ಕೊರೊನಾ ವಿರುದ್ಧ ಹೋರಾಡಿ ಗೆದ್ದ 107ರ ವೃದ್ಧೆ

Public TV
1 Min Read

ಆಮ್‌ಸ್ಟರ್‌ಡ್ಯಾಮ್: ನೆದರ್ಲ್ಯಾಂಡ್‍ನಲ್ಲಿ 107 ವರ್ಷದ ವೃದ್ಧೆಯೊಬ್ಬರು ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ.

ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನೆದರ್ಲ್ಯಾಂಡ್‍ನ ಕಾರ್ನೆಲಿಯಾ ರಾಸ್ (107) ಅವರು ಗುಣಮುಖರಾಗಿದ್ದು, ಸದ್ಯ ತಮ್ಮ ಮನೆಯಲ್ಲಿ ಆರಾಮವಾಗಿ ತಿರುಗಾಡುತ್ತಿದ್ದಾರೆ. ಕಾರ್ನೆಲಿಯಾ ರಾಸ್ ಮೊಣಕಾಲೂರಿ ದೇವರಿಗೆ ಹಾಗೂ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

ತನ್ನದೇ ದೇಶದ ದ್ವೀಪವೊಂದಕ್ಕೆ ಭೇಟಿ ನೀಡಿದಾಗ ಕಾರ್ನೆಲಿಯಾ ರಾಸ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರೊಟ್ಟಿಗೆ 40 ಜನ ಪ್ರವಾಸ ಕೈಗೊಂಡಿದ್ದರು. ಈ ಪೈಕಿ 12 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಕಾರ್ನೆಲಿಯಾ ಅವರು ಯಾವುದಕ್ಕೂ ಹೆದರದೇ ಧೈರ್ಯವಾಗಿ ಕೊರೊನಾ ವಿರುದ್ಧ ಹೋರಾಡಿ ಸಾವು ಜಯಿಸಿದ್ದಾರೆ.

ಚಿಕಿತ್ಸೆ ನೀಡಿದ ವೈದ್ಯರು ಕಾರ್ನೆಲಿಯಾ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ವೃದ್ಧೆಯ ಸೋದರ ಸೊಸೆ ಮೇಹ್ಯೂ ಡಿ ಗ್ರೂಟ್ ಅವರು, ಕಾರ್ನೆಲಿಯಾ ರಾಸ್ ಅವರು ಕೊರೊನಾ ವಿರುದ್ಧ ಹೋರಾಡಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನಮಗೆ ಇರಲಿಲ್ಲ. ಅವರಿಗೆ ಮೊದಲು ಜ್ವರ ಮತ್ತು ಕೆಮ್ಮಿನ ಗುಣಲಕ್ಷಣಗಳು ಕಂಡು ಬಂದಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಚಿಕಿತ್ಸೆಯ ಸಮಯದಲ್ಲಿ ಅವರು ಸಾಕಷ್ಟು ಶಾಂತವಾಗಿದ್ದರು. ಈಗ ಅವರು ಆರೋಗ್ಯವಾಗಿದ್ದು, ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

ನ್ಯೂಜಿಲೆಂಡ್ ಪತ್ರಿಕೆಯೊಂದರ ವರದಿಯ ಪ್ರಕಾರ, 107ನೇ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕಾರ್ನೆಲಿಯಾ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರು ಕ್ವಾರಂಟೈನ್‍ನಲ್ಲಿ ಒಂಟಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದರು.

ಕಾರ್ನೆಲಿಯಾ ಅವರಿಗಿಂತ ಮೊದಲು 104 ವರ್ಷದ ಅಮೆರಿಕದ ಲ್ಯಾಪೀಸ್ ಅವರನ್ನು ಕೊರೊನಾ ವಿರುದ್ಧ ಹೋರಾಡಿ ಗೆದ್ದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ  ಎಂದು ಘೋಷಿಸಲಾಗಿತ್ತು. ಅವರು 1918ರಲ್ಲಿ ಎರಡನೇ ಮಹಾಯುದ್ಧ ಮತ್ತು ಸ್ಪ್ಯಾನಿಷ್ ಜ್ವರದಲ್ಲಿಯೂ ಹೋರಾಡಿ ಬದುಕುಳಿದಿದ್ದರು. ಸ್ಪ್ಯಾನಿಷ್ ಜ್ವರವು ವಿಶ್ವಾದ್ಯಂತ ಸುಮಾರು 5 ಕೋಟಿ ಜನರನ್ನು ಬಲಿ ಪಡೆದಿತ್ತು. 1916ರಲ್ಲಿ ಜನಿಸಿದ ಲ್ಯಾಪೀಸ್ ಅವರಿಗೆ 2020ರ ಮಾರ್ಚ್ ನಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *