ಕೊರೊನಾ ಎಫೆಕ್ಟ್- ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳಿಗೆ ಭಾರೀ ಬೇಡಿಕೆ

Public TV
3 Min Read

– ಮೂರು ತಿಂಗಳು ತಾಯ್ತನ ಮುಂದೂಡಲು ವೈದ್ಯರ ಸಲಹೆ
– ಕಾಂಡೋಮ್ ಕಂಪನಿಗಳ ಷೇರು ಖರೀದಿಸುತ್ತಿದ್ದಾರೆ ಜನ

ಲಂಡನ್: ಕೊರೊನಾ ವೈರಸ್ ಪೀಡಿತ ಪ್ರದೇಶಗಳ ಮಳಿಗೆಗಳಲ್ಲಿ ಟಾಯ್ಲೆಟ್ ಪೇಪರ್ ಹಾಗೂ ಹ್ಯಾಂಡ್ ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್‍ಗಳೇ ಹೆಚ್ಚಾಗಿ ಮಾರಾಟವಾಗುತ್ತಿವೆ. ಚಿಲ್ಲರೆ ವ್ಯಾಪಾರಿಗಳು ಇದ್ದಕ್ಕಿದ್ದಂತೆ ಕಾಂಡೋಮ್ ಕೊರತೆಯನ್ನು ಅನುಭವಿಸುತ್ತಿದ್ದಾರೆ ಎಂದು ಇಂಗ್ಲೆಂಡ್‍ನ ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಕೆಲವು ಜನರು ಆಹಾರ ಹಾಗೂ ಸ್ವಚ್ಛತೆಗೆ ಬಳಸುವ ಉತ್ಪನ್ನಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಆದರೆ ಕೆಲವರು ಕಾಂಡೋಮ್‍ಗಳನ್ನು ಸಂಗ್ರಹಿಸುತ್ತಿದ್ದಾರೆ. ವಾಸ್ತವವಾಗಿ ಅಧ್ಯಯನಗಳ ಪ್ರಕಾರ, ಕೊರೊನಾ ಭೀತಿ ಹೀಗೆ ಮುಂದುವರಿದರೆ ಲೈಂಗಿಕ ಸಂಪರ್ಕ ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚಿನ ದಂಪತಿ ಕಾಂಡೋಮ್‍ಗಳನ್ನು ಹೆಚ್ಚಾಗಿ ಖರೀದಿಸಿ ಸಂಗ್ರಹಿಸಿಕೊಟ್ಟುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಾಸ್ಕ್ ಕೊರತೆ ನೀಗಿಸಲು ಮುಂದಾದ ಮಹಿಳಾ ಸ್ವಸಹಾಯ ಸಂಘ

ಮಾಧ್ಯಮವೊಂದರ ಪ್ರಕಾರ, ಚೀನಾದಲ್ಲಿ ಮಾಸ್ಕ್, ವೈದ್ಯಕೀಯ ಸಾಮಗ್ರಿಗಳಂತೆ ಕಾಂಡೋಮ್‍ಗಳು ಕೂಡ ಭಾರೀ ಸಂಖ್ಯೆಯಲ್ಲಿ ಮಾರಟವಾಗುತ್ತಿವೆ. ಜಾಗತಿಗ ಮಾರುಕಟ್ಟೆ ಕುಸಿಯುತ್ತಿರುವ ಸಂದರ್ಭದಲ್ಲಿಯೂ ಕಾಂಡೋಮ್ ಕಂಪನಿಗಳು ಆರ್ಥಿಕವಾಗಿ ಭರ್ಜರಿ ಲಾಭ ಗಳಿಸುತ್ತಿವೆ. ಜನರು ಕಾಂಡೋಮ್ ಕಂಪನಿಗಳ ಷೇರನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್ – ರಾಜಾಮೌಳಿ ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಔಟ್

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಡೇಟಿಂಗ್ ವೇಳೆಯೂ ಪ್ರಮುಖ ಕಾಳಜಿವಹಿಸಬೇಕಾಗುತ್ತದೆ. ಡೇಟಿಂಗ್ ಅಪ್ಲಿಕೇಶನ್‍ಗಳು ಈಗ ಬಳಕೆದಾರರಿಗೆ ಜಾಗೃತಿಯ ಬಗ್ಗೆ ಗಮನಹರಿಸಬೇಕು ಎಂದು ತಿಳಿಸುತ್ತಿವೆ. ಜೊತೆಗೆ ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿರುವ ಹಿನ್ನೆಲೆ ಮೂರು ತಿಂಗಳುಗಳ ಕಾಲ ತಾಯ್ತನ ಮುಂದೂಡಿಕೆ ಮಾಡಿಕೊಂಡರೆ ಒಳ್ಳೆಯದು ಎಂದು ಅನೇಕ ವೈದ್ಯರು ಸಲಹೆ ನೀಡಿದ್ದಾರೆ.

ಇಂಗ್ಲೆಂಡ್‍ನಲ್ಲಿ ಜನಿಸಿದ ನವಜಾತ ಶಿಶುವಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ವೈದ್ಯರು ಮಹಿಳೆಯರಿಗೆ ತಮ್ಮ ತಾಯ್ತನವನ್ನು ಮುಂದೂಡಿಕೆ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಇಂಗ್ಲೆಂಡ್‍ನಲ್ಲಿ ತಾಯಿಗೆ ಸೋಂಕು ಇದ್ದ ಕಾರಣ ಅದು ಮಗುವಿಗೂ ತಗುಲಿತ್ತು. ತಾಯಿಗೆ ಹೆರಿಗೆಯ ಮೊದಲು ಕೊರೊನಾ ಸೋಂಕು ತಟ್ಟಿರುವ ಶಂಕೆ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಆದರೆ ಅದರ ವರದಿ ತಾಯಿ ಮಗುವಿಗೆ ಜನ್ಮ ಕೊಟ್ಟ ನಂತರ ಬಂದಿತ್ತು. ಹೀಗಾಗಿ ಆಗ ತಾನೆ ಹುಟ್ಟಿದ ಶಿಶುವಿಗೂ ಸೋಂಕು ಹರಡಿತ್ತು. ವಿಶ್ವದಲ್ಲೇ ಅತೀ ಚಿಕ್ಕ ವಯಸ್ಸಿಗೆ ಕೊರೊನಾ ಸೋಂಕು ತಟ್ಟಿದ ಪ್ರಕರಣ ಇದಾಗಿದ್ದು, ಲಂಡನ್‍ನಲ್ಲಿರುವ ಆಸ್ಪತ್ರೆಯಲ್ಲಿ ತಾಯಿ, ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕೊರೊನಾ ಜೊತೆ ಸೆಲ್ಫಿಗೆ ಮುಂದಾದ ಜನ

ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದ ಸ್ತ್ರಿರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್, ತಾಯ್ತನ ಮಹಿಳೆಯರ ಬಾಳಿನ ಪ್ರಮುಖ ಘಟ್ಟ. ಆದರೆ ಸದ್ಯ ಎಲ್ಲೆಡೆ ಕೊರೊನಾ ವೈರಸ್ ಭೀತಿ ಇರುವ ಕಾರಣಕ್ಕೆ ತಾಯ್ತನದ ಪ್ಲಾನ್ ಮಾಡಿದ ದಂಪತಿ ಇನ್ನು ಮೂರು ತಿಂಗಳ ಕಾಲ ಈ ಪ್ಲಾನ್ ಮುಂದೂಡಿಕೆ ಮಾಡಿದರೆ ಉತ್ತಮ ಅಂತ ಪದ್ಮಿನಿ ಅವರು ಸಲಹೆ ನೀಡಿದ್ದಾರೆ. ಗರ್ಭಧಾರಣೆಯಾದರೆ ಆಸ್ಪತ್ರೆಗೆ ಭೇಟಿ ಕೊಡಬೇಕಾಗುತ್ತೆ. ಈ ಸಮಯದಲ್ಲಿ ಸೋಂಕು ತಗುಲುವ ಭೀತಿ ಇರುತ್ತೆ. ಅಲ್ಲದೇ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಒಳ್ಳೆಯದು ಎಂದು ಸಲಹೆ ನೀಡಿದ್ದರು.

ಅಷ್ಟೇ ಅಲ್ಲದೇ ಕೊರೊನಾ ಭೀತಿಯಲ್ಲಿ ರೋಗಿಗಳಿಗೆ ಆಪರೇಷನ್ ಮುಂದೂಡಿಕೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ತೀರಾ ಎಮರ್ಜೆನ್ಸಿ ಅಲ್ಲದ ನಿಗದಿಯಾಗಿರುವ ಆಪರೇಷನ್ ಮುಂದೂಡಿಕೆ ಮಾಡಲು ವೈದ್ಯರು ರೋಗಿಗಳಿಗೆ ಸೂಚಿಸುತ್ತಿದ್ದಾರೆ. ಕೊರೊನಾ ಭೀತಿಯಿಂದ ತಾಯ್ತನದ ಪ್ಲಾನ್ ಮುಂದೂಡಿಕೆ ಮಾಡೋದೋ ಬೇಡ್ವೋ ಅಂತ ಕನ್‍ಫ್ಯೂಷನ್‍ನಲ್ಲಿ ದಂಪತಿಗಳು ವೈದ್ಯರ ಮೊರೆ ಹೋಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *