ನವದೆಹಲಿ: ವರ್ಷಾಂತ್ಯದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿ ನಡೆಯಲಿದೆ ಎಂದು ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ.
ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಐಪಿಎಲ್ ಅನ್ನು ಮಾರ್ಚ್ 29ರಿಂದ ಏಪ್ರಿಲ್ 15ರವರೆಗೆ ಮುಂದೂಡಲಾಗಿದೆ. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಟೂರ್ನಿ ನಡೆಯುತ್ತೋ, ಇಲ್ಲವೋ ಎನ್ನುವ ಗೊಂದಲ ಇನ್ನೂ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರು, ಐಪಿಎಲ್ ಟೂರ್ನಿ ವರ್ಷದ ಕೊನೆಯಲ್ಲಿ ನಡೆಯಬಹದು. ಏಪ್ರಿಲ್-ಆಗಸ್ಟ್ ಮಧ್ಯನಲ್ಲಿ ಟೂರ್ನಿ ನಡೆಸಲು ಸಾಧ್ಯವೇ ಇಲ್ಲ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಐಪಿಎಲ್ ನಡೆಯಲೇಬೇಕು’: ಟೂರ್ನಿ ನಡೆಸುವ ಬಗ್ಗೆ ಪೀಟರ್ಸನ್ ಸಲಹೆ
ಸಂದರ್ಶನವೊಂದರಲ್ಲಿ ಮಾತನಾಡಿದ ನೆಹ್ರಾ, ‘ಏಪ್ರಿಲ್‍ನಲ್ಲಿ ಐಪಿಎಲ್ ನಡೆಸುವ ಸಾಧ್ಯತೆ ತೀರಾ ಕಡಿಮೆ ಇದೆ. ಟೂರ್ನಿಯನ್ನು ಆಗಸ್ಟ್ ಗೆ ಮುಂದೂಡಿದರೆ ಆಗ ಮಳೆಗಾಲ ಇರುತ್ತದೆ. ಹೀಗಾಗಿ ಅನೇಕ ಪಂದ್ಯಗಳು ರದ್ದಾಗುವ ಸಾಧ್ಯತೆ ಇರುತ್ತದೆ. ಅಕ್ಟೋಬರ್ ವೇಳೆಗೆ ವಿಶ್ವವ್ಯಾಪಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದರೆ ವರ್ಷದ ಕೊನೆಯಲ್ಲಿ ಐಪಿಎಲ್ ನಡೆಯಬಹುದು ಎಂಬ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.
ಆಶಿಶ್ ನೆಹ್ರಾ ಇದುವರೆಗೆ ಐಪಿಎಲ್‍ನಲ್ಲಿ 88 ಪಂದ್ಯಗಳನ್ನು ಆಡಿದ್ದು, 23.54 ಸರಾಸರಿಯಲ್ಲಿ 106 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ಆಸೀಸ್ ಆಟಗಾರರು ವಿರಾಟ್ ವಿರುದ್ಧ ಸ್ಲೆಡ್ಜಿಂಗ್ ಮಾಡಲು ಹೆದರುತ್ತಾರೆ: ಕ್ಲಾರ್ಕ್
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಸ್ಟೀವ್ ಸ್ಮಿತ್ ಹಾಗೂ ಇಂಗ್ಲೆಂಡ್ ಕ್ರಿಕೆಟರ್ ಜೋಸ್ ಬಟ್ಲರ್ ಕೂಡ, ಈ ವರ್ಷ ಐಪಿಎಲ್ ನಡೆಯಲಿದೆ ಎಂಬ ಭರವಸೆ ಇದೆ. ಆದರೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಸಹ ಅಕ್ಟೋಬರ್‍ನಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ ನಡೆಸುವುದು ಬಿಸಿಸಿಐಗೆ ಸವಾಲಿನ ಕೆಲಸವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್
ಇತ್ತ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಅವರನ್ನು ನೋಡಿ ಉತ್ಸುಕನಾಗಿದ್ದೇನೆ ಎಂದಿದ್ದರು. ರಾಜಸ್ಥಾನ್ ರಾಯಲ್ಸ್ ಫೇಸ್‍ಬುಕ್ ಪುಟದಲ್ಲಿ ಸಹ ಆಟಗಾರ ಇಶ್ ಸೋಧಿ ಅವರೊಂದಿಗಿನ ಸಂಭಾಷಣೆಯಲ್ಲಿ ಸ್ಮಿತ್ ಈ ವಿಷಯ ತಿಳಿಸಿದ್ದರು.
ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಈ ಹಿಂದೆ ಮಾತನಾಡಿ, ಜಗತ್ತಿನಾದ್ಯಂತ ಜನರು ಇಂದು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯನ್ನು ನೋಡಿದರೆ ನಾವು ಇದೀಗ ಕ್ರಿಕೆಟ್ ಬಗ್ಗೆ ಯೋಚಿಸಬಾರದು. ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಯುದ್ಧದಂತೆ ಒಟ್ಟಿಗೆ ಹೋರಾಡಬೇಕಾಗಿದೆ. ಪರಿಸ್ಥಿತಿಯನ್ನು ನಿವಾರಿಸುವುದು ನಮ್ಮ ಮೊದಲ ಪ್ರಯತ್ನವಾಗಬೇಕು. ಆ ಬಳಿಕ ನಾವು ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದರು.