– ಅಮಿತ್ ಶಾ, ರಾಜನಾಥ್ ಸಿಂಗ್ ಚರ್ಚೆ
– ಲಾಕ್‍ಡೌನ್ ಮುಂದುವರಿಕೆಗೆ ತಜ್ಞರ ಸಲಹೆ
ನವದೆಹಲಿ/ಬೆಂಗಳೂರು: ಮಾರಕ ಕೊರೋನಾ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ 21 ದಿನಗಳ ಲಾಕ್‍ಡೌನ್ ಮುಂದುವರಿಕೆಗೆ ದೇಶಾದ್ಯಂತ ಒತ್ತಡ ಹೆಚ್ಚಾಗಿದೆ.
ಮಹಾರಾಷ್ಟ್ರ, ತೆಲಂಗಾಣ, ಛತ್ತೀಸ್‍ಗಢ, ಜಾರ್ಖಂಡ್, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಈಗಿನ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಮುಂದುವರಿಕೆಯೇ ಸೂಕ್ತ ಅಂತ ಕೇಂದ್ರದ ಮುಂದೆ ಪ್ರತಿಪಾದಿಸಿವೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಗಳ ಜೊತೆ ಕೆಲವು ತಜ್ಞರು ಕೂಡ ಈ ಹಂತದಲ್ಲಿ ಲಾಕ್‍ಡೌನ್ ತೆರವು ಮಾಡುವುದು ಸರಿಯಲ್ಲ. ಇದರಿಂದ ಮತ್ತಷ್ಟು ಗಂಡಾಂತರಕ್ಕೆ ಆಸ್ಪದ ಕೊಟ್ಟಂತಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಇವತ್ತು ರಕ್ಷಣಾ ಸಚಿವ ರಾಜನಾಥ್‍ಸಿಂಗ್, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಸಿದ್ದು, ಲಾಕ್‍ಡೌನ್ ಮುಂದುವರಿಸಬೇಕೇ? ಬೇಡವೇ? ಲಾಕ್‍ಡೌನ್ ಮುಂದುವರಿಸುವುದಾದ್ರೆ ಹೇಗೆ ಮುಂದುವರಿಸಬೇಕು? ಲಾಕ್‍ಡೌನ್ ತೆರವು ಮಾಡುವುದಾದ್ರೆ ಆ ಕ್ರಮಗಳು ಏನು? ಲಾಕ್‍ಡೌನ್‍ನಿಂದ ಯಾವುದಕ್ಕೆಲ್ಲ ವಿನಾಯಿತಿ ಕೊಡ್ಬೇಕು? ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಆದರೆ ಅಂತಿಮವಾಗಿ ಯಾವುದೇ ಒಮ್ಮತದ ತೀರ್ಮಾನ ಹೊರಬಿದ್ದಿಲ್ಲ.
ಬಹುತೇಕ ರಾಜ್ಯಗಳು ಲಾಕ್‍ಡೌನ್ ತೆರವಿಗೆ ಒಪ್ಪದಿರುವುದರಿಂದ ಭಾರತ ಲಾಕ್‍ಡೌನ್ ಮುಂದುವರಿಸುವ ಸಾಧ್ಯತೆಗಳಿವೆ. ಈ ಸಂಬಂಧ ಕೇಂದ್ರ ಸರ್ಕಾರ 3 ಪ್ಲಾನ್‍ಗಳನ್ನು ಸಿದ್ಧಪಡಿಸಿದೆ.
ಪ್ಲಾನ್ 1: ಕೆಂಪು, ಹಳದಿ, ಹಸಿರು ವಲಯವಾಗಿ ವಿಂಗಡಣೆ
ಕೆಂಪು ವಲಯ – ಕೊರೋನಾ ಪ್ರಕರಣಗಳು ಹೆಚ್ಚಿದ್ದು ಇಲ್ಲಿ ನಿರ್ಬಂಧ ಮುಂದುವರಿಕೆ.
ಹಳದಿ ವಲಯ – ಕನಿಷ್ಠ ಪ್ರಕರಣಗಳು ದಾಖಲಾದ ನಗರಗಳು. ಸಂಚಾರ, ವ್ಯಾಪಾರ – ವಹಿವಾಟಿಗೆ ಹಂತ ಹಂತವಾಗಿ ಅವಕಾಶ.
ಹಸಿರು ವಲಯ – ಸೋಂಕು ಕಾಣಿಸಿಕೊಳ್ಳದ ನಗರಗಳು. ಯಾವುದೇ ತೊಂದರೆ ಇಲ್ಲದಿದ್ದರೆ ಲಾಕ್‍ಡೌನ್ ಸಡಿಲಿಕೆ.
ಪ್ಲಾನ್ 2: ಏಪ್ರಿಲ್ ಕೊನೆಯವರೆಗೆ ಲಾಕ್‍ಡೌನ್
ಸದ್ಯಕ್ಕೆ ಲಾಕ್‍ಡೌನ್ ಸಡಿಲ ಮಾಡದೇ ಇನ್ನೆರಡು ವಾರ ಲಾಕ್‍ಡೌನ್ ಮುಂದುವರಿಸುವುದು. ಏಪ್ರಿಲ್ ತಿಂಗಳು ಮುಗಿಯುವವರೆಗೆ ಲಾಕ್‍ಡೌನ್ ಮಾಡಿ ಪರಿಸ್ಥಿತಿ ನೋಡಿಕೊಂಡು ತೆರವು ಮಾಡುವುದು.
ಪ್ಲಾನ್ 3: ಹಂತ ಹಂತವಾಗಿ ಸಂಚಾರ
ಸದ್ಯಕ್ಕೆ ಲಾಕ್‍ಡೌನ್ ತೆರವಾದರೂ ಸಂಚಾರವಿಲ್ಲ. ಹಂತ ಹಂತವಾಗಿ ಸಾರಿಗೆ ಸಂಚಾರಕ್ಕೆ ಅವಕಾಶ ನೀಡುವುದು. ಬಸ್, ರೈಲು, ವಿಮಾನಯಾನಕ್ಕೆ ಅವಕಾಶ. ನಿಗದಿತ ಸಂಖ್ಯೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ.
ಕರ್ನಾಟಕದ ಕಥೆ ಏನು?
ಏಪ್ರಿಲ್ 14ಕ್ಕೆ ಕರ್ನಾಟಕದಲ್ಲಿ ಲಾಕ್‍ಡೌನ್ ಎಂಡ್ ಆಗುತ್ತಾ…? ಬಸ್, ರೈಲು, ಮೆಟ್ರೋ ಓಡಾಡುತ್ತಾ ಅನ್ನೋ ನಿರೀಕ್ಷೆಯೇ ಬೇಡ. ಯಾಕಂದ್ರೆ, ಲಾಕ್‍ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸದ ಕಾರಣ ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗ್ತಿದೆ. ಈ ನಿಟ್ಟಿನಲ್ಲಿ, ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆಯೇ ಹೆಚ್ಚಿದೆ.
ಇಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ. ತಜ್ಞ ವೈದ್ಯರಾದ ಡಾ. ಮಂಜುನಾಥ್ ಹಾಗೂ ಡಾ. ದೇವಿಶೆಟ್ಟಿ ನೀಡುವ ವರದಿ ಆಧರಿಸಿ ಲಾಕ್‍ಡೌನ್ ಮುಂದುವರಿಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಲಾಕ್‍ಡೌನ್ ಪ್ಲಾನ್ ಏನು?
ಲಾಕ್‍ಡೌನ್ ಸಡಿಲವಾದರೂ ಹಾಟ್‍ಸ್ಪಾಟ್ ಗಳಾದ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮುಂದುವರಿಕೆ. ಬಸ್, ಮೆಟ್ರೋ, ರೈಲು, ಆಟೋ, ಟ್ಯಾಕ್ಸಿ, ಕ್ಯಾಬ್‍ಗಳಿಗೆ ಅವಕಾಶ ನೀಡದಿರುವುದು.
ಮಾಲ್‍ಗಳು, ಚಿತ್ರಮಂದಿರಗಳನ್ನು ತೆರೆಯದಿರುವುದು ಇದರ ಜೊತೆ ದಿನ ಬಿಟ್ಟು ದಿನ ವ್ಯಾಪಾರ-ವಹಿವಾಟಿಗೆ ಅವಕಾಶ ನೀಡುವುದು. ಶೇ.25ರಷ್ಟು ಹೋಟೆಲ್ ತೆರೆಯಲು ಅವಕಾಶ ನೀಡುವುದು. ಆದರೆ ಕೇವಲ ಪಾರ್ಸಲ್‍ಗಳಿಗಷ್ಟೇ ಅನುಮತಿ ನೀಡುವುದು. ದಿನಕ್ಕೆ 3 ಗಂಟೆ ಅಂದರೆ ಬೆಳಗ್ಗೆ 10ರಿಂದ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದು.