ಲಾಕ್‍ಡೌನ್ ವೇಳೆ ಟೈಮ್ ಪಾಸ್ ಮಾಡೋದು ಹೇಗೆ? – ಇಲ್ಲಿದೆ ಕೆಲವು ಟಿಪ್ಸ್

Public TV
3 Min Read

ಹಾಮಾರಿ ಕೊರೊನಾವನ್ನು ತಡೆಗಟ್ಟಲು ದೇಶವನ್ನೇ ಲಾಕ್ ಮಾಡಲಾಗಿದೆ. ಮನೆಯಿಂದ ಯಾರೂ ಹೊರಬರಬೇಡಿ ಎಂದು ಪ್ರಧಾನಿ ಮೋದಿ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಲಾಕ್‍ಡೌನ್ ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸಬೇಕಿದೆ. ಅಗತ್ಯ ವಸ್ತುಗಳ ಖರೀದಿಗೆ ಹೋದಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಕೊರೊನಾ ನಿಯಂತ್ರಣದಲ್ಲಿಡಲು ಐಟಿ ಬಿಟಿ, ಗಾರ್ಮೆಂಟ್ಸ್, ಕಾರ್ಖಾನೆ ಇನ್ನಿತರ ಸಣ್ಣ -ಪುಟ್ಟ ವ್ಯಾಪಾರಸ್ಥರು ಎಲ್ಲರೂ ಬಂದ್ ಮಾಡಿದ್ದಾರೆ. ಇದರಿಂದ ಮನೆಯಲ್ಲೇ ಹೇಗಪ್ಪ ಕಾಲ ಕಳೆಯೋದು ಅಂತ ನೀವು ಚಿಂತಿತರಾಗಿದ್ದೀರಾ? ಆದರೆ ಚಿಂತೆ ಬೇಡ. ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಲಾಕ್‍ಡೌನ್ ವೇಳೆ ಕೊರೊನಾ ವಿರುದ್ಧ ಯುದ್ಧದ ಜೊತೆಗೆ ಜೀವಮಾನವಾಗಿ ಸ್ಮರಿಸುವ ಕ್ಷಣಗಳನ್ನು ಕಾಯ್ಡಿಡಬಹುದು.

ಲಾಕ್‍ಡೌನ್ ವೇಳೆ ಮನೆಯಲ್ಲಿ ಹೇಗೆ ಟೈಮ್ ಪಾಸ್ ಮಾಡೋದು:
* ಈಗೆಲ್ಲಾ ಗಂಡ, ಮನೆ, ಮಕ್ಕಳು, ಕುಟುಂಬಸ್ಥರು ಅಂತ ಕಾಲ ಕಳೆಯೋದೇ ಅಪರೂಪವಾಗಿ ಬಿಟ್ಟಿದೆ. ಅದರಲ್ಲೂ ಹಬ್ಬ, ಹರಿದಿನಗಳಲ್ಲಿ ಒಟ್ಟಿಗೆ ಇರೋಕು ಕೆಲವೊಂದು ಬಾರಿ ಆಗುವುದಿಲ್ಲ. ಆದರೆ ಈಗ ಕೊರೊನಾದಿಂದ ಎಲ್ಲರೂ ಮನೆಯಲ್ಲೇ ಇರುವಾಗಿದೆ. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ, ಎಲ್ಲರೊಟ್ಟಿಗೆ ಕೂಡಿ ಕಾಲ ಕಳೆಯಿರಿ.
* ಬೆಳಗ್ಗೆ ವೇಳೆ ಬೇಗ ಕಚೇರಿಗೆ, ಕೆಲಸಕ್ಕೆ, ಶಾಲೆ-ಕಾಲೇಜಿಗೆ ಹೋಗಬೇಕಾಗಿರುತ್ತೆ. ಆದರೆ ಹೊರಗೆ ಹೋಗುವವರಿಗಾಗಿ ಅಡುಗೆ ಮಾಡಲು ಬೆಳಗ್ಗೆ 5, 6 ಗಂಟೆಗೆ ಎದ್ದರೂ ಸಹ ಇಷ್ಟವಾದ ಅಡುಗೆ ಮಾಡಲಾಗುವುದಿಲ್ಲ. ಯಾವುದೋ ಒಂದು ಅಡುಗೆ ಮಾಡಿದರೆ ಸಾಕು ಅನ್ನಿಸಿರುತ್ತದೆ.

* ಬೇಗ ಮನೆಯಿಂದ ಹೊರಡುವ ವೇಳೆಯಲ್ಲಿ ಅಕ್ಕಿರೊಟ್ಟಿ, ವೆರೈಟಿ ವೆರೈಟಿ ದೋಸೆ, ಪಡ್ಡು, ಪರೋಟ, ಕಡುಬು ಇತ್ಯಾದಿ ಹೆಚ್ಚು ಸಮಯ ಹಿಡಿಯುವ ರುಚಿ ರುಚಿಯಾದ ಅಡುಗೆ ಮಾಡಲು ಸಾಧ್ಯವಾಗಿರಲ್ಲ. ಈಗ ಸಮಯವೇ ನಿಮ್ಮ ಕೈಯಲ್ಲಿದೆ. ಬೇಕಾದ ಬೇಕಾದ ಅಡುಗೆ ಮಾಡಿಕೊಂಡು. ಎಲ್ಲರೊಟ್ಟಿಗೆ ಕೂತು ಊಟ ಮಾಡಿ.
* ಬೆಳಗ್ಗೆ ಎದ್ದು ಕೆಲಸಕ್ಕೆ ಯಾವುದೋ ಒಂದು ಬಟ್ಟೆಯನ್ನು ಹಾಕಿಕೊಂಡು ಹೋದರಾಯ್ತು ಅನ್ನಿಸಿರುತ್ತೆ. ಆದರೆ ಅದನ್ನು ಜೋಡಿಸಿಡಲು ಸಹ ಸಮಯ ಸಿಕ್ಕಿರುವುದಿಲ್ಲ. ಇದರಿಂದ ನಮ್ಮ ಬಳಿ ಇರುವ ಬಟ್ಟೆಗಳೇ ಮರೆತು ಹೋಗಿರುತ್ತೆ. ಇಂತಹದೊಂದು ಡ್ರೆಸ್, ಟಾಪ್, ಪ್ಯಾಂಟ್ ನನ್ನ ಹತ್ತಿರ ಇತ್ತಾ ಎನ್ನಿಸಿಬಿಡುತ್ತೆ. ಹೀಗಾಗಿ ಈಗ ನಿಮ್ಮ ಬಳಿ ಬೇಕಾದಷ್ಟು ಸಮಯ ಇದೆ. ವಾರ್ಡ್ ರೋಬ್‍ನಲ್ಲಿರುವ ಬಟ್ಟೆಗಳನ್ನೆಲ್ಲಾವನ್ನು ಸ್ವಚ್ಛ ಮಾಡಿ ಜೋಡಿಸಿಡಿ. ಬೇಕಾದ್ದನ್ನು, ಬೇಡವಾದ್ದನ್ನು ಬೇರ್ಪಡಿಸಿ. ಟೈಲರಿಂಗ್ ಮೆಷಿನ್ ಇದ್ದರೆ ಅದನ್ನು ಹೊರತೆಗೆದು ನಿಮ್ಮ ಟೈಲರ್ ಕೆಲಸವನ್ನು ಮುಂದುವರಿಸಿ.

* ಕೆಲವೊಮ್ಮೆ ಕರಕುಶಲ ಕಲೆಗಳನ್ನು ನಮ್ಮೊಳಗೆ ಇದ್ದರೂ ಅದನ್ನು ಪೂರೈಸಲು ನಮ್ಮ ಬಳಿ ಟೈಮ್ ಇರುವುದಿಲ್ಲ. ನೆಟ್ಟಿಂಗ್, ಸೀರೆಯಲ್ಲಿ ಮ್ಯಾಟ್ ಹಾಕುವುದು, ಸೀರೆಗೆ ಕುಚ್ಚು ಕಟ್ಟುವುದು, ದುಪ್ಪಟ್ಟ, ಸೀರೆಗೆ ಡಿಸೈನ್ ಮಾಡುವುದು, ಹಳೆಯ ಸೀರೆಯನ್ನು ಹೊಸತು ಮಾಡುವುದು, ವಾಶ್ ಮಾಡುವುದು, ಗೃಹಲಂಕಾರ ಹೆಚ್ಚಿಸುವುದು, ಪೇಪರ್ ಆರ್ಟ್, ಕಲರಿಂಗ್, ಡ್ರಾಯಿಂಗ್, ಓಲೆ ಮಾಡುವುದು ಹೀಗೆ ಇತ್ಯಾದಿ ಕಲೆಗಳನ್ನು ಸಮಯ ಇಲ್ಲದೇ ನಮ್ಮೊಳಗೆ ಹುದುಗಿ ಹೋಗಿರುತ್ತೆ. ಇದಕ್ಕೆಲ್ಲಾ ಈಗ ಸದಾವಕಾಶ ನಿಮ್ಮ ಬಳಿ ಇದೆ. ಇರುವ ಸಮಯದಲ್ಲಿ ಇದಕ್ಕೆಲ್ಲಾ ಕಾಲಾವಕಾಶ ಕೊಡಿ. ನಿಮ್ಮ ನೆಚ್ಚಿನ ಕಲೆಯನ್ನು ಹೊರಹೊಮ್ಮಿಸಿ.

* ಕೆಲವು ಮನೆಗಳಲ್ಲಿ ಮನೆಯ ಅಟ್ಟದ ಮೇಲೆ ಹಾಕಿರುವ ವಸ್ತುಗಳನ್ನು ಮರೆತೇ ಹೋಗಿರುತ್ತಾರೆ. ಹಳೆಯ ವಸ್ತು, ಬೇಡದ ವಸ್ತು, ಸ್ಟೀಲ್ ಸಾಮಾನು, ಚೇರ್ ಹೀಗೆ ಎಲ್ಲದಕ್ಕೂ ಅಟ್ಟದ ಮೇಲೆ ಸ್ಥಳ ಕೊಟ್ಟಿರುತ್ತಾರೆ. ಅದನ್ನು ಕ್ಲೀನ್ ಮಾಡಲು ಸಮಯ ಇರುವುದಿಲ್ಲ. ಈಗ ನಿಮ್ಮ ಬಳಿ ಇರುವ ಸಮಯವನ್ನು ಅಟ್ಟ ಕ್ಲೀನ್ ಮಾಡಲು ಬಳಸಿ. ಬೇಡದ್ದನ್ನು ಬೇರ್ಪಡಿಸಿ.
* ಈ ಬ್ಯುಸಿ ಶೆಡ್ಯೂಲ್‍ನಲ್ಲಿ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಬೇಕು ಅಂದರೂ ಆಗಿರಲ್ಲ. ಎಣ್ಣೆಯನ್ನು ತಿಕ್ಕುವವ್ಯಾರು ಎಂದು ಸುಮ್ಮನೆ ಶಾಂಪೂ ಹಾಕಿ ನೀರಾಕಿಕೊಂಡು ಬಂದಿರುತ್ತಾರೆ. ಈಗಿರುವ 24*7 ಟೈಮ್‍ನಲ್ಲಿ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ತಲೆಗೆ ಹರಳೆಣ್ಣೆ, ಕೊಬ್ಬರಿ ಎಣ್ಣೆ ನಿಮಗೆ ಅನುಕೂಲವಾದ ಎಣ್ಣೆ ಹಾಕಿಕೊಂಡು ಸ್ನಾನ ಮಾಡಿ.

* ನಮ್ಮ ಹಿರಿಯರ ಕಾಲದಲ್ಲಿ ವಾರದಲ್ಲಿ ಒಮ್ಮೆ ಎಣ್ಣೆ ಸ್ನಾನ ಮಾಡಲೇಬೇಕಿತ್ತು. ಅಯ್ಯೋ ಈಗ ಅದಕ್ಕೆಲ್ಲಾ ಟೈಮ್ ಎಲ್ಲಿದೆ ಅನ್ನೋರು ಹೆಚ್ಚಾಗಿದ್ದರು. ಆದರೆ ಈಗ ತುಂಬಾ ಸಮಯವಿದೆ. ಹೀಗಾಗಿ ಎಣ್ಣೆ ಸ್ನಾನ ಮಾಡಿ. ನಿಮ್ಮ ಮನೆಯಲ್ಲಿರುವ ಮಕ್ಕಳಿಗೂ ಎಣ್ಣೆ ಸ್ನಾನ ಮಾಡಿಸಿ. ಆರೋಗ್ಯ ಕಾಪಾಡಿಕೊಳ್ಳಿ.
* ಮಕ್ಕಳೊಂದಿಗೆ ಸೇರಿ ಆಟವಾಡಿ, ಚೌಕಾಬಾರ, ಪಗಡೆ, 3 ಸಾಲಿನಾಟ, ಅಳಕುಳಿ ಮನೆಯಾಟ ಅಂದರೇನು ಎಂದು ಈಗಿನ ಮಕ್ಕಳಿಗೆ ಗೊತ್ತಿರಲ್ಲ. ಬರೀ ಮೊಬೈಲ್ ಆ್ಯಪ್‍ನಲ್ಲಿ ಗೇಮ್‍ನಲ್ಲೇ ಕಾಲ ಕಳೆದುಹೋಗಿರುತ್ತಾರೆ. ಈಗ ನಿಮ್ಮ ಮಕ್ಕಳಿಗೆ ಈ ಎಲ್ಲಾವನ್ನು ಆಟವನ್ನು ತಿಳಿಸಿ ಕೊಡಿ. ಇದೆಲ್ಲಾ ಇಂಡೋರ್ ಗೇಮ್ ಆಗಿರುವುದರಿಂದ ಬುದ್ಧಿಯನ್ನು ಚುರುಕುಗೊಳಿಸುತ್ತದೆ. ಇದರಿಂದ ಮಾನಸಿಕವಾಗಿ ಮಕ್ಕಳು ಚಾಲಾಕಿಗಳಾಗುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *