5,600 ರೂ. ನೀಡಿ 16 ಜನ್ರನ್ನು ಕಿತ್ತು ಹಾಕಿದ್ರು – ಸರ್ಕಾರಕ್ಕೆ ಮಹಿಳಾ ಟೆಕ್ಕಿಯ ನೋವಿನ ಪತ್ರ

Public TV
3 Min Read

– ದಯವಿಟ್ಟು ನಮ್ಮ ಸಹಾಯಕ್ಕೆ ಬನ್ನಿ
– ಕಾರ್ಮಿಕ ಇಲಾಖೆಗೆ ಪತ್ರ ಬರೆದ ಟೆಕ್ಕಿ
– ಅಮೆರಿಕನ್ ಕಂಪನಿಯಲ್ಲಿದ್ದ ಉದ್ಯೋಗಿಗಳು

ಬೆಂಗಳೂರು: ರಾಷ್ಟ್ರದ ಐಟಿ ರಾಜಧಾನಿಯಂದೇ ಪ್ರಸಿದ್ಧಿ ಗಳಿಸಿರುವ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ಲಾಕ್‍ಡೌನ್ ಜಾರಿಯಲ್ಲಿರುವ ಪರಿಣಾಮ ಐಟಿ ಕಂಪನಿಗಳು ತನ್ನ ಸಿಬ್ಬಂದಿಗೆ ‘ವರ್ಕ್ ಫ್ರಂ ಹೋಮ್’ ಮಾಡಲು ಸೂಚಿಸಿದೆ. ಆದರೆ ಇತ್ತೀಚೆಗೆ ‘ವರ್ಕ್ ಫ್ರಂ ಹೋಮ್’ ಮಾಡುತ್ತಿದ್ದ ಟೆಕ್ಕಿಗಳಿಗೆ ಕಂಪನಿಯೊಂದು ಶಾಕ್ ನೀಡಿದ್ದು, ಯಾವುದೇ ಕಾರಣ ನೀಡದೇ ಟೆಕ್ಕಿಗಳನ್ನು ಕೆಲಸದಿಂದ ವಜಾಗೊಳಿಸಿದೆ.

ಹೀಗೆ ಕೆಲಸ ಕಳೆದುಕೊಂಡು ಕಂಗೆಟ್ಟಿದ್ದ ಮಹಿಳಾ ಟೆಕ್ಕಿಯೊಬ್ಬರು ಪತ್ರವನ್ನು ಟ್ವೀಟ್ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಂಡು, ಕಾರ್ಮಿಕ ಇಲಾಖೆಯ ಸಹಾಯವನ್ನು ಕೋರಿದ್ದಾರೆ. ಕಾಡುಗೋಡಿ ನಿವಾಸಿ ದೀಪಾ ವೆಂಕಟೇಶ್ ರೆಡ್ಡಿ ಎಂಬವರು ಪತ್ರವನ್ನು ಟ್ವೀಟ್ ಮಾಡಿ ಸಹಾಯ ಕೇಳಿದ್ದಾರೆ.

ಲಾಕ್‍ಡೌನ್ ಅವಧಿಯಲ್ಲಿ ನಮ್ಮನ್ನು ವಿನಾಕಾರಣ ಕೆಲಸದಿಂದ ತೆಗೆದು ಹಾಕಿದ್ದಾರೆ. ಉದ್ಯೋಗ, ಸಂಬಳವಿಲ್ಲದೆ ನಾವು ಹೇಗೆ ಬದುಕಬೇಕು? ದಯವಿಟ್ಟು ನಮ್ಮ ಸಹಾಯಕ್ಕೆ ಬನ್ನಿ ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರಿಗೆ ಟ್ಯಾಗ್ ಮಾಡಿ ಟೆಕ್ಕಿ ಟ್ವೀಟ್ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?
ಸಾಂಕ್ರಾಮಿಕ ಪಿಡುಗು ಕಾಡುತ್ತಿರುವ ಸಂದರ್ಭದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿರುವ ಬಗ್ಗೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ನಾನು ಬೆಳ್ಳಂದೂರು ರಸ್ತೆ ಎಕೋಸ್ಪೇಸ್‍ನಲ್ಲಿರುವ ಎಂಎನ್‍ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಮತ್ತು ನನ್ನ ಬ್ಯಾಚ್‍ನಲ್ಲಿದ್ದ 15 ಮಂದಿಯನ್ನು ಕಂಪನಿ ಕೆಲಸದಿಂದ ತೆಗೆದು ಹಾಕಿದೆ. ಸಾಂಕ್ರಾಮಿಕ ಪಿಡುಗು ಇರುವ ಸಂಕಷ್ಟ ಸ್ಥಿತಿಯಲ್ಲಿ ಅನುಸರಿಸಬೇಕಾದ ಅಗತ್ಯಕ್ರಮವನ್ನು ಕಂಪನಿ ಅನುಸರಿಸಿಲ್ಲ.

https://twitter.com/mani1972ias/status/1248464753892061186

ಕಾರಣವಿಲ್ಲದೇ ಕೆಲಸದಿಂದ ತೆಗೆದು ಹಾಕಿದ್ದಲ್ಲದೇ ಎಲ್ಲಾ ಟೆಕ್ಕಿಗಳಿಗೂ ಕಂಪನಿ ಒಂದೇ ರೀತಿ ಮಾನದಂಡ ಅನುಸರಿಸಿದೆ. ಎಲ್ಲರಿಗೂ 5,600 ರೂ. ಫೈನಲ್‌ ಸೆಟ್ಲ್‌ಮೆಂಟ್‌ ಮೊತ್ತವನ್ನು ನೀಡಿ, ರಿಲೀವಿಂಗ್ ಲೆಟರ್, ಫುಲ್ ಅಂಡ್ ಫೈನಲ್‌ ಸೆಟ್ಲ್‌ಮೆಂಟ್‌ ಲೆಟರ್ ಅನ್ನು ಕಂಪನಿ ಇ-ಮೇಲ್ ಮಾಡಿದೆ. ಎಲ್ಲಾ ಪ್ರಕ್ರಿಯೆ ಮುಗಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ಕಷ್ಟದ ವೇಳೆ ಆಹಾರ, ವಸತಿ ನೋಡಿಕೊಂಡು ಬದುಕುವುದು ಕಷ್ಟ. ನಮ್ಮ ಬ್ಯಾಚ್‍ನಲ್ಲಿದ್ದ 16 ಮಂದಿ ಮಾತ್ರ ಕೆಲಸ ಕಳೆದುಕೊಂಡಿದ್ದೇವೆ. ಉಳಿದ 5 ಮಂದಿ ಇನ್ನೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ಸಹಾಯ ಮಾಡಿ ನ್ಯಾಯ ಕೊಡಿಸಿ ಎಂದು ಟೆಕ್ಕಿ ಪತ್ರದಲ್ಲಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಾರ್ಮಿಕ ಇಲಾಖೆ ಪ್ರತಿಕ್ರಿಯೆ ಏನು?
ಟೆಕ್ಕಿ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಅವರು, ನಿಮ್ಮದು ಐಟಿ ಕಂಪನಿ ಆಗಿದ್ದರೆ ನೀವು ಕಾರ್ಮಿಕ ವರ್ಗಕ್ಕೆ ಸೇರುವುದಿಲ್ಲ. ನಿಮ್ಮ ಸಂಸ್ಥೆಯ ಒಪ್ಪಂದ ಪ್ರಕಾರ ನೀವು ನಡೆದುಕೊಳ್ಳಬೇಕಾಗುತ್ತದೆ. ಆದರೆ ಸ್ಥಳೀಯ ಕಾರ್ಮಿಕ ಅಧಿಕಾರಿಗೆ ಈ ಬಗ್ಗೆ ತಿಳಿಸಿ, ಅವರು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸೂಚಿಸಿದ್ದಾರೆ. ಅಲ್ಲದೆ ಕಾರ್ಮಿಕ ಸಹಾಯವಾಣಿಗೆ ಟ್ಯಾಗ್ ಮಾಡಿ ಟೆಕ್ಕಿ ಟ್ವೀಟ್‍ಗೆ ರೀ-ಟ್ವೀಟ್ ಮಾಡಿದ್ದಾರೆ.

ಇತ್ತ ಜನಸ್ನೇಹಿ ಕರ್ನಾಟಕ ಟೆಕ್ಕಿಯ ಕಷ್ಟಕ್ಕೆ ಓಗೊಟ್ಟು ಟ್ವೀಟ್ ಮಾಡಿ, ಕಾರ್ಮಿಕ ಇಲಾಖೆಯ ಸಹಾಯವಾಣಿ(9333333684)ಯಿಂದ ಪ್ರತ್ಯುತ್ತರ ಬಂದಿದ್ದು, ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಕಾರ್ಮಿಕ ಅಧಿಕಾರಿಗೆ ದೂರು ಮುಟ್ಟಿಸಲಾಗಿದೆ. ಕಾರ್ಮಿಕ ಸಹಾಯವಾಣಿ ಟೆಕ್ಕಿಯನ್ನು ಸಂಪರ್ಕಿಸಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿ, ಕಾರ್ಮಿಕ ಇಲಾಖೆಯ ಲಿಂಕ್ (https://twitter.com/Karmika_Sahaya) ಹಾಕಿ ಟ್ವೀಟ್ ಮಾಡಿದೆ.

ಟೆಕ್ಕಿ ಟ್ವೀಟ್‍ಗೆ ಅನೇಕರು ಸ್ಪಂಧಿಸುತ್ತಿದ್ದು, ಸರಣಿ ಟ್ವೀಟ್‍ಗಳನ್ನು ಮಾಡುತ್ತಿದ್ದಾರೆ. ಈ ಪ್ರಕರಣದಿಂದ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಕೊರೊನಾ ವೈರಸ್ ಬಿಸಿ ಐಟಿ ಕಂಪನಿಗಳಿಗೆ ತಟ್ಟಿ ಉದ್ಯೋಗ ಕಡಿತ ಆರಂಭವಾಗಿದೆಯೇ? ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕಂಪನಿಗಳು ಟೆಕ್ಕಿಗಳನ್ನು ವಜಾಗೊಳಿಸುತ್ತಿದೆಯೇ? ಐಟಿ-ಬಿಟಿ ಉದ್ಯೋಗಿಗಳ ಕಷ್ಟಕ್ಕೆ ಕಾರ್ಮಿಕ ಇಲಾಖೆ ಬಳಿ ಉತ್ತರವಿಲ್ಲವೇ? ಐಟಿ ಉದ್ಯೋಗಿಗಳು ಕಾರ್ಮಿಕ ಎಂದು ಇಲಾಖೆ ಪರಿಗಣಿಸುವುದಿಲ್ಲವೇ? ಎಂಬ ಹತ್ತು ಹಲವು ಪ್ರಶ್ನೆಗಳು ಸದ್ಯ ಭಾರೀ ಚರ್ಚೆಗೀಡಾಗಿದೆ.

Share This Article
Leave a Comment

Leave a Reply

Your email address will not be published. Required fields are marked *