ಐಪಿಎಲ್ ರದ್ದುಗೊಳಿಸುವಂತೆ ಮದ್ರಾಸ್ ಹೈಕೋರ್ಟಿಗೆ ಅರ್ಜಿ

Public TV
2 Min Read

ಚೆನ್ನೈ: ಕೊರೊನಾ ವೈರನ್‍ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಿಕ್ಕಟ್ಟಿಗೆ ಸಿಲುಕಿದೆ. ಐಪಿಎಲ್ ರದ್ದುಗೊಳಿಸುವಂತೆ ಕೋರಿ ವಕೀಲ ಜಿ.ಅಲೆಕ್ಸ್ ಬೆಂಜಿಗರ್ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಬಿಸಿಸಿಐ ಐಪಿಎಲ್ ನಡೆಸದಂತೆ ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಬೇಕು ಎಂದು ಜಿ.ಅಲೆಕ್ಸ್ ಬೆಂಜಿಗರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ಬಾರಿ ಪಂದ್ಯಾವಳಿ ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಲಿದೆ. ಇದನ್ನೂ ಓದಿ: ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

ಇತ್ತ ಮಿಜೋರಾಂನ ರಾಜಧಾನಿ ಐಜ್ವಾಲ್‍ನಲ್ಲಿ ನಡೆಯಲಿರುವ ಹೀರೋ ಸಂತೋಷ್ ಟ್ರೋಫಿಯ 2019-20ರ ಅಂತಿಮ ಸುತ್ತನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಐಎಫ್‍ಎಫ್) ಮುಂದೂಡಿದೆ. ಏಪ್ರಿಲ್ 14ರಿಂದ27 ರವರೆಗೆ ಪಂದ್ಯ ನಡೆಯಬೇಕಿತ್ತು. ಫುಟ್ಬಾಲ್ ಟೂರ್ನಿ ಬೆನ್ನಲ್ಲೇ ಐಪಿಎಲ್‍ಗೂ ಈ ಬಿಸಿ ತಟ್ಟಿದೆ.

ಅರ್ಜಿಯಲ್ಲಿ ಏನಿದೆ?:
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ವೆಬ್‍ಸೈಟ್‍ನ ಪ್ರಕಾರ ಕೊರೊನಾ ವೈರಸ್‍ಗೆ ಇನ್ನೂ ಯಾವುದೇ ಔಷಧಿಯನ್ನು ಸಂಶೋಧಿಸಿಲ್ಲ. ಜೊತೆಗೆ ಅದನ್ನು ತಡೆಯಲು ಯಾವುದೇ ಮಾರ್ಗಗಳಿಲ್ಲ. ಇದು ವಿಶ್ವಾದ್ಯಂತ ವೇಗವಾಗಿ ಹರಡುತ್ತಿದ್ದು, ಭಾರೀ ಅನಾಹುತ ಸೃಷ್ಟಿಸಿದೆ. ಇಟಲಿ ಫುಟ್ಬಾಲ್ ಫೆಡರೇಶನ್ ಲೀಗ್‍ಗೂ ಸಹ ಕೊರೊನಾ ವೈರಸ್ ಬಿಸಿ ತಟ್ಟಿದೆ. ಹೀಗಾಗಿ ಫುಟ್ಬಾಲ್ ಟೂರ್ನಿಯನ್ನು ಏಪ್ರಿಲ್‍ನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಐಪಿಎಲ್‍ಗೆ ಸಂಬಂಧಿಸಿದಂತೆ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಕೀಲ ಜಿ.ಅಲೆಕ್ಸ್ ಬೆಂಜಿಗರ್ ಮನವಿ ಮಾಡಿಕೊಂಡಿದ್ದಾರೆ.

ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಎಂ.ಎಂ.ಸುಂದ್ರೇಶ್ ಹಾಗೂ ಕೃಷ್ಣನ್ ರಾಮಸ್ವಾಮಿ ಅವರ ನೇತೃತ್ವದ ನ್ಯಾಯಪೀಠವು ಮಾರ್ಚ್ 12ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಭಾರತದಲ್ಲಿ ಬುಧವಾರದವರೆಗೆ ಒಟ್ಟು 61 ಕೊರೊನ ವೈರಸ್ ಪ್ರಕರಣಗಳು ವರದಿಯಾಗಿವೆ. ಕೊರೊನಾ ಸೋಂಕನ್ನು ತಡೆಗಟ್ಟಲು ಸರ್ಕಾರ ಮತ್ತು ಆರೋಗ್ಯ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಮಂಗಳವಾರ ದೇಶಾದ್ಯಂತ 14 ಹೊಸ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಕೇರಳ 8 ಪ್ರಕರಣ, ಪುಣೆ ಹಾಗೂ ಕರ್ನಾಟಕದಲ್ಲಿ ತಲಾ ಮೂರು ಪ್ರಕರಣಗಳು ವರದಿಯಾಗಿವೆ.

ಜಿ.ಅಲೆಕ್ಸ್ ಬೆಂಜಿಗರ್ ಅವರು ಈ ಹಿಂದೆ ಐಪಿಎಲ್ ನಡೆಸದಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಅಧಿಕಾರಿಗಳಿಂದ ಅವರಿಗೆ ಯಾವುದೇ ರೀತಿಯ ಉತ್ತರ ಸಿಗಲಿಲ್ಲ. ಹೀಗಾಗಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗಷ್ಟೇ ಮಾತನಾಡಿ, ಐಪಿಎಲ್ ರದ್ದು ಅಥವಾ ಮುಂದೂಡುವುದನ್ನು ತಳ್ಳಿಹಾಕಿದ್ದಾರೆ. ಕೊರೊನಾ ವೈರಸ್ ಐಪಿಎಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *