ಗೌರಿಬಿದನೂರಿಗೆ ಮತ್ತೆ ಕೊರೊನಾ ಕಂಟಕ – ವೈದ್ಯಕೀಯ ಸಿಬ್ಬಂದಿಗೆ ಸೋಂಕು?

Public TV
2 Min Read

– ಎರಡು ದಿನ ಸಂಪೂರ್ಣ ಸೀಲ್‍ಡೌನ್

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿಗೆ ಮತ್ತೆ ಕೊರೊನಾ ಕಂಟಕ ಎದುರಾಗಿದೆ. ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಆತಂಕ ಹೆಚ್ಚಾಗಿದೆ. ಯಾಕೆಂದರೆ ಕೋವಿಡ್ 19 ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ಇದೆ ಎಂಬ ಶಂಕೆ ವ್ಯಕ್ತವಾಗಿದೆ.

ಗೌರಿಬಿದನೂರು ನಗರದ ಕರಕಲ್ಲೇಹಳ್ಳಿ ನಿವಾಸಿಯಾಗಿದ್ದು, ಈತ ಸಹಾಯವಾಣಿಯಲ್ಲಿ ಕೆಲಸ ಮಾಡುತ್ತಿದ್ದ. 25 ವರ್ಷದ ವೈದ್ಯಕೀಯ ಸಿಬ್ಬಂದಿ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ. ಹೀಗಾಗಿ ತಾನೇ ಸ್ವಯಂಪ್ರೇರಿತವಾಗಿ ಟೆಸ್ಟ್ ಗೆ ಒಳಗಾಗಿದ್ದ. ಈಗ ಸಿಬ್ಬಂದಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ. ಅಲ್ಲದೇ ಸಿಬ್ಬಂದಿ ಜೊತೆ ಒಡನಾಟವಿದ್ದ ಇತರೆ ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಜೊತೆಗೆ ಕೊರೊನಾ ಶಂಕಿತ ಸಿಬ್ಬಂದಿ ಕುಟುಂಬದವರಿಗೂ ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸದ್ಯಕ್ಕೆ ಪರೀಕ್ಷಾ ವರದಿಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಾಯುತ್ತಿದೆ. ಪ್ರತಿದಿನ ಗೌರಿಬಿದನೂರು ನಗರದಿಂದ ಚಿಕ್ಕಬಳ್ಳಾಪುರದ ಕೋವಿಡ್ 19 ಆಸ್ಪತ್ರೆಗೆ ಆಗಮಿಸುತ್ತಿದ್ದನು. ಹೀಗಾಗಿ ಗೌರಿಬಿದನೂರು ನಗರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ ಸಿಬ್ಬಂದಿ ಮನೆ ಹಾಗೂ ಅಕ್ಕಪಕ್ಕ ವೈರಾಣು ನಿವಾರಕ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ.

ಗೌರಿಬಿದನೂರಿಗೆ ಕೊರೊನಾ ಕಂಟಕ ಹಿನ್ನೆಲೆಯಲ್ಲಿ ಗೌರಿಬಿದನೂರನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ. ಬೆಳಗ್ಗೆ 06 ರಿಂದ 09 ಗಂಟೆಯವರೆಗೆ ಹಾಲು, ತರಕಾರಿ ಖರೀದಿಗೆ ಅವಕಾಶ ಮಾಡಲಾಗಿದೆ. ದಿನಸಿ ಅಂಗಡಿ ಹಾಗೂ ಪೆಟ್ರೋಲ್ ಬಂಕ್ ಸಹ ಸಂಪೂರ್ಣ ಬಂದ್ ಆಗಿದೆ. ಮೆಡಿಕಲ್ ಸ್ಟೋರ್ ಹಾಗೂ ಆಸ್ಪತ್ರೆ ಹೊರತುಪಡಿಸಿ ಎಲ್ಲವೂ ಬಂದ್. ಯಾವುದೇ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ. ಒಂದು ವೇಳೆ ರಸ್ತೆಗೆ ವಾಹನ ಬಂದರೆ ವಾಹನ ವಶಕ್ಕೆ ಪಡೆಯಲಾಗುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಅಷ್ಟೇ ಅಲ್ಲದೇ ಗೌರಿಬಿದನೂರು ನಗರಕ್ಕೆ ಗ್ರಾಮೀಣ ಭಾಗದ ಜನರ ಪ್ರವೇಶವನ್ನು ಬಂದ್ ಮಾಡಲಾಗಿದೆ. ಅತ್ಯಗತ್ಯ ವಸ್ತುಗಳ ಅವಶ್ಯಕತೆ ಇದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು. ಸದ್ಯಕ್ಕೆ ಎರಡು ದಿನಗಳ ಕಾಲ ಗೌರಿಬಿದನೂರ ನಗರವನ್ನು ಸೀಲ್‍ಡೌನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ 12 ಮಂದಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ ಒಬ್ಬರು ಮೃತಪಟ್ಟಿದ್ದು, 8 ಮಂದಿ ಗುಣಮುಖರಾಗಿದ್ದಾರೆ. ಉಳಿದ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ. ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾಸ್ಪತ್ರೆಯ ಕೋವಿಡ್-19 ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ 04 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಡಿಸ್ಚಾರ್ಜ್ ಆದ ನಾಲ್ಕೂ ಮಂದಿಗೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಹೂ ಗಿಡ ಹಾಗೂ ಹಣ್ಣು ಕೊಟ್ಟು ಬೀಳ್ಕೊಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *