ಐಪಿಎಲ್‍ಗೆ ತಟ್ಟಿದ ಲಾಕ್‍ಡೌನ್ ವಿಸ್ತರಣೆ ಬಿಸಿ- ಬಿಸಿಸಿಐ ಮುಂದಿನ ಹೆಜ್ಜೆ ಏನು?

Public TV
3 Min Read

ನವದೆಹಲಿ: ಲಾಕ್‍ಡೌನ್ ಅನ್ನು ದೇಶದಲ್ಲಿ ಮೇ 3ರವರೆಗೆ ವಿಸ್ತರಿಸಿದ್ದರಿಂದ ಐಪಿಎಲ್ ಮುಂದೂಡಲಾಗಿದೆ. ಮಂಗಳವಾರ ಮಧ್ಯಾಹ್ನ ಬಿಸಿಸಿಐ ಮೂಲಗಳು ಈ ಮಾಹಿತಿಯನ್ನು ನೀಡಿವೆ.

ಐಪಿಎಲ್‍ನ ಮುಂದೇನು ವೇಳಾಪಟ್ಟಿ ಬಗ್ಗೆ ಮಂಡಳಿಯ ಮೂಲಗಳು ಏನನ್ನೂ ಹೇಳಿಲ್ಲ. ಆದಾಗ್ಯೂ ಪ್ರಸ್ತುತ ಪರಿಸ್ಥಿತಿ ಮತ್ತು ಅಂತರರಾಷ್ಟ್ರೀಯ ವೇಳಾಪಟ್ಟಿಯಿಂದಾಗಿ, ಕಳೆದ ಡಿಸೆಂಬರ್ ನಲ್ಲಿ ಟೂರ್ನಿ ನಡೆಸುವುದು ಕಷ್ಟವಾಗಲಿದೆ. ಮಳೆಗಾಲ ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 20ರಿಂದ ನವೆಂಬರ್ ಮಧ್ಯದವರೆಗೆ ಟಿ20 ವಿಶ್ವಕಪ್ ನಡೆಯಲಿದೆ. ಈ ವೇಳಾಪಟ್ಟಿಯ ಮಧ್ಯೆ ಬಿಸಿಸಿಐ ಐಪಿಎಲ್‍ಗಾಗಿ ಖಾಲಿ ದಿನಾಂಕಗಳನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಹಾಗೆ ಟೂರ್ನಿ ನಡೆಸಿದರೂ ಡಿಸೆಂಬರ್ ಗೂ ಮುನ್ನವೇ ಐಪಿಎಲ್ ಟುರ್ನಿ ಮುಗಿಸಲು ಸಾಧ್ಯವಿಲ್ಲ. ಹೀಗಾಗಿ ಟೂರ್ನಿಯ ಸ್ವರೂಪವು ಮೊದಲಿಗಿಂತ ಚಿಕ್ಕದಾಗಿರಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಐಪಿಎಲ್ ಟೂರ್ನಿಯನ್ನು ಈ ಮೊದಲು ಮಾರ್ಚ್ 29ರಂದು ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಮತ್ತು ವೀಸಾ ನಿರ್ಬಂಧದಿಂದಾಗಿ ಏಪ್ರಿಲ್ 15ರವರೆಗೆ ಮುಂದೂಡಲಾಯಿತ್ತು. ಈಗ ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಈ ಬಾರಿ ಐಪಿಎಲ್ 50 ದಿನಗಳ ಬದಲು 44 ದಿನಗಳು ಮಾತ್ರ ನಡೆಯಬಹುದು. ಎಲ್ಲಾ 8 ತಂಡಗಳು 9 ನಗರಗಳಲ್ಲಿ ತಲಾ ಪಂದ್ಯಗಳನ್ನು ಆಡಬೇಕಾಗಿದೆ. ಇವುಗಳಲ್ಲದೆ ಮೇ 24ರಂದು ವಾಂಖೆಡೆನಲ್ಲಿ 2 ಸೆಮಿಫೈನಲ್, 1 ನಾಕೌಟ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಆದರೆ ಬಿಸಿಸಿಐ ಈಗ 2009ರಂತೆ 37 ದಿನಗಳವರೆಗೆ ಸ್ವರೂಪವನ್ನು ಕಡಿಮೆ ಮಾಡಬಹುದು. 2009ರ ಲೋಕಸಭಾ ಚುನಾವಣೆಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಆಡೆದಿತ್ತು. ಐದು ವಾರ ಮತ್ತು ಎರಡು ದಿನಗಳಲ್ಲಿ ಅದು ಮುಗಿದಿತ್ತು.

ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್:
ಏಷ್ಯಾ ಕಪ್ ಟಿ20 ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆಯಲಿದೆ. ಇದರ ನಂತರ ಆಟಗಾರರು ಐಸಿಸಿ ಟಿ20 ವಿಶ್ವಕಪ್ ಅನ್ನು ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ಆಡಲಿದ್ದಾರೆ. ಆದರೆ ಏಷ್ಯಾ ಕಪ್ ಮತ್ತು ವಿಶ್ವಕಪ್ ಬಗ್ಗೆ ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಏಷ್ಯಾ ಕಪ್ ಮುಂದೂಡುವ ಸಾಧ್ಯತೆ ಇದೆ. ಈ ವೇಳಾಪಟ್ಟಿಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಐಪಿಎಲ್ ವೇಳಾಪಟ್ಟಿಯನ್ನು ರೂಪಿಸಬಹುದು. ಮಂಡಳಿಯ ಮೂಲಗಳ ಪ್ರಕಾರ, ಏಷ್ಯಾ ಕಪ್ ಮತ್ತು ವಿಶ್ವಕಪ್ ಮುಂದೂಡಿದಲ್ಲಿ ಐಪಿಎಲ್ ನವೆಂಬರ್ ಅಂತ್ಯದಿಂದ ಡಿಸೆಂಬರ್ ವರೆಗೆ ಸಾಧ್ಯತೆ ಇದೆ.

ದಾದಾ ಅಭಿಪ್ರಾಯ:
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾರ್ಚ್ 13ರಂದು ಹೇಳಿದ್ದರು.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಬಿಸಿಸಿಐ ಪದಾಧಿಕಾರಿಗಳೊಂದಿಗೆ ಮಾತನಾಡಿದ ನಂತರ ಐಪಿಎಲ್ ಅನ್ನು ಮತ್ತಷ್ಟು ಮುಂದೂಡಲಾಗುತ್ತದೆಯೇ ಎಂಬ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಾಗುತ್ತದೆ. ಆದರೆ ಪ್ರಾಯೋಗಿಕವಾಗಿ ಹೇಳುವುದಾದರೆ, ಕೊರೊನಾ ವೈರಸ್‍ನಿಂದಾಗಿ ಪ್ರಪಂಚದ ಎಲ್ಲೆಡೆ ಜೀವನವು ಸ್ಥಗಿತಗೊಂಡಾಗ ಕ್ರೀಡೆಯಲ್ಲಿ ಭವಿಷ್ಯ ಎಲ್ಲಿದೆ ಎಂದು ಪ್ರಶ್ನಿಸಿದ್ದರು.

ಕೊರೊನಾ ವೈರಸ್‍ನಿಂದ ಉಂಟಾಗಿರುವ ಸದ್ಯದ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಪ್ರಸ್ತುತ ಕ್ಷಣದಲ್ಲಿ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿವೆ, ಜನರು ಮನೆಯಲ್ಲಿ ಲಾಕ್‍ಡೌನ್ ಆಗಿದ್ದಾರೆ. ಕಚೇರಿಗಳು ಲಾಕ್ ಆಗಿವೆ. ಯಾರೂ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಮೇ ಮಧ್ಯದವರೆಗೆ ಇದೇ ವಾತಾವರಣ ಇರುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ ಎಂದು ಗಂಗೂಲಿ ಹೇಳಿದ್ದರು.

ಇಂತಹ ಪರಿಸ್ಥಿತಿಯಲ್ಲಿ ಆಟಗಾರರನ್ನು ನೀವು ಎಲ್ಲಿಂದ ಕರೆದುಕೊಂಡು ಬರಲು ಸಾಧ್ಯ. ಹೋಗಲಿ ಆಟಗಾರರು ಪ್ರಯಾಣಿಸುವ ಅವಕಾಶ ಎಲ್ಲಿದೆ? ಈ ಸಮಯದಲ್ಲಿ ಪ್ರಪಂಚದ ಯಾವುದೇ ದೇಶದಲ್ಲೂ ಕ್ರೀಡೆಯ ಪರವಾದ ವಾತಾವರಣವಿಲ್ಲ. ಹೀಗಾಗಿ ಐಪಿಎಲ್ ಅನ್ನು ಮರೆತುಬಿಡಿ ಅಂತ ಹೇಳುವುದು ಸರಳ, ಸಾಮಾನ್ಯ ಜ್ಞಾನವಾಗಿದೆ ಎಂದು ದಾದಾ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *