ದೇಶದಲ್ಲಿ 2,400ಕ್ಕೂ ಹೆಚ್ಚು ಜನರಿಗೆ ಕೊರೊನಾ – ಇನ್ನೆರಡು ವಾರದಲ್ಲೇ 10,000 ತಲುಪೋ ಸಾಧ್ಯತೆ

Public TV
2 Min Read

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,400 ದಾಟಿದೆ. ಕಳೆದ 24 ಗಂಟೆಗಳಲ್ಲಿ 350ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಇಂದು ನಾಲ್ವರು ಬಲಿಯಾಗಿದ್ದಾರೆ. ಇದರೊಂದಿಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.

ಮೂರು ದಿನದ ಹಸುಗೂಸಿಗೂ ಕೊರೊನಾ ಸೋಂಕು ಹರಡಿರುವ ಹೃದಯವಿದ್ರಾವಕ ಘಟನೆ ಮುಂಬೈನಲ್ಲೇ ನಡೆದಿದೆ. ಸೋಂಕಿತನಿದ್ದ ಕೊಠಡಿಗೆ ಆತನ ಪತ್ನಿ, ಮಗುವನ್ನು ಇರಿಸಿದ್ದರಿಂದ ಸೋಂಕು ಹರಡಿದೆ. ದೆಹಲಿಯ ಏಮ್ಸ್ ಇಬ್ಬರು ವೈದ್ಯರು ಸೇರಿ ದೇಶದಲ್ಲಿ 50 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಬಂದಿದೆ. ಇದನ್ನೂ ಓದಿ: ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

ಲಾಕ್‍ಡೌನ್ ಉಲ್ಲಂಘಿಸಿದ ವ್ಯಕ್ತಿಗಳಿಗೆ ಶಿಕ್ಷೆ ನೀಡಿದ ಮೊದಲ ಪ್ರಕರಣ ಕೂಡ ವರದಿಯಾಗಿದೆ. ಮಹಾರಾಷ್ಟ್ರದ ಪುಣೆಯ ಬಾರಾಮತಿ ನಗರದಲ್ಲಿ ತಿರುಗಾಡ್ತಿದ್ದ ಮೂವರಿಗೆ ಮೂರು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಉತ್ತರಪ್ರದೇಶದಲ್ಲಿ ಜನಿಸಿದ ಹಸುಗೂಸುಗಳಿಗೆ ‘ಕೊರೊನಾ’ ಮತ್ತು ‘ಲಾಕ್‍ಡೌನ್’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:  ಎಲ್ಲೆಂದರಲ್ಲಿ, ಡಾಕ್ಟರ್ ಮೇಲೆ ಉಗುಳುತ್ತಿದ್ದಾರೆ ದೆಹಲಿ ಮಸೀದಿಯ ಕ್ವಾರಂಟೈನ್‍ಗಳು

ದೇಶದಲ್ಲಿ ಕೊರೊನಾ:
ಮಹಾರಾಷ್ಟ್ರದಲ್ಲಿ 416 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ 81 ಜನ ಗುಣಮುಖರಾಗಿದ್ದು, 16 ಜನ ಸಾವನ್ನಪ್ಪಿದ್ದಾರೆ. ತಮಿಳುನಾಡು 309 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 75 ಜನರು ಗುಣಮುಖರಾದರೆ ಓರ್ವರು ಮೃತಪಟ್ಟಿದ್ದಾರೆ. ಕೇರಳದಲ್ಲಿ 286 ಜನರಿಗೆ ಸೋಂಕು ತಗುಲಿದ್ದು, 21 ಮಂದಿ ಗುಣಮುಖರಾದರೆ ಇಬ್ಬರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 219 ಜನರಿಗೆ ಸೋಂಕು ತಗುಲಿದ್ದು, 67 ಜನ ಚೇತರಿಸಿಕೊಂಡಿದ್ದರೆ ಇಬ್ಬರು ಸಾವನ್ನಪ್ಪಿದ್ದಾರೆ.

ಆಂಧ್ರ ಪ್ರದೇಶದಲ್ಲಿ 143 ಜನರಿಗೆ ಕೊರೊನಾ ತಗುಲಿದ್ದು, 32 ಮಂದಿ ಗುಣಮುಖರಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ರಾಜಸ್ಥಾನದಲ್ಲಿ 133 ಜನರಿಗೆ ಸೋಂಕು ತಗುಲಿದ್ದು, 13 ಜನ ಚೇತರಿಸಿಕೊಂಡಿದ್ದಾರೆ. ತೆಲಂಗಾಣದಲ್ಲಿ 130 ಜನ ಸೋಂಕಿತರಿದ್ದು, 3 ಮೂವರು ಗುಣಮುಖರಾದರೆ 9 ಜನ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್

ದೇಶಾದ್ಯಂತ ಕೊರೊನಾ ವೈರಸ್ ರುದ್ರ ನರ್ತನ ಮಾಡುತ್ತಿದೆ. ಕಳೆದ 2 ದಿನಗಳಲ್ಲಿ ಸೋಂಕಿತರ ಸಂಖ್ಯೆ ಶೇಕಡಾ 47ರಷ್ಟು ಹೆಚ್ಚಾಗಿದೆ. ಮೊದಲ 44 ದಿನಗಳಲ್ಲಿ ಸಾವಿರ ಕೊರೊನಾ ಕೇಸ್ ದಾಖಲಾದರೆ, ಕಳೆದ ಐದು ದಿನಗಳಲ್ಲಿ ಸೋಂಕಿತರ ಸಂಖ್ಯೆ ಡಬಲ್ ಆಗಿದೆ. ಇದು ಹೀಗೆ ಮುಂದುವರಿದರೆ ಮುಂದಿನ 2 ವಾರಗಳಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ದಾಟುವ ಸಂಭವವಿದೆ.

ದೇಶದ ಎಲ್ಲೆಲ್ಲೂ ಕೊರೊನಾ ಆತಂಕ ಕಂಡು ಬರುತ್ತಿದೆ. ಈ ನಡುವೆ ಇವತ್ತಿಗೆ ದೇಶದಲ್ಲಿ 9ನೇ ದಿನದ ಲಾಕ್‍ಡೌನ್ ಪೂರ್ಣಗೊಂಡಿದೆ. ಇಂತಹ ಹೊತ್ತಲ್ಲಿ ಗುರುವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ ಮೋದಿ, ಕೊರೊನಾ ವಿರುದ್ಧ ದೇಶ ಸುದೀರ್ಘ ಯುದ್ಧ ಮಾಡಬೇಕಿದ್ದು, ಅದಕ್ಕೆ ಎಲ್ಲರ ಸಹಕಾರ ಬೇಕಿದೆ. ತ್ಯಾಗಗಳಿಗೆ ಎಲ್ಲರೂ ಸಿದ್ಧರಾಗಬೇಕಿದೆ ಅಂತ ಸಲಹೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *