ಮಡಿಕೇರಿ ದಸರಾ ದಶಮಂಟಪ ಮೆರವಣಿಗೆಗೆ ಕ್ಷಣಗಣನೆ ಆರಂಭ

Public TV
1 Min Read

ಮಡಿಕೇರಿ: ರಾಜ್ಯದ ಜನ ಮೈಸೂರು ದಸರಾ ಜಂಬೂ ಸವಾರಿಯನ್ನು ನೋಡಲು ಕಾತರರಾಗಿದ್ದರೆ, ಮಂಜಿನ ನಗರಿ ಮಡಿಕೇರಿಯ ಜನರು ಮಾತ್ರ ಐತಿಹಾಸಿಕ ದಶಮಂಟಪಗಳ ಪ್ರದರ್ಶನಕ್ಕಾಗಿ ಸಿದ್ಧತೆಯನ್ನು ಪೂರ್ಣಗೊಳಿಸಿ ಉತ್ಸವ ನೋಡಲು ರೆಡಿಯಾಗುತ್ತಿದ್ದಾರೆ.

ನಗರದ ಪ್ರಮುಖ 10 ದೇವಾಲಯಗಳಲ್ಲಿ ಈಗಾಗಾಲೇ ಸಿದ್ಧ ಗೊಂಡಿರುವ ದಶಮಂಟಪಗಳ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಕಾದುಕುಳಿತಿದ್ದಾರೆ. ಈ ಬಾರಿಯ ಮೆರವಣಿಗೆಯಲ್ಲಿ ಅನಂತ ಪದ್ಮನಾಭ, ಶ್ರೀ ಕೃಷ್ಣನಿಂದ ದೇವೇಂದ್ರನ ಗರ್ವಭಂಗ, ಚಾಮುಂಡೇಶ್ವರಿಯಿಂದ ಮಹಿಷಾಸುರನ ವಧೆ, ಲಲಿತಾಂಬಿಕೆಯಿಂದ ಭಂಡಾಸುರನ ವಧೆ, ರಾಮಾಂಜನೇಯರಿಂದ ರಾವಣನ ಸಂಹಾರ, ವಿನಾಯಕನಿಂದ ತಾಳಾಸುರನ ಗರ್ವಭಂಗ, ಹೀಗೆ ನಾನಾ ಕಥಾ ಭಾಗಗಳ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ. ಬೃಹತ್ ಧ್ವನಿ ಬೆಳಕಿನ ಸಂಯೋಜನೆಗಳೊಂದಿಗೆ ತಯಾರಿಸಲಾಗಿರುವ ಈ ಸ್ತಬ್ಧಚಿತ್ರಗಳು ಎಲ್ಲರನ್ನೂ ಬೆರಗುಗೊಳಿಸಲಿದೆ.

ದಶಮಂಟಪಗಳ ಸ್ತಬ್ಧಚಿತ್ರ ಪ್ರದರ್ಶನವು ಇಂದು ರಾತ್ರಿ 11 ಗಂಟೆ ನಂತರ ಆರಂಭಗೊಳ್ಳಲಿದ್ದು, ನಗರದ ಹಲವೆಡೆ ಸಂಚರಿಸಿ ಮುಂಜಾನೆವರೆಗೂ ಪ್ರದರ್ಶನ ನೀಡಲಿವೆ. ದಶಮಂಟಪಗಳನ್ನು ಸಿದ್ಧಗೊಳಿಸುವ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ತಯಾರಿಸಲಾಗಿದೆ. ಹಗಲಿನಲ್ಲಿ ಮೈಸೂರು ದಸರಾ ಜನರನ್ನು ಆಕರ್ಷಿಸಿದರೆ, ಮಡಿಕೇರಿ ದಸರಾ ರಾತ್ರಿಯ ಕತ್ತಲನ್ನು ವರ್ಣರಂಜಿತಗೊಳಿಸಲಿದೆ.

ಅಷ್ಟೇ ಅಲ್ಲದೇ ಮಡಿಕೇರಿಯ ದಸರಾ ಮತ್ತೊಂದು ವಿಶೇಷವಾದ ಪೌರಾಣಿಕ ಹಿನ್ನೆಲೆಯ ಕತೆಗಳ ಪ್ರದರ್ಶನವು ನಡೆಯಲಿದೆ. ಈಗಾಗಲೇ ಮಡಿಕೇರಿಯ ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿ ಸೇರಿದಂತೆ 10 ದೇವಾಲಯಗಳೂ ಕೂಡ ಒಂದೊಂದು ಕಥೆಯನ್ನು ಆಯ್ಕೆಮಾಡಿಕೊಂಡು ಪ್ರದರ್ಶನ ನೀಡಲು ಸಿದ್ಧವಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಲಕ್ಷಾಂತರ ಜನರು ದಶಮಂಟಪ ಪ್ರದರ್ಶನ ವೀಕ್ಷಣೆಗೆ ಕಾಯುತ್ತಿದ್ದು, ಮಡಿಕೇರಿಯ ವಿಶಿಷ್ಟ ಸಂಸ್ಕೃತಿಯ ಅನುಭವವನ್ನು ಪಡೆಯಲಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *