್ರೇಮಿಗಳು. ಇಬ್ಬರು ಶನಿವಾರ ರಾಮಣ್ಣಪೇಟ್ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಟ್ರ್ಯಾಕ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೋಷಕರು ಮದುವೆಗೆ ಒಪ್ಪದ್ದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಣೇಶ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಇವನು 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪೂಜಿತಾಳನ್ನು ಪ್ರೀತಿಸುತ್ತಿದ್ದನು. ಇಬ್ಬರು ನಲ್ಗೊಂಡ ಜಿಲ್ಲೆಯ ನರ್ಕೆಪಲ್ಲಿಯ ಪಾಲೆಪಾಹದ್ ಗ್ರಾಮದವರು. ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದು, ಈ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಆದರೆ ಜಾತಿ ಬೇರೆ ಎಂದು ಮದುವೆಗೆ ನಿರಾಕರಿಸಿದ್ದಾರೆ.
ಮದುವೆಗೆ ಪೋಷಕರು ತಿರಸ್ಕರಿಸಿದ ನಂತರ ಇಬ್ಬರು ಮನೆ ಬಿಟ್ಟು ತಮ್ಮ ಗ್ರಾಮದ ಸಮೀಪದ ದೇವಸ್ಥಾನವೊಂದರಲ್ಲಿ ಭೇಟಿಯಾಗಿದ್ದಾರೆ. ಆದರೆ ಪುಜಿತಾಳ ಪೋಷಕರು ಮಗಳನ್ನು ಅಪಹರಣ ಮಾಡಿದ್ದಾನೆ ಎಂದು ಗಣೇಶ್ ವಿರುದ್ಧ ದೂರು ನೀಡಿದ್ದರು. ನಂತರ ಇಬ್ಬರು ದೇವಸ್ಥಾನದಲ್ಲಿರುವುದು ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಆದರೆ ಈ ಜೋಡಿ ಪೊಲೀಸರನ್ನು ನೋಡಿ ತಕ್ಷಣ ಅಲ್ಲಿಂದ ಓಡಿ ಹೋಗಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಇಬ್ಬರು ರಾಮಣ್ಣಪ್ಪೆಯ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಬಗ್ಗೆ ರೈಲ್ವೆ ಗಾರ್ಡ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.