ದಿನಸಿ ಸಾಮಗ್ರಿ ತರುವುದಕ್ಕೆ ಜಗಳ – ಅತ್ತೆ, ಪತಿಯನ್ನೇ ಹಿಗ್ಗಾಮುಗ್ಗ ಥಳಿಸಿದ ಮಹಿಳಾ ಪೇದೆ

Public TV
1 Min Read

ಹುಬ್ಬಳ್ಳಿ: ದೇಶಾದ್ಯಂತ ಕೊರೊನಾ ವೈರಸ್ ಭೀತಿಯಿಂದ ಲಾಕ್‍ಡೌನ್ ಘೋಷಣೆಯಾಗಿದ್ದು, ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ತನ್ನ ಪತಿ ಮನೆಯವರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ ಕಸ್ತೂರಿ ಛಲವಾದಿ ಕ್ಷುಲ್ಲಕ ಕಾರಣಕ್ಕೆ ಪತಿಗೆ ಮಾನಸಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅತ್ತೆಗೂ ಕೂಡ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತಿ ಬಸವರಾಜ್ ಗೋಕಾವಿ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮನೆಗೆ ಕಿರಾಣಿ ಸಾಮಗ್ರಿಗಳನ್ನು ತರುವ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಜಗಳ ತಾರಕಕ್ಕೇರಿದ್ದು, ಪೊಲೀಸ್ ಸಿಬ್ಬಂದಿಯೇ ಪತಿ ಹಾಗೂ ಅತ್ತೆ ಮೇಲೆ ಹಲ್ಲೆ ಮಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೇ ಪತಿ, ಪತ್ನಿ ನಡುವೆ ಮಗುವನ್ನು ಪಾಲನೆ ಪೋಷಣೆ ಮಾಡುವ ಹಾಗೂ ಇನ್ನಿತರ ಕೌಟುಂಬಿಕ ವಿಚಾರಕ್ಕೆ ಜಗಳವಾಗುತ್ತಿತ್ತು. ಪತಿ ಮೇಲೆ ಹಲ್ಲೆ ಮಾಡಿ, ಪತಿ ಹಾಗೂ ಅತ್ತೆಗೆ ಅಶ್ಲೀಲ ಪದಗಳನ್ನು ಬಳಸುವ ಮೂಲಕ ಮಹಿಳಾ ಪೇದೆ ತೊಂದರೆ ನೀಡುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹಾಗೆಯೇ ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಸವರಾಜ್ ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ. ಪತ್ನಿ ಕಿರುಕುಳ ತಾಳಲಾರದೆ ಎಪಿಎಂಸಿ ನವನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರು ಕೂಡ ಪೊಲೀಸ್ ಅಧಿಕಾರಿಗಳು ದೂರನ್ನು ಸ್ವೀಕರಿಸಿಲ್ಲ ಎಂದು ಬಸವರಾಜ್ ಆರೋಪಿಸಿದ್ದಾರೆ.

ಕೊರೊನಾ ವೈರಸ್ ಭೀತಿಯಲ್ಲಿಯೂ ಕೂಡ ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿಸುತ್ತಿದ್ದಾರೆ. ಆದರೇ ಈ ಪೊಲೀಸ್ ಸಿಬ್ಬಂದಿ ವರ್ತನೆಯಿಂದ ಕುಟುಂಬಸ್ಥರು ಮಾಧ್ಯಮದ ಮುಂದೆ ಬಂದು ಕಣ್ಣೀರು ಹಾಕುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *