ಕೊರೊನಾಗೆ ಬೆಚ್ಚಿದ ಯುರೋಪ್ – ಇಟಲಿ ಬಳಿಕ ಈಗ ಡೆನ್ಮಾರ್ಕ್ ಲಾಕ್

Public TV
3 Min Read

– ಶಾಲಾ, ಕಾಲೇಜುಗಳು ಬಂದ್, ಒಂದೇ ವಾರದಲ್ಲಿ 442 ಕೇಸ್ ದಾಖಲು
– ಯುರೋಪ್ ದೇಶಗಳ ಪ್ರವಾಸಿಗರ ಭೇಟಿಗೆ ಟ್ರಂಪ್ ನಿರ್ಬಂಧ
– ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಡಬ್ಲ್ಯೂಎಚ್‍ಒ
– ಇಟಲಿಯಲ್ಲಿ ಆಹಾರ, ಮೆಡಿಕಲ್ ಶಾಪ್ ತೆರೆಯಲು ಮಾತ್ರ ಅನುಮತಿ

ಕೋಪನ್ ಹೇಗನ್/ ಜಿನೀವಾ/ ವಾಷಿಂಗ್ಟನ್: ಇಟಲಿ ಬಳಿಕ ಯುರೋಪ್ ಖಂಡದ ಡೆನ್ಮಾರ್ಕ್ ಈಗ ಭಾಗಶ: ಲಾಕ್ ಆಗಿದೆ. ಈ ವಾರದಲ್ಲಿ 442 ಪ್ರಕರಣಗಳು ದಾಖಲಾಗುತ್ತಿದ್ದಂತೆ ಡೆನ್ಮಾರ್ಕ್ ಸರ್ಕಾರ 2 ವಾರಗಳ ಕಾಲ ಎಲ್ಲ ಶಾಲೆ, ವಿಶ್ವವಿದ್ಯಾಲಯಗಳನ್ನು ಮುಚ್ಚುವಂತೆ ಆದೇಶಿಸಿದೆ.

ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು 100ಕ್ಕೂ ಹೆಚ್ಚು ಜನ ಭಾಗವಹಿಸುವ ಸಾರ್ವಜನಿಕ ಸಮಾರಂಭವನ್ನು ನಿಷೇಧಿಸಿದೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಬೇಕೆಂದು ಕಂಪನಿಗಳಿಗೆ ಸೂಚಿಸಿದೆ.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡೆನ್ಮಾರ್ಕ್ ಪ್ರಧಾನಿ ಫ್ರೆಡಿರಿಕ್ಸೆನ್, ಬಹಳ ವೇಗವಾಗಿ ಕೊರೊನಾ ಹಬ್ಬುತ್ತಿದೆ. ಇದನ್ನು ನಿಯಂತ್ರಿಸಲು ಕಠಿಣ ನಿಯಮ ಪಾಲನೆ ಮಾಡುವುದು ಅಗತ್ಯವಾಗಿದೆ. ಉದ್ಯಮಗಳು ಮುಚ್ಚಬೇಕು. ಕೆಲವರು ಉದ್ಯೋಗ ಕಳೆದುಕೊಳ್ಳಬಹುದು. ಆದರೆ ರೋಗ ನಿಯಂತ್ರಿಸಲು ನಾವೆಲ್ಲರೂ ಸಹಕರಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಡೆನ್ಮಾರ್ಕಿನಲ್ಲಿ ಇಲ್ಲಿಯವರೆಗೆ 514 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ. ಆದರೆ ಬಹಳ ವೇಗವಾಗಿ ಹರಡುತ್ತಿರುವ ಕಾರಣ ಡೆನ್ಮಾರ್ಕ್ ಎಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದೆ.

ಸಾಂಕ್ರಾಮಿಕ ರೋಗ: ಕೊರೊನಾ ವೈರಸ್ ಸೋಂಕು ಹರಡುವ ಪ್ರಮಾಣ ತೀವ್ರಗೊಂಡಿರುವುದರಿಂದ ಕೋವಿಡ್ 19 ಸಾಂಕ್ರಾಮಿಕ ರೋಗ ಎಂದು ಘೋಷಿಸಬಹುದು ಎಂದು ವಿಶ್ವ ಆರೋಗ್ಯ (ಡಬ್ಲ್ಯೂಎಚ್‍ಒ) ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಸೋಂಕು ತ್ರೀವ್ರವಾಗಿ ಹರಡುತ್ತಿದ್ದರೂ ಸರ್ಕಾರಗಳು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಇದು ಕಳವಳಕಾರಿ ವಿಚಾರ ಎಂದು ಹೇಳಿದರು.

ಸಾಧಾರಣವಾಗಿ ಒಂದು ರೋಗವನ್ನು ಡಬ್ಲ್ಯೂಎಚ್‍ಒ ಸಾಂಕ್ರಾಮಿಕ ರೋಗ ಎಂದು ಘೋಷಿಸುವುದಿಲ್ಲ. ಆರಂಭದಲ್ಲಿ ಅದು ‘ಅಪಾಯಕಾರಿ’ ಅಥವಾ ‘ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು’ ಎಂದು ಹೇಳುತ್ತದೆ. ಆದರೆ ಈಗ ಕೊರೊನಾ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಡಬ್ಲ್ಯೂಎಚ್‍ಒ ಇದನ್ನು ಸಾಂಕ್ರಾಮಿಕ ರೋಗ ಎಂದು ಕರೆದಿದೆ.

ಯುರೋಪಿಯನ್ನರಿಗೆ ನಿರ್ಬಂಧ: ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳು ಕೊರೊನಾ ತಟೆಗಟ್ಟಲು ವಿಫಲವಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಎಲ್ಲ ರಾಷ್ಟ್ರಗಳು ಎಚ್ಚೆತ್ತುಕೊಳ್ಳುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾಷ್ಟ್ರವನ್ನು ಉದ್ದೇಶಿಸಿ, ಶುಕ್ರವಾರ ಮಧ್ಯರಾತ್ರಿಯಿಂದ ಯುರೋಪ್ ರಾಷ್ಟ್ರಗಳ ಪ್ರವಾಸಿಗರು ಅಮೆರಿಕಕ್ಕೆ ಬರುವುದಕ್ಕೆ ನಿರ್ಬಂಧ ಹೇರಿದ್ದಾರೆ. 30 ದಿನಗಳ ಕಾಲ ಈ ಆದೇಶ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ. ತಮ್ಮ ಭಾಷಣದಲ್ಲಿ ಯುರೋಪ್ ರಾಷ್ಟ್ರಗಳ ವಿರುದ್ಧ ಕಿಡಿಕಾರಿದ ಟ್ರಂಪ್, ಯುರೋಪ್ ರಾಷ್ಟ್ರಗಳು ಕೊರೊನಾ ಹರಡದಂತೆ ತಡೆಯಲು ವಿಫಲವಾಗಿದೆ ಎಂದು ದೂರಿದರು.

ಎಲ್ಲ ಅಂಗಡಿ ಕ್ಲೋಸ್: ಯುರೋಪ್ ಖಂಡದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ಇಟಲಿಯಲ್ಲಿ ಎಲ್ಲ ಆಸ್ಪತ್ರೆಗಳು ಭರ್ತಿಯಾಗಿದ್ದು ರೋಗಿಗಳು ಚಿಕಿತ್ಸೆ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಸರ್ಕಾರ ಆಹಾರ ಮತ್ತು ಫಾರ್ಮಸಿ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಿದ್ದು ಎಲ್ಲ ಹೋಟೆಲ್, ಬಾರ್ ಸೇರಿದಂತೆ ಎಲ್ಲ ಅಂಗಡಿಗಳು ಮಾರ್ಚ್ 25ರವರೆಗೆ ಮುಚ್ಚಬೇಕು ಎಂದು ಸರ್ಕಾರ ಆದೇಶಿಸಿದೆ.

ಎಷ್ಟು ಕೇಸ್?
ಇಲ್ಲಿಯವರೆಗೆ ಚೀನಾ(90,796 ಕೇಸ್, 3,169 ಸಾವು), ಇಟಲಿ(12,462 ಕೇಸ್, 827 ಸಾವು), ಇರಾನ್ (9 ಸಾವಿರ ಕೇಸ್, 354 ಸಾವು) ದಕ್ಷಿಣ ಕೊರಿಯಾ(7,869 ಕೇಸ್, 66 ಸಾವು), ಫ್ರಾನ್ಸ್ (2,281 ಕೇಸ್, 48 ಸಾವು), ಸ್ಪೇನ್(2,277 ಕೇಸ್, 55 ಸಾವು), ಜರ್ಮನಿ(1,966 ಕೇಸ್, 3 ಸಾವು), ಅಮೆರಿಕ(1,329 ಕೇಸ್, 38 ಸಾವು) ಭಾರತ(73 ಕೇಸ್) ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *