ಅನಿವಾಸಿ ಭಾರತೀಯರನ್ನ ಕರೆ ತರಲು ಮುಂದಾದ ಕೇಂದ್ರ- ಹೊರ ರಾಜ್ಯದ ಕನ್ನಡಿಗರನ್ನ ಮರೆತ ರಾಜ್ಯ ಸರ್ಕಾರ

Public TV
2 Min Read

ನವದೆಹಲಿ: ಕೇಂದ್ರ ಸರ್ಕಾರವು ಇಂದಿನಿಂದ ಆಪರೇಷನ್ ಏರ್ ಲಿಫ್ಟ್ ಮತ್ತು ಸಮುದ್ರ ಸೇತು ಹೆಸರಿನಲ್ಲಿ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರನ್ನು ಕರೆತರುವ ಕೆಲಸ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಹೊರ ರಾಜ್ಯಗಳಲ್ಲಿರುವ ಕನ್ನಡಗರನ್ನು ಮರೆತಂತೆ ಭಾಸವಾಗುತ್ತಿದೆ.

ಕೊರೊನಾ ಲಾಕ್‍ಡೌನ್‍ನಿಂದ ಅನ್ಯ ರಾಜ್ಯಗಳಲ್ಲಿ ಕನ್ನಡಿಗರು ಸಂಕಷ್ಟದಲ್ಲಿದ್ದು ದೆಹಲಿ, ಪಂಜಾಬ್, ಚಂಡೀಗಢ್, ಹರ್ಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕನ್ನಡಿಗರು ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರನ್ನು ವಾಪಸ್ ಕರೆತರುವ ಬಗ್ಗೆ ಸರ್ಕಾರ ಇನ್ನೂ ಯಾವುದೇ ಕ್ರಮ ತಡಗೆದುಕೊಂಡಿಲ್ಲ.

ದೆಹಲಿವೊಂದರಲ್ಲೇ ಯುಪಿಎಸ್‍ಸಿ ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳು, ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಕುಟುಂಬಗಳು, ಪ್ರವಾಸಿಗರು ಸೇರಿ ಸಾವಿರಕ್ಕೂ ಅಧಿಕ ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಸೇವಾ ಸಿಂಧು ವೆಬ್‍ಸೈಟ್ ನಲ್ಲಿ ನೋಂದಣಿ ಮಾಡಿಕೊಂಡಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ರಾಜ್ಯದಲ್ಲಿರುವ ಹಲವು ಅಧಿಕಾರಿಗಳು, ದೆಹಲಿ ಕರ್ನಾಟಕ ಭವನದಲ್ಲಿರುವ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆರಂಭದಲ್ಲಿ ರೈಲ್ವೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂದು ದೆಹಲಿ ಕನ್ನಡಿಗರು ಆರೋಪಿಸಿದ್ದಾರೆ.

ಅನಿವಾಸಿ ಭಾರತೀಯರಿಗೆ ಸಿಗುವ ಸೌಲಭ್ಯ ನಮ್ಮಗ್ಯಾಕಿಲ್ಲ? ನಾವು ಬೆಂಗಳೂರಿಗೆ ಬರಬೇಕು ಅವಕಾಶ ಕೋಡಿ. ಹಣ ಕೊಟ್ಟು ಪ್ರಯಾಣಿಸಲು ನಾವು ಸಿದ್ಧ, ರೈಲು ಬಿಡಿ ಇಲ್ಲ ಸಂಚಾರಕ್ಕೆ ಬಸ್ಸು ಕೊಡಿ ಎಂದು ದೆಹಲಿಯಲ್ಲಿರುವ ಕನ್ನಡಿಗರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ವಿಶೇಷ ರೈಲು ಅಥಾವ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರ ಹೊರ ರಾಜ್ಯದ ಕನ್ನಡಿಗರ ಮಾಹಿತಿ ಪಡೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿತ್ತು. ಅದರಂತೆ ವ್ಯಾಟ್ಸಪ್ ಇತರೆ ಹಲವು ಮಾರ್ಗಗಳ ಮೂಲಕ ರಾಜ್ಯಕ್ಕೆ ವಾಪಸ್ ಆಗಲು ಸಿದ್ಧವಾಗಿರುವ ಕನ್ನಡಿಗರ ಪಟ್ಟಿಯನ್ನು ನೋಡೆಲ್ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಆದರೆ ಮುಂದೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಬಸ್ ಅಥಾವ ರೈಲು ಮಾರ್ಗವಾಗಿ ವಾಪಸ್ ಕರೆ ತರುವ ಬಗ್ಗೆ ಇನ್ನೂ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳ ತಿಳಿಸಿವೆ.

ಈ ನಡುವೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ರಾಜ್ಯಕ್ಕೆ ರೈಲು ಬಿಡುವ ಬಗ್ಗೆ ರೈಲ್ವೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದು ಕರ್ನಾಟಕ ಭವನದ ನಿವಾಸಿ ಆಯುಕ್ತರ ಜೊತೆಗೆ ಚರ್ಚೆ ಮಾಡಿದ್ದಾರೆ. ಆದರೆ ಈವರೆಗೂ ದೆಹಲಿ ಮತ್ತು ಇತರೆ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಕರೆತರುವ ಬಗ್ಗೆ ಬಿಎಸ್‍ವೈ ನೇತೃತ್ವದ ಸರ್ಕಾರ ಅಂತಿಮ ಕ್ರಮಗಳನ್ನು ತೆಗೆದುಕೊಂಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *