ಬೆಂಗ್ಳೂರಿಗರೇ ಎಚ್ಚರ- ಮೇ ಅಂತ್ಯಕ್ಕೆ ಹೆಚ್ಚಾಗಲಿದೆ ಕೊರೊನಾ ಅಬ್ಬರ

Public TV
1 Min Read

– ಕೊರೊನಾ ಕಂಟ್ರೋಲ್‍ಗೆ ‘ಪ್ಲ್ಯಾನ್ ಬಿ’ ಸೂತ್ರ

ಬೆಂಗಳೂರು: ಭಾರತದಲ್ಲಿ ಜೂನ್, ಜುಲೈ ಅಂತ್ಯಕ್ಕೆ ಕೊರೊನಾ ಇನ್ನಿಲ್ಲದಂತೆ ಬಾಧಿಸಲಿದೆ ಅಂತ ಎಚ್ಚರಿಸಲಾಗಿದೆ. ಆದರೆ ಬೆಂಗಳೂರಿಗೆ ಮಾತ್ರ ಮೇ ತಿಂಗಳೇ ಕಂಟಕವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ವಾರ ಬೆಂಗಳೂರಿನಲ್ಲಿ ಮತ್ತಷ್ಟು ಕೊರೊನಾ ಹೆಚ್ಚಳವಾಗಲಿದ್ದು, ಮೇ ಅಂತ್ಯಕ್ಕೆ 5 ಸಾವಿರ ಪ್ರಕರಣ ಪತ್ತೆಯಾಗಬಹುದು ಅಂತ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಲಾಕ್‍ಡೌನ್ ಸಡಿಲಿಕೆ ಆಗಿ ನಾಲ್ಕು ದಿನದಲ್ಲಿ ಅಂತಹ ಕಂಟಕ ಬೆಂಗಳೂರಿಗೆ ಎದುರಾಗಿಲ್ಲ. ಆದರೆ ಮುಂದಿನ ವಾರ ಹೈ ರಿಸ್ಕ್ ಎದುರಾಗಲಿದೆ ಅಂತ ತಜ್ಞರು ಹೇಳಿದ್ದಾರೆ.

ಬೆಂಗಳೂರಿಗೆ ಹೈ ಅಲರ್ಟ್ ನೀಡಿದ ತಜ್ಞರು ಕೊರೊನಾ ಕಂಟ್ರೋಲ್‍ಗೆ ‘ಪ್ಲಾನ್ ಬಿ’ ಸೂತ್ರ ರೆಡಿ ಮಾಡುವಂತೆ ಸಲಹೆ ನೀಡಿದ್ದಾರೆ. ಸೋಂಕು ಪೀಡಿತ ದೇಶದಿಂದ ಬರುವವರ ಮೇಲೆ ಹದ್ದಿನ ಕಣ್ಣು ಇಡಲು ಸೂಚಿಸಿದ್ದಾರೆ.

‘ಪ್ಲ್ಯಾನ್ ಬಿ’ ಸೂತ್ರ:
ಮೊದಲಿಗೆ ಎಲ್ಲಾ ವಾರ್ಡ್ ಗಳಲ್ಲಿ ಮತ್ತಷ್ಟು ತಂಡ ರಚನೆ ಮಾಡಿ. ಗ್ರೀನ್ ಝೋನ್ ಅಂತ ನಿರ್ಲಕ್ಷ್ಯ ಮಾಡಬೇಡಿ. ನಿರಂತರ ಹೆಲ್ತ್ ಸ್ಕ್ರೀನಿಂಗ್ ಇರಲಿ ಎಂದಿದ್ದಾರೆ. ಮುಖ್ಯವಾಗಿ ಸಿಸಿಟಿವಿ ಅಳವಡಿಸಿ, ಸಿಕ್ಕಸಿಕ್ಕಲ್ಲಿ ಉಗುಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಜೊತೆಗೆ ಸ್ವಚ್ಛ ಬೆಂಗಳೂರಿನತ್ತ ಗಮನ ಹರಿಸಿ ಅಂತ ಸಲಹೆ ನೀಡಿದ್ದಾರೆ. ಬಿಬಿಎಂಪಿ ವಿಪತ್ತು ನಿರ್ವಹಣ ಕೋಶ ಸದ್ಬಳಕೆ ಮಾಡಿ ಕಾರ್ಮಿಕರು, ದುರ್ಬಲರು, ಗರ್ಭಿಣಿಯರು, ವಯಸ್ಸಾದವರ ಡೇಟಾ ಬೇಸ್ ರೆಡಿ ಇಟ್ಟುಕೊಳ್ಳಿ ಎಂದಿದ್ದಾರೆ.

ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಲಪಡಿಸಿ, ಜನ ಖಾಸಗಿ ಆಸ್ಪತ್ರೆಗಳತ್ತ ಹೆಚ್ಚು ಹೋಗದಂತೆ ಗಮನ ಹರಿಸಿ. ವಾರ್ಡ್ ಮಟ್ಟದಲ್ಲಿ ಆರೋಗ್ಯ ಮೇಲ್ವಿಚಾರಣೆಗೆ ಟೀಮ್ ರಚಿಸಿ, ಇಂತಿಷ್ಟು ಮನೆಯ ಸರ್ವೆ ಕಾರ್ಯವನ್ನು ನಿಗದಿ ಪಡಿಸಿ. ಯಾಕೆಂದರೆ ಲಾಕ್‍ಡೌನ್ ಸಡಿಲಿಕೆ ಎಫೆಕ್ಟ್ ಗೊತ್ತಾಗಲು ಇನ್ನೊಂದು ವಾರ ಕಾಯಬೇಕು ಎಂದಿದ್ದಾರೆ.

ಬೆಂಗಳೂರು ಜಿಲ್ಲಾಡಳಿತ ಹೊರ ಜಿಲ್ಲೆಯಿಂದ ಬರುವವರ ಕೈಗೆ ಸೀಲ್ ಹಾಕಿ, ಹೋಮ್ ಕ್ವಾರಂಟೈನ್ ಮಾಡಿ ಅಂತ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *