ನವದೆಹಲಿ: ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮು, ಶೀತ ಅಂತ ಸಿರಾಪ್ ಕೊಡುವ ಮುನ್ನ ಹುಷಾರ್. ಅದೇ ಸಿರಾಪ್ ರಾಜಸ್ಥಾನ, ಮಧ್ಯಪ್ರದೇಶದಲ್ಲಿ (Madhya Pradesh) 11 ಮಕ್ಕಳನ್ನ ಬಲಿ (Cough Syrup Deaths) ಪಡೆದಿದ್ದು, ದೇಶದ್ಯಾಂತ ಆತಂಕ ಸೃಷ್ಟಿಸಿದೆ. ಇದೀಗ ಕೇಂದ್ರ ಆರೋಗ್ಯ ಇಲಾಖೆ (MInistry of Health and Family Welfare) 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡದಂತೆ ಮಾರ್ಗಸೂಚಿ ಹೊರಡಿಸಿದೆ.
ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಸಾವನ್ನಪ್ಪಿದ ಬೆನ್ನಲ್ಲೇ ಅಲರ್ಟ್ ಆದ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. 2 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕೆಮ್ಮು, ಶೀತಗಳಿಗೆ ಸಿರಪ್‍ನ್ನು ಶಿಪಾರಸು ಮಾಡದಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವನೆ – 15 ದಿನಗಳ ಅಂತರದಲ್ಲಿ ಕಿಡ್ನಿ ವೈಫಲ್ಯದಿಂದ 6 ಮಕ್ಕಳು ಸಾವು
ಕೇಂದ್ರ ಆರೋಗ್ಯ ಇಲಾಖೆ ಶಿಪಾರಸು ಏನು?
* ಮಕ್ಕಳ ಆರೈಕೆಯಲ್ಲಿ ಔಷಧ ಬಗ್ಗೆ ತೀವ್ರ ಎಚ್ಚರಿಕೆಯಿಂದ ಇರಬೇಕು
* 2 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕೆಮ್ಮು, ಶೀತಕ್ಕೆ ಸಿರಪ್ ಬೇಡ
* ವೈದ್ಯರು ಸಿರಪ್ ಶಿಫಾರಸು ಮಾಡದಂತೆ ಆರೋಗ್ಯ ಇಲಾಖೆ ಸೂಚನೆ
* ಕೆಮ್ಮು ಹೆಚ್ಚಿದ್ರೆ ವೈದ್ಯರ ಮಾರ್ಗದರ್ಶನದಲ್ಲಿ ಡೊಸೇಜ್ ಮೀರದಂತೆ ಬಳಕೆ
* ಮಾಮೂಲಿ ಶೀತ ಜ್ವರಗಳಿಗೆ ಸಿರಪ್ ಬಳಕೆ ಬೇಡ
* 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಶಿಫಾರಸು ಮಾಡುವಂತಿಲ್ಲ
* ಶೀತ, ಕೆಮ್ಮು ವೇಳೆ ಮಕ್ಕಳು ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳಬೇಕು
* ಶೀತ, ಕೆಮ್ಮು ತೀವ್ರ ಇದ್ರೆ ಮಾತ್ರ ವೈದ್ಯರ ಸಲಹೆಯಂತೆ ಸಿರಪ್ ಬಳಸಬೇಕು
ಕೇಂದ್ರದ ಸೂಚನೆ ಬೆನ್ನಲ್ಲೇ ರಾಜ್ಯದಲ್ಲೂ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಕ್ಕಳ ಸಾವಿಗೆ ಕಾರಣವಾದ ಸಿರಪ್ ಲಭ್ಯವಿರುವ ಬಗ್ಗೆ ಮಾಹಿತಿ ಕೇಳಿದೆ. ರಾಜಸ್ಥಾನದಲ್ಲಿ ಸಾವಿಗೆ ಕಾರಣವಾದ ಸಿರಪ್‍ನ ಬ್ಯಾಚ್ ನಮ್ಮ ಕರ್ನಾಟಕದಲ್ಲಿ ಲಭ್ಯವಿಲ್ಲ ಅಂತ ರಾಜ್ಯ ಔಷಧ ನಿಯಂತ್ರಣ ಇಲಾಖೆ ಮಾಹಿತಿ ನೀಡಿದೆ.
ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ನಮ್ಮ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ನಿಗಾ ವಹಿಸಲು ಹೇಳಿದ್ದೇನೆ. ನಮ್ಮ ರಾಜ್ಯಕ್ಕೆ ಆ ಕೋಲ್ಡ್ ಸಿರಪ್ ಸಪ್ಲೈ ಇಲ್ಲ. ಖಾಸಗಿಯಾಗಿ ತರಿಸಿಕೊಂಡಿದ್ದಾರಾ ಎಂಬ ಬಗ್ಗೆ ಪರೀಶೀಲನೆ ಮಾಡುವಂತೆ ಸೂಚಿಸಿದ್ದೇನೆ. ನಮ್ಮ ರಾಜ್ಯದ ಔಷಧಿ ನಿಯಂತ್ರಣ ಇಲಾಖೆ ಪ್ರತಿ ತಿಂಗಳು ಗುಣಮಟ್ಟದ ಪರೀಕ್ಷೆ ಮಾಡುತ್ತದೆ. ನಾವು ತೆಗೆದುಕೊಂಡಿರುವಷ್ಟರು ಕ್ರಮ ಬೇರೆ ಯಾವ ರಾಜ್ಯದವರು ತೆಗೆದುಕೊಂಡಿಲ್ಲ. ಹೀಗಾಗಿ ಪೋಷಕರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದಿದ್ದಾರೆ.
ಇನ್ನು ಕೆಮ್ಮಿನ ಸಿರಪ್‍ನಿಂದಾಗಿ ಸಾವು ಪ್ರಕರಣದ ಸಂಬಂಧ ಕೇಂದ್ರದ ಮಾರ್ಗಸೂಚಿಗೆ ಸಚಿವ ಮಹದೇವಪ್ಪ ಟೀಕಿಸಿದ್ದಾರೆ. ಮಕ್ಕಳ ಸಾವು ವಿಷಾದಕರ, ಮಕ್ಕಳ ಸಾವಿನ ಮೊದಲೇ ಈ ಕ್ರಮ ತೆಗೆದುಕೊಳ್ಳಬೇಕಿತ್ತು. ಮಾರುಕಟ್ಟೆಗೆ ಔಷಧ ಬಿಡುವ ಮುನ್ನವೇ ಪರೀಕ್ಷೆ ಮಾಡಬೇಕಿತ್ತು. ಈಗ ಅದನ್ನ ಬಳಸಬೇಡಿ ಎಂದು ಕೇಂದ್ರ ಹೇಳಿರುವುದು ಸರಿಯಾದ ಕ್ರಮ ಅಲ್ಲ ಎಂದಿದ್ದಾರೆ.
ಪೋಷಕರಿಗೆ ಮಕ್ಕಳ ತಜ್ಞರ ಸಲಹೆ
ಎರಡು ರಾಜ್ಯಗಳಲ್ಲಿ ಕೆಮ್ಮಿನ ಸಿರಪ್‍ನಿಂದ ಮಕ್ಕಳು ಸಾವನ್ನಪ್ಪಿರುವ ಬೆನ್ನಲ್ಲೇ ಪೋಷಕರಿಗೆ ಮಕ್ಕಳ ತಜ್ಞರು ಸಲಹೆ ನೀಡಿದ್ದಾರೆ. 6 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಎಂದಾಕ್ಷಣ ಯಾವುದೇ ಸಿರಪ್ ತಂದು ಕೊಡಬೇಡಿ. ವೈದ್ಯರನ್ನು ಸಂಪರ್ಕಿಸಿಯೇ ಮಕ್ಕಳಿಗೆ ಸಿರಪ್ ಕೊಡಿ. ಇಲ್ಲವಾದಲ್ಲಿ ಮಕ್ಕಳ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ಮಕ್ಕಳ ತಜ್ಞ ಡಾ. ಸುರೇಂದ್ರ ಸಲಹೆ ನೀಡಿದ್ದಾರೆ.
ರಾಜಸ್ಥಾನ ಸರ್ಕಾರದಿಂದ ಮಹತ್ವದ ನಿರ್ಧಾರ
ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್‍ಗೆ ನಿಷೇಧ ಹೇರಲಾಗಿದೆ. ರಾಜಸ್ಥಾನ ಸರ್ಕಾರ ಹಲವು ಔಷಧಿಗಳನ್ನ ನಿಷೇಧಿಸಿ ಆದೇಶ ಹೊರಡಿಸಿದೆ ಜೊತೆಗೆ ಕೆಮ್ಮಿನ ಸಿರಪ್‍ಗಳ ವಿತರಣೆಯನ್ನು ನಿರ್ಬಂಧಿಸಲಾಗಿದೆ. ಹೆಚ್ಚುವರಿಯಾಗಿ, ವಿವಾದದ ಕೇಂದ್ರಬಿಂದುವಾಗಿರುವ ಕೇಸನ್ಸ್ ಫಾರ್ಮಾ ಕಂಪನಿಯು ಪೂರೈಸುವ ಎಲ್ಲಾ 19 ವಿಧದ ಔಷಧಿಗಳ ವಿತರಣೆಯನ್ನು ಮುಂದಿನ ಆದೇಶದವರೆಗೆ ಸರ್ಕಾರ ನಿಷೇಧಿಸಿದೆ.
2012ರಿಂದ ಕೇಸನ್ಸ್ ಫಾರ್ಮಾದಿಂದ 10,000ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅವುಗಳಲ್ಲಿ 42 ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾಗಿವೆ ಎಂದು ಸರ್ಕಾರಿ ದತ್ತಾಂಶವು ಬಹಿರಂಗಪಡಿಸಿದೆ. ಔಷಧ ಗುಣಮಟ್ಟದ ಮಾನದಂಡಗಳಿಗೆ ಸಂಬಂಧಿಸಿದ ನಿರ್ಧಾರಗಳ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ರಾಜಸ್ಥಾನ ಸರ್ಕಾರ ರಾಜ್ಯ ಔಷಧ ನಿಯಂತ್ರಕ ರಾಜಾರಾಮ್ ಶರ್ಮಾರನ್ನು ಅಮಾನತುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಸಾಮಾನ್ಯ ಕೆಮ್ಮು ನಿವಾರಕ ಡೆಕ್ಸ್ಟ್ರೋಮೆಥೋರ್ಫಾನ್ ಹೊಂದಿರುವ ಎಲ್ಲಾ ಕೆಮ್ಮಿನ ಸಿರಪ್‍ಗಳ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಸ್ವಾಮಿ ಚೈತನ್ಯಾನಂದಗೆ ಸಹಕರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಡ – ಮೂವರು ಸಹಾಯಕಿಯರು ಅರೆಸ್ಟ್