ದೇಶದಲ್ಲಿ ಒಂದೇ ದಿನ 1,674 ಕೊರೊನಾ ಪ್ರಕರಣ ಪತ್ತೆ

Public TV
2 Min Read

– ನೀತಿ ಆಯೋಗದ ಸಿಬ್ಬಂದಿಗೂ ಸೋಂಕು
– ಕೊರೊನಾ ಹೊಸ ಲಕ್ಷಣ ಪತ್ತೆ

ನವದೆಹಲಿ: ದೇಶಾದ್ಯಂತ ಕೊರೊನಾ ಮಹಾಮಾರಿ ತನ್ನ ವ್ಯಾಪ್ತಿ ವಿಸ್ತರಿಸುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 1,674 ಹೊಸ ಪ್ರಕರಣ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿದೆ. ಸಾವಿನ ಸಂಖ್ಯೆ ಸಾವಿರದ ಗಡಿಯತ್ತ ಮುನ್ನುಗ್ಗುತ್ತಿದೆ. ಅತ್ತ ಚೀನಾದ ಬೀಜಿಂಗ್‍ನಲ್ಲಿ ಕೊರೊನಾ ಆಸ್ಪತ್ರೆಯನ್ನು ಮುಚ್ಚಲಾಗಿದೆ.

ದೇಶದಲ್ಲಿ ಇದುವರೆಗೆ 7,000ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದು, ಚೇತರಿಸಿಕೊಳ್ಳುವವರ ಪ್ರಮಾಣ ಶೇ.23.3ಕ್ಕೆ ಹೆಚ್ಚಳ ಆಗಿದೆ. ದೆಹಲಿಯಲ್ಲಿರುವ ನೀತಿ ಆಯೋಗದ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಆತಂಕ ಸೃಷ್ಟಿಸಿದೆ.

ಕೊರೊನಾ ವಿರುದ್ಧ ಹೋರಾಡಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಭಾರತಕ್ಕೆ 1.5 ಬಿಲಿಯನ್ ಡಾಲರ್ ಸಾಲ ನೀಡಿದೆ. ಸಿಬಿಎಸ್‍ಇ ಸಿಲೆಬಸ್‍ನ 10 ಮತ್ತು 12ನೇ ತರಗತಿಯ ಉಳಿದ ವಿಷಯಗಳ ಪರೀಕ್ಷೆಗಳನ್ನು ನಡೆಸಬೇಕೋ ಬೇಡವೋ ಎಂಬ ಸಂಧಿಗ್ಧತೆ ಎದುರಾಗಿದೆ. ಇನ್ನು 10 ದಿನಗಳಲ್ಲಿ ಪರೀಕ್ಷೆ ನಡೆಸಬೇಕೋ ಅಥವಾ ಹಾಗೇ ತೇರ್ಗಡೆ ಮಾಡಬೇಕೋ ಎಂಬುದು ನಿರ್ಧಾರ ಆಗಲಿದೆ.

ದೇಶದಲ್ಲಿ ಪ್ಲಾಸ್ಮಾ ಥೆರಪಿ ಪ್ರಾಯೋಗಿಕ ಪರೀಕ್ಷೆಗಷ್ಟೇ ಅನುಮತಿ ನೀಡಲಾಗಿದೆ. ಎಲ್ಲ ಸೋಂಕಿತರಿಗೆ ಇದನ್ನು ಬಳಸಲು ಅವಕಾಶ ಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮಧ್ಯೆ ಸೋಂಕಿತರ ಕ್ವಾರಂಟೈನ್‍ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಅತಿ ಕಡಿಮೆ ರೋಗ ಲಕ್ಷಣ ಉಳ್ಳ ಸೋಂಕಿತರು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬಹುದು. ಆದರೆ ಇದನ್ನು ವೈದ್ಯರು ದೃಢೀಕರಿಸಬೇಕು. ಕಡಿಮೆ ರೋಗ ಲಕ್ಷಣ ಉಳ್ಳವರು ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು. ತಮ್ಮ ಕುಟುಂಬಸ್ಥರನ್ನು ಕ್ವಾರಂಟೈನ್‍ನಲ್ಲಿ ಇರಿಸಬೇಕು. ಇಂಥವರನ್ನು ನೋಡಿಕೊಳ್ಳಲು ದಿನದ 24 ಗಂಟೆಯೂ ನುರಿತ ನರ್ಸ್‍ಗಳು ಲಭ್ಯ ಇರಬೇಕು. ನರ್ಸ್‍ಗಳು ವೈದ್ಯರ ಸಲಹೆ ಪಡೆದು ಹೈಡ್ರಾಕ್ಸಿ ಕ್ಲೋರೋಕ್ವಿನ್, ಪ್ರೋಫಿಲ್ಯಾಕ್ಸಿನ್ ತೆಗೆದುಕೊಳ್ಳುವುದು ಕಡ್ಡಾಯ. ಅಲ್ಲದೆ ಮೊಬೈಲ್‍ನಲ್ಲಿ ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಆಕ್ಟೀವ್‍ನಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ.

ಕೊರೊನಾ ಹೊಸ ಲಕ್ಷಣ
ಕೊರೊನಾ ವೈರಸ್ ಸೋಂಕಿರುವ ಮಧ್ಯ ವಯಸ್ಕರಲ್ಲಿ ಪಾಶ್ರ್ವವಾಯು ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕಾ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಶ್ವಾಸಕೋಶ ಸೇರುವ ವೈರಸ್‍ನಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ನಂತರ ಇದು ರಕ್ತಚಲನೆ ಮೇಲೆ ಪರಿಣಾಮ ಬೀರಿ, ಅಂಗಾಂಗಳಿಗೆ ಸ್ಟ್ರೋಕ್ ಹೊಡೆಯುವ ಸಾಧ್ಯತೆ ಇದೆ ಎಂದು ಅಮೆರಿಕಾ ವೈದ್ಯರು ಎಚ್ಚರಿಸಿದ್ದಾರೆ. ಅಮೆರಿಕಾದ ವೈದ್ಯರ ವರದಿ ಪ್ರಕಾರ, 30ರಿಂದ 40ರ ವಯಸ್ಸಿನ ಕೊರೊನಾ ರೋಗಿಗಳು ಸೋಂಕಿಗೆ ತುತ್ತಾದ ಬಳಿಕ ಪಾಶ್ರ್ವವಾಯು ಪೀಡಿತರಾಗಿದ್ದಾರೆ. ಈ ಪೈಕಿ ಹಲವರು ಸಾವನ್ನಪ್ಪಿದ್ದಾರೆ. ಇದೇ ರೀತಿಯ ಪ್ರಕರಣಗಳು ಚೀನಾದಲ್ಲೂ ಕಂಡು ಬಂದಿದೆ. ಪಾಶ್ರ್ವವಾಯುಗೆ ತುತ್ತಾಗುವ ಪ್ರಮಾಣ ಕಡಿಮೆಯಿದ್ದರೂ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.

ವಿಶ್ವದಲ್ಲಿ ಮಹಾಮಾರಿ ಕೊರೊನಾ ಆರ್ಭಟಕ್ಕೆ ಮಿತಿಯೇ ಇಲ್ಲದಂತಾಗಿದ್ದು, ಸೋಂಕಿತರ ಸಂಖ್ಯೆ 31 ಲಕ್ಷದ ಸನಿಹದಲ್ಲಿದೆ. ಇದುವರೆಗೆ ಕೊರೊನಾಗೆ 2.12 ಲಕ್ಷ ಜನ ಸಾವನ್ನಪ್ಪಿದ್ದಾರೆ. ಸುಮಾರು 9 ಲಕ್ಷದಷ್ಟು ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಚೀನಾದ ಬೀಜಿಂಗ್‍ನಲ್ಲಿ ಕೊರೊನಾ ಆಸ್ಪತ್ರೆಯನ್ನು ಮುಚ್ಚಲಾಗಿದೆ. ನೈಜೀರಿಯಾದಲ್ಲಿ ಮೇ 4ರವರೆಗೆ ಲಾಕ್‍ಡೌನ್ ವಿಸ್ತರಣೆ ಆಗಿದೆ. ಅರ್ಜೆಂಟಿನಾದಲ್ಲಿ ಸೆಪ್ಟೆಂಬರ್ 1ರವರೆಗೆ ವಿಮಾನ ಸಂಚಾರ ಬಂದ್ ಮಾಡಲಾಗಿದೆ. ಟೋಕಿಯೋ ಒಲಿಂಪಿಕ್ ಮುಂದಿನ ವರ್ಷವೂ ನಡೆಯೋದು ಅನುಮಾನ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *