ಹಿಟ್ಟಿನ ಬ್ಯಾಗ್‍ನಲ್ಲಿ ಹಣ: ಅಮೀರ್ ಖಾನ್ ಸ್ಪಷ್ಟನೆ

Public TV
2 Min Read

ನವದೆಹಲಿ: ಹಿಟ್ಟಿನ ಬ್ಯಾಗ್‍ಗಳಲ್ಲಿ ಗರಿ ಗರಿ ನೋಟುಗಳು ಪತ್ತೆಯಾಗಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದವು. ಬಡವರಿಗಾಗಿ ಬಾಲಿವುಡ್ ನಟ ಅಮಿರ್ ಖಾನ್ ಈ ಹಣ ಇಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿ ದೇಶಾದ್ಯಂತ ಹರಿದಾಡಿತ್ತು. ಅಲ್ಲದೆ ಸಾಕಷ್ಟು ಚರ್ಚೆ ಸಹ ನಡೆದಿತ್ತು. ಇದೀಗ ಸ್ವತಃ ಅಮಿರ್ ಖಾನ್ ಅವರು ಟ್ವೀಟ್ ಮಾಡುವ ಮೂಲಕ ಎಲ್ಲ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಹೌದು ಕೆಲ ದಿನಗಳ ಹಿಂದೆ ಸಾಕಷ್ಟು ಚರ್ಚೆಯಾಗಿದ್ದ ಗೋಧಿ ಹಿಟ್ಟಿನ ಬ್ಯಾಗ್‍ಗಳಲ್ಲಿ ಗರಿ ಗರಿ ನೋಟಿನ ಕಂತೆ ಇರುವ 15 ಸಾವಿರ ರೂ. ಪತ್ತೆಯಾಗಿತ್ತು. ಲಾಕ್‍ಡೌನ್‍ನಿಂದ ಬೆಂದು ಬಸವಳಿದ ಜನರಿಗೆ ಆಹಾರ ನೀಡಿದ್ದರೆ ಸಾಕಿತ್ತು ಸಮಾಧಾನ ಪಟ್ಟುಕೊಳ್ಳುತ್ತಾರೆ. ಆದರೆ ಯಾರೋ ಅನಾಮಿಕರು ಒಂದು ಕೆ.ಜಿ.ಗೋಧಿ ಹಿಟ್ಟಿನ ಚೀಲದಲ್ಲಿ 15 ಸಾವಿರ ರೂ. ಇಟ್ಟು ವಿತರಿಸಿದ್ದರು. ಪಡೆದವರಿಗೆ ಸಂತಸವಾದರೆ, ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಅಮಿರ್ ಖಾನ್ ಮಾಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಕಾರಣ ಅಮಿರ್ ಖಾನ್ ಅವರ ಸಹಾಯ ಮಾಡುವ ಗುಣ ಹಾಗೂ ಸಹಾಯ ಮಾಡಿದ್ದನ್ನು ಎಲ್ಲೂ ಹೇಳಿಕೊಳ್ಳದ ಸ್ವಭಾವ.

ಈ ಎಲ್ಲ ಬೆಳವಣಿಗೆಗಳ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಹಲವರು ಇನ್ನೂ ಅಮಿರ್ ಖಾನ್ ಅವರೇ ನೀಡಿದ್ದಾರೆ ಎಂದು ನಂಬಿದ್ದಾರೆ. ಹಣ ನೀಡಿದ್ದಕ್ಕೆ ಹಲವರು ವಿಡಿಯೋ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದರು. ಆದರೆ ಈ ಕುರಿತು ಸ್ವತಃ ಅಮಿರ್ ಖಾನ್ ಅವರು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್‍ನಲ್ಲಿ ಸ್ಪಷ್ಟಪಡಿಸಿರುವ ಅವರು, ಗೋಧಿ ಹಿಟ್ಟಿನ ಚೀಲಗಳಲ್ಲಿ ಹಣ ಇಟ್ಟ ವ್ಯಕ್ತಿ ನಾನಲ್ಲ. ಇಂದು ಸಂಪೂರ್ಣ ಸುಳ್ಳು ಸುದ್ದಿ, ರಾಬಿನ್ ಹುಡ್ ತನ್ನ ಬಗ್ಗೆ ರಿವೀಲ್ ಮಾಡಲು ಬಯಸುವುದಿಲ್ಲ. ಸ್ಟೇ ಸೇಫ್, ಲವ್ ಎಂದು ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ.

ದೆಹಲಿಯ ಕೆಲವು ಭಾಗಗಳಲ್ಲಿ ಹಣವಿದ್ದ ಒಂದು ಕೆ.ಜಿ.ಗೋಧಿ ಹಿಟ್ಟಿನ ಬ್ಯಾಗ್ ವಿತರಿಸಲಾಗಿತ್ತು. ಹೆಚ್ಚೇನು ಆಹಾರ ಪದಾರ್ಥ ನೀಡದೆ ಕೇವಲ ಒಂದು ಕೆ.ಜಿ.ಗೋಧಿ ಹಿಟ್ಟಿನ ಬ್ಯಾಗ್ ನೀಡಿದ್ದಕ್ಕೆ ಹಲವರು ಮೂಗು ಮುರಿದು ಇದನ್ನು ತೆಗೆದುಕೊಂಡು ಏನು ಮಾಡುವುದು ಎಂದು ತಿರಸ್ಕರಿಸಿದ್ದರು. ತುಂಬಾ ಅವಶ್ಯವಿದ್ದವರು ಈ ಬ್ಯಾಗ್‍ಗಳನ್ನು ತೆಗೆದುಕೊಂಡಿದ್ದರು. ತೆಗೆದು ನೋಡಿದಾಗ 500 ರೂ.ನೋಟುಗಳುಳ್ಳ ಒಟ್ಟು 15 ಸಾವರ ರೂ. ಪತ್ತೆಯಾಗಿತ್ತು. ನೇರವಾಗಿ ಅವಶ್ಯಕತೆ ಇರುವವರಿಗೆ, ಬಡವರಿಗೆ ತಲುಪಲು ಈ ರೀತಿ ಮಾಡಿದ್ದಾರೆ. ಇದನ್ನು ಅಮಿರ್ ಖಾನ್ ಅವರೇ ಮಾಡಿರಬೇಕು ಎಂದು ಹೇಳಲಾಗಿತ್ತು.

ಅಮಿರ್ ಖಾನ್ ಅವರು ಈ ಕೆಲಸ ಮಾಡಿಲ್ಲ ಎನ್ನುವುದಾದರೆ, ಬ್ಯಾಗ್‍ನಲ್ಲಿ ಹಣ ಇಟ್ಟು ಹಂಚಿದವರಾರು ಎಂಬ ಪ್ರಶ್ನೆ ಇದೀಗ ಮೂಡಿದೆ. ಸದ್ಯ ಅಮಿರ್ ಖಾನ್ ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *