ಒಂದೇ ಗ್ರಾಮದಲ್ಲಿ ಬರೋಬ್ಬರಿ 47 ಕೊರೊನಾ ಪ್ರಕರಣ – ಓರ್ವನಿಂದ 46 ಮಂದಿಗೆ ಸೋಂಕು

Public TV
2 Min Read

ಬೆಳಗಾವಿ: ಕುಂದಾನಗರಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದೆ. ಜಿಲ್ಲೆಯಾದ್ಯಂತ 85 ಪ್ರಕರಣಗಳು ಪತ್ತೆಯಾಗಿದ್ದು, ಅರ್ಧಕ್ಕಿಂತ ಹೆಚ್ಚು ಒಂದೇ ಗ್ರಾಮದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಶುಕ್ರವಾರ ಒಂದೇ ದಿನ 11 ಪ್ರಕರಣಗಳು ಪತ್ತೆಯಾಗಿದ್ದು, ಈ 11 ಪ್ರಕರಣಗಳ ಪೈಕಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ 10 ಪ್ರಕರಣಗಳು ಪತ್ತೆಯಾಗಿವೆ. ಇನ್ನೊಂದು ಪ್ರಕರಣ ಕುಡಚಿಯಲ್ಲಿ ಪತ್ತೆಯಾಗಿದೆ. ರೋಗಿ ನಂಬರ್ 128ರ 20 ವರ್ಷದ ಯುವಕನಿಂದಲೇ ಹಿರೇಬಾಗೇವಾಡಿ ಗ್ರಾಮದಲ್ಲಿ 46 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕರ್ನಾಟಕದಲ್ಲೇ ಅತೀ ಹೆಚ್ಚು ಸೋಂಕಿತರಿರುವ ಗ್ರಾಮವೇ ಈ ಹಿರೇಬಾಗೇವಾಡಿ ಗ್ರಾಮವಾಗಿದ್ದು, ಇಲ್ಲಿವರೆಗೂ 47 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕಿತರ ವಿವರಗಳು:
ರೈತರಿಗೂ ಕೂಡ ಕೊರೊನಾ ವಕ್ಕರಿಸಿದ್ದು, ಇಡೀ ಗ್ರಾಮದ ಜನ ಭಯದಲ್ಲಿ ಬದುಕುವಂತಾಗಿದೆ. ಪತ್ನಿಯಿಂದ 58 ವರ್ಷದ ಗಂಡನಿಗೆ ಸೋಂಕು ತಗುಲಿದೆ. ಜೊತೆಗೆ 20 ವರ್ಷದ ಮಗನಿಗೂ ಈ ಸೋಂಕು ಹರಡಿದೆ. ರೋಗಿ ನಂಬರ್ 547 ಅಂದರೆ 27 ವರ್ಷದ ಯುವತಿಯಿಂದ ನಾಲ್ವರಿಗೆ ಸೋಂಕು ಹರಡಿದೆ. ಯುವತಿಯ 21 ವರ್ಷದ ತಂಗಿ, 45 ವರ್ಷದ ಚಿಕ್ಕಪ್ಪ, 26 ವರ್ಷ ಭಾಮೈದನಿಗೂ ಸೋಂಕು ಹರಡಿದೆ. ಅಲ್ಲದೇ 20 ವರ್ಷದ ಸಂಬಂಧಿ ಯುವತಿಗೂ ಸೋಂಕು ತಗುಲಿದೆ.

36 ವರ್ಷದ ವ್ಯಕ್ತಿಯಿಂದ ಇಬ್ಬರಿಗೆ ಸೋಂಕು ಹರಡಿದೆ. ಈತನಿಂದ 30 ವರ್ಷದ ಹೆಂಡತಿಗೆ ಮತ್ತು ಸಂಬಂಧಿ 16 ಬಾಲಕಿಗೆ ಸೋಂಕು ಹಂಚಿದ್ದಾನೆ. 20 ವರ್ಷದ ಯುವಕನಿಗೆ ಸೋಂಕು ತಗುಲಿದ್ರೆ ಇತ್ತ ಪೋಷಕರ ಸಂಬಂಧಿ ಮಗಳಿಗೂ ಸೋಂಕು ತಗುಲಿದೆ. ಈ ಇಬ್ಬರು ಅಕ್ಕಪಕ್ಕದವರಾಗಿದ್ದು, 10 ಜನರು ಒಂದೇ ಕಾಲೋನಿಯರಾಗಿದ್ದಾರೆ. ಇದರಲ್ಲಿ ಕೆಲವರು ರೈತ ಕುಟುಂಬದವರು ಇದ್ದು, ಜಮೀನಿನಲ್ಲಿ ಜೊತೆಗೆ ಕೆಲಸ ಮಾಡಿದವರಿಗೂ ಕೂಡ ಆತಂಕ ಕಾಡುತ್ತಿದೆ. ಈ ಹಿರೇಬಾಗೆವಾಡಿಯಲ್ಲಿ ಕಂಡು ಬಂದ ಹೆಚ್ಚು ಪ್ರಕರಣಗಳಲ್ಲಿ ಯುವಜನ ಹೆಚ್ಚು ಸೋಂಕಿಗೆ ಒಳಗಾಗಿದ್ದಾರೆ.

ಇತ್ತ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ 50 ವರ್ಷದ ಮಹಿಳೆಯಿಂದ 20 ವರ್ಷದ ಮಗನಿಗೆ ಸೋಂಕು ತಗುಲಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ತೋಟದ ಮನೆಯಲ್ಲಿ ವಾಸವಿದ್ದ ಗಂಡ ಹೆಂಡತಿಗೂ ಸೋಂಕು ತಗುಲಿತ್ತು. ಇದೀಗ ಮಗನಿಗೂ ಸೋಂಕು ತಗುಲಿ ಇಡೀ ಕುಟುಂಬಕ್ಕೆ ಸೋಂಕು ವ್ಯಾಪಿಸಿದೆ.

Share This Article
Leave a Comment

Leave a Reply

Your email address will not be published. Required fields are marked *