ಎಲೆಬಿಚ್ಚಾಲಿಯ ವಿಳ್ಯದೆಲೆಗೆ ಲಾಕ್‍ಡೌನ್ ಎಫೆಕ್ಟ್: ಮಾರುಕಟ್ಟೆಯಿಲ್ಲದೆ ನಷ್ಟದಲ್ಲಿ ಬೆಳೆಗಾರರು

Public TV
2 Min Read

ರಾಯಚೂರು: ಕೊರೊನಾ ಲಾಕ್‍ಡೌನ್ ರೈತರನ್ನು ಸಂಕಷ್ಟಕ್ಕೀಡುಮಾಡಿದೆ. ರೈತರು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಆಗುತ್ತಿಲ್ಲ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿದೆ. ರಾಯಚೂರು ತಾಲೂಕಿನ ಎಲೆಬಿಚ್ಚಾಲಿಯಲ್ಲಿ ಸಂಪ್ರಾದಾಯಿಕ ಬೆಳೆಯಾಗಿ ವಿಳ್ಯದೆಲೆ ಬೆಳೆಯುತ್ತಿದ್ದ ರೈತರು ಮಾರುಕಟ್ಟೆಯಿಲ್ಲದೆ ನಷ್ಟದಲ್ಲಿದ್ದಾರೆ.

ಜಿಲ್ಲೆಯ ತುಂಗಭದ್ರಾ ನದಿಯ ಪಕ್ಕದಲ್ಲಿರುವ ಎಲೆಬಿಚ್ಚಾಲಿ ಗ್ರಾಮ ಈ ಹಿಂದೆ ವಿಳ್ಯೆದೆಲೆಯನ್ನು ಬೆಳೆಯುವುದರಲ್ಲಿ ತುಂಬಾ ಪ್ರಸಿದ್ಧಿ ಹೊಂದಿತ್ತು. ಎಲೆ ಬೆಳೆಯುವ ಹಿನ್ನೆಲೆ ಈ ಗ್ರಾಮಕ್ಕೆ ಎಲೆಬಿಚ್ಚಾಲಿ ಎನ್ನುವ ಹೆಸರು ಬಂದಿದೆ. ಆದರೆ 1992ರಲ್ಲಿ ಬಂದ ಪ್ರವಾಹದಿಂದ ಮಣ್ಣಿನ ಗುಣಲಕ್ಷಣವೇ ಬದಲಾಗಿ ಬೆಳೆ ಬರುತ್ತಿರಲಿಲ್ಲ. ಕಳೆದ ನಾಲ್ಕು ವರ್ಷದಿಂದ ವಿಳ್ಯೆದೆಲೆಯನ್ನು ಇಲ್ಲಿಯ ರೈತರು ಪುನಃ ಬೆಳೆಯುತ್ತಿದ್ದಾರೆ. ಸುಮಾರು 20 ಎಕರೆಗೂ ಅಧಿಕ ಪ್ರದೇಶದಲ್ಲಿ ವಿಳ್ಯೆದೆಲೆಯನ್ನು ಬೆಳೆಯುತ್ತಿದ್ದಾರೆ. ಈಗ ಉತ್ತಮ ಇಳುವರಿ ಬರುತ್ತಿದ್ದರೂ ಕಳೆದ ಒಂದು ತಿಂಗಳನಿಂದ ಕೊರೊನಾ ಲಾಕ್‍ಡೌನ್ ಆಗಿ ವಿಳ್ಯೆದೆಲೆ ಮಾರಾಟ ಮಾಡಲು ಆಗುತ್ತಿಲ್ಲ.

ಲಾಕ್‍ಡೌನ್ ಆರಂಭದಲ್ಲಿ ಕೂಲಿಗಳು ಬರುತ್ತಿರಲಿಲ್ಲ. ಈಗ ಕೂಲಿಗಳನ್ನು ಕೆಲಸಕ್ಕೆ ಬಂದರೂ ವಿಳ್ಯೆದೆಲೆಯನ್ನು ಮಾರುಕಟ್ಟೆಗೆ ಕಳುಹಿಸಲು ಆಗುತ್ತಿಲ್ಲ. ಬಹುತೇಕ ಕಡೆ ಚೆಕ್ ಪೋಸ್ಟ್‌ಗಳಲ್ಲಿ ಕಿರಿಕಿರಿಯಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ವಿಳ್ಯೆದೆಲೆಯು ಅತ್ಯಧಿಕವಾಗಿ ಪಾನ್‍ಶಾಪ್‍ಗಳಲ್ಲಿ ಬಳಕೆಯಾಗುತ್ತಿತ್ತು. ಕೊರೊನಾ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಪಾನ್ ಶಾಪಗಳು ಬಂದ್ ಆಗಿವೆ. ರಾಯಚೂರು ಮಾರುಕಟ್ಟೆಗೆ ಕಳುಹಿಸುವ ವಿಳ್ಯೆದೆಲೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಬೇಕಾಗಿದೆ. ಈ ಹಿಂದೆ 2,000 ಎಲೆಗಳಿಗೆ 1,500 ರೂ.ವರೆಗೆ ದರವಿದ್ದದ್ದು ಈಗ 400 ರಿಂದ 500 ರೂಪಾಯಿಗೆ ಮಾರಾಟ ಮಾಡಬೇಕಾಗಿದೆ ಎಂದು ರೈತರು ಹೇಳಿದ್ದಾರೆ.

ಇನ್ನೊಂದು ಕಡೆ ಬೇಸಿಗೆಯ ಕಾಲ ಮದುವೆ ಸೀಜನ್ ಆಗಿದ್ದು, ಮದುವೆಯ ಸಂದರ್ಭದಲ್ಲಿ ವಿಳ್ಯೆದೆಲೆಯನ್ನು ಸೇವಿಸುತ್ತಿದ್ದರು. ಈಗ ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳು ಇಲ್ಲ. ಇದರಿಂದಾಗಿ ವಿಳ್ಯೆದೆಲೆ ಕೇಳುವವರೆ ಇಲ್ಲದಂತಾಗಿದೆ.

ಪ್ರತಿ ಎಕರೆಯಲ್ಲಿ ವಿಳ್ಯೆದೆಲೆಯನ್ನು ಬೆಳೆಯಲು ಕನಿಷ್ಠ 3ರಿಂದ 4 ಲಕ್ಷ ರೂಪಾಯಿ ಖರ್ಚು ಮಾಡುವ ರೈತರು ಈಗ ಖರ್ಚು ಸಹ ಬಾರದೆ ಸಾಲಗಾರರಾಗುತ್ತಿದ್ದಾರೆ. ಲಾಭವಾಗುವ ಸಮಯಕ್ಕೆ ಲಾಕ್‍ಡೌನ್ ಆಗಿ ರೈತ ಸಂಕಷ್ಟ ಹೆಚ್ಚಾಗುತ್ತಿವೆ. ನಷ್ಟ ಅನುಭವಿಸುತ್ತಿರುವ ರೈತ ನೆರವಿಗೆ ಸರ್ಕಾರ ಬರಬೇಕೆಂದು ಎಂದು ರೈತರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *