ವಿಜಯಪುರದಲ್ಲಿ ಶೂಟೌಟ್: ಕೂದಲೆಳೆ ಅಂತರದಲ್ಲಿ ಕಾರ್ಪೊರೇಟರ್ ಪುತ್ರ ಪಾರು

Public TV
1 Min Read

ವಿಜಯಪುರ: ಇಲ್ಲಿನ ಕನ್ನಾನ್ ನಗರದಲ್ಲಿ ಮದುವೆ ಸಮಾರಂಭ ಮುಗಿಸಿಕೊಂಡು ಕಾರಿನಲ್ಲಿ ಬರುತ್ತಿದ್ದ ವಿಜಯಪುರ ಕಾರ್ಪೊರೇಟರ್ ಶಹನಾಜ್ ಬೇಗಂ ಪುತ್ರ ಅಜೀಂ ಇನಾಮದಾರ್ ಮೇಲೆ ಮಂಗಳವಾರ ತಡರಾತ್ರಿ ಶೂಟೌಟ್ ನಡೆದಿದೆ.

ಕಪ್ಪು ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಅಜೀಂ ಇನಾಮದಾರ್(31) ಇದ್ದ ಕಾರಿನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಈ ಪೈಕಿ ಒಂದು ಗುಂಡು ಕಾರಿನ ಮುಂದಿನ ಗ್ಲಾಸ್‍ಗೆ ತಗುಲಿದೆ. ಸಿನಿಮೀಯ ರೀತಿಯಲ್ಲಿ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ನಂತರ ಗಾಬರಿಗೊಂಡ ಇನಾಮದಾರ್ ಗಾಂಧಿ ಚೌಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಎಎಸ್‍ಪಿ ಶಿವಕುಮಾರ್ ಗುಣಾರಿ, ಡಿಎಸ್‍ಪಿ ರಾಮು ಅರಸಿದ್ದಿ ಹಾಗೂ ಸಿಪಿಐ ಸುನೀಲ ಕಾಂಬಳ ಒಳಗೊಂಡ ತಂಡ ಪರಿಶೀಲನೆ ನಡೆಸಿದೆ. ಗುಂಡು ತಗುಲಿದೆ ಎನ್ನಲಾದ ಕಾರನ್ನು ತಪಾಸಣೆ ನಡೆಸಲಾಗಿದೆ. ಆದ್ರೆ ಈ ವೇಳೆ ಬುಲೆಟ್ ಆಗಲಿ, ಅದರ ಕ್ಯಾಪ್ ಆಗಲಿ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರು ಮತ್ತಷ್ಟು ತನಿಖೆ ಕೈಗೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅಜೀಂ ಇನಾಮದಾರ್ ಫಯಾಜ್, ಕಲ್ಬುರ್ಗಿ ಶೂಟೌಟ್ ಕೇಸ್‍ನಲ್ಲಿ ಆರೋಪಿಯಾಗಿರವ ಜುಬೇರ್ ಜಂಬಗಿಯಿಂದ ಜೀವ ಬೆದರಿಕೆ ಇತ್ತು. ಆತನೇ ಗುಂಡಿನ ದಾಳಿ ನಡೆಸಿರುವ ಸಂಶಯವಿದೆ ಎಂದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಎಎಸ್‍ಪಿ ಶಿವಕುಮಾರ್ ಗುಣಾರಿ, ಶೂಟೌಟ್ ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ದೂರನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *