24 ಗಂಟೆಯಲ್ಲಿ 905 ಪ್ರಕರಣ- ಜಗತ್ತಿನಾದ್ಯಂತ 1.90 ಲಕ್ಷಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

Public TV
3 Min Read

ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 905 ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 10ಸಾವಿರ ಸಮೀಪಿಸಿದೆ. ಭಾನುವಾರದಿಂದ 51 ಮಂದಿ ಮೃತರಾಗಿದ್ದು, ಕೊರೊನಾಗೆ ಬಲಿಯಾದವರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ.

ತಮಿಳುನಾಡಿನಲ್ಲಿ ಇಂದು 98 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಇದರಲ್ಲಿ 91 ಮಂದಿಗೆ ಒಬ್ಬನಿಂದಲೇ ಸೋಂಕು ಹರಡಿದೆ. ಇದರಲ್ಲಿ 10 ವರ್ಷದೊಳಗಿನ 31 ಮಕ್ಕಳಿವೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2 ಸಾವಿರ ದಾಟಿದ್ದು, ಇಲ್ಲಿ 150 ಮಂದಿ ಸಾವನ್ನಪ್ಪಿದ್ದಾರೆ. ನಂತರದ ಸ್ಥಾನದಲ್ಲಿ ತಮಿಳುನಾಡು, ದೆಹಲಿ, ರಾಜಸ್ತಾನ, ಮಧ್ಯಪ್ರದೇಶಗಳಿವೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ಸಾವಿರದ ನೂರು ದಾಟಿದೆ. ಈವರೆಗೆ 2 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಟೆಸ್ಟ್ ನಡೆಸಲಾಗಿದೆ. ಇನ್ನೂ ಆರು ವಾರಕ್ಕೆ ಆಗುವಷ್ಟು ಕಿಟ್‍ಗಳಿವೆ.

ಏಪ್ರಿಲ್ 15ಕ್ಕೆ ಚೀನಾದಿಂದ ಭಾರತಕ್ಕೆ ಕೊರೋನಾ ಟೆಸ್ಟ್ ಕಿಟ್ ಬರಲಿವೆ. ಇದು ಬಂದ್ರೆ ಕೊರೊನಾ ಸ್ಯಾಂಪಲ್ ಟೆಸ್ಟ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಕಳೆದ 15 ದಿನಗಳಿಂದ ದೇಶದ 25 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿಲ್ಲ ಎಂದು ಐಸಿಎಂಆರ್ ತಿಳಿಸಿದೆ. ಗುಜರಾತ್‍ನಲ್ಲಿ 538, ತೆಲಂಗಾಣದಲ್ಲಿ 531, ಉತ್ತರ ಪ್ರದೇಶದಲ್ಲಿ 483, ಆಂಧ್ರದಲ್ಲಿ 432, ಕೇರಳದಲ್ಲಿ 378 ಮಂದಿಗೆ ಸೋಂಕು ಹಬ್ಬಿದೆ. ಇಂದು ಕೇವಲ 3 ಪ್ರಕರಣ ಮಾತ್ರ ಕೇರಳದಲ್ಲಿ ಪತ್ತೆ ಆಗಿವೆ.

ದೇಶದಲ್ಲಿ ಪಿಪಿಇ ಕಿಟ್‍ಗಳ ಕೊರತೆಯಿಂದಾನೋ ಅಥವಾ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತೋರಿದ ಸಣ್ಣ ನಿರ್ಲಕ್ಷ್ಯಗಳಿಂದಾನೋ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹಬ್ಬುವುದು ಹೆಚ್ಚಾಗುತ್ತಲೇ ಇದೆ. ಇವತ್ತು ತಮಿಳುನಾಡಿನಲ್ಲಿ ವೈದ್ಯರೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಕೊರೊನಾಗೆ ಬಲಿಯಾದ ವೈದ್ಯರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಖಾಸಗಿ ಲ್ಯಾಬ್‍ಗಳಲ್ಲಿ ಉಚಿತ ಕೊರೊನಾ ಟೆಸ್ಟ್‍ಗೆ ಆದೇಶಿಸಿದ್ದ ಸುಪ್ರೀಂಕೋರ್ಟ್, ಇಂದು ತನ್ನ ಆದೇಶಕ್ಕೆ ತಿದ್ದುಪಡಿ ಮಾಡಿದೆ. ಆಯುಷ್ಮಾನ್ ಯೋಜನೆಯಡಿ ಬರುವವರಿಗೆ ಮಾತ್ರ ಖಾಸಗಿ ಲ್ಯಾಬ್‍ಗಳಲ್ಲಿ ಉಚಿತರ ಕೊರೊನಾ ಪರೀಕ್ಷೆಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಹರಿಯಾಣದ ಜೈಲುಗಳಿಂದ 2 ವರ್ಷದ ಪೂರೈಸಿದ ಖೈದಿಗಳಿಗೆ ಬೇಲ್ ನೀಡಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ದೆಹಲಿಯ ಮಾರ್ಕೆರ್ಟ್ ಗಳಲ್ಲಿ ಸಮ-ಬೆಸ ಪದ್ದತಿ ಜಾರಿಗೆ ಕೇಜ್ರಿವಾಲ್ ಸರ್ಕಾರ ಮುಂದಾಗಿದೆ. ದಿನ ಬಿಟ್ಟು ದಿನ ಅಂಗಡಿ ತೆರೆಯಲು ಸೂಚಿಸಲಾಗಿದೆ.

ಜಗತ್ತಿನಾದ್ಯಂತ ಕೊರೊನಾ ತಾಂಡವ ಮುಂದುವರೆದಿದೆ. ಸೋಂಕಿತರ ಸಂಖ್ಯೆ 1.90 ಲಕ್ಷಕ್ಕೆ ಏರಿಕೆಯಾಗಿದೆ. 1.16 ಲಕ್ಷ ಮಂದಿ ಬಲಿ ಆಗಿದ್ದಾರೆ. ಚೀನಾದಲ್ಲಿ ಕೊರೊನಾ ಆರ್ಭಟ ಮತ್ತೆ ಶುರುವಾಗಿದೆ. ನಿನ್ನೆ ಹೊಸದಾಗಿ 393 ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ನಿರ್ಬಂಧ ಸಡಿಲಿಕೆಯನ್ನು ಮುಂದೂಡಲು ಚೀನಾ ಸರ್ಕಾರ ಚಿಂತನೆ ನಡೆಸಿದೆ.

ಅಮೆರಿಕಾದಲ್ಲಿ ಕೊರೊನಾ ಸಾವುಗಳು ಹೆಚ್ತಾನೆ ಇದೆ. ನಿನ್ನೆ 1500ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ಆದ್ರೆ ಯೊರೋಪ್‍ನಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾದಂತೆ ಕಾಣುತ್ತಿದೆ. ನಿನ್ನೆ ಇಟಲಿಯಲ್ಲಿ 431, ಬ್ರಿಟನ್‍ನಲ್ಲಿ 657, ಸ್ಪೇನ್‍ನಲ್ಲಿ 610 ಮಂದಿ ಸಾವನ್ನಪ್ಪಿದ್ದಾರೆ. ಸಿಂಗಾಪುರದಲ್ಲಿ 233 ಹೊಸ ಕೇಸ್ ಪತ್ತೆಯಾಗಿದ್ದು, ಇದರಲ್ಲಿ 59 ಮಂದಿ ಭಾರತೀಯರು ಎನ್ನಲಾಗಿದೆ. ಈಕ್ವೇಡಾರ್ ನಲ್ಲಿ ಪರಿಸ್ಥಿತಿ ದಾರುಣವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಇಲ್ಲಿ ಸಾವು ನೋವು ಹೆಚ್ಚಿದೆ. ಶವಗಳ ಅಂತ್ಯಕ್ರಿಯೆಗೆ ಶವಪೆಟ್ಟಿಗೆ ಕೂಡ ಸಿಗ್ತಿಲ್ಲ. ರಾಜಧಾನಿ ಗ್ವಯಕಿಲ್‍ನಲ್ಲಿ ಶವಗಳು ಎಲ್ಲೆಂದರಲ್ಲಿ ಕಂಡು ಬರ್ತಿವೆ.

ಪ್ರಪಂಚವನ್ನು ಗಢಗಢ ಎನಿಸಿರುವ ಕೊರೋನಾ ವೈರಸ್ ಸೃಷ್ಟಿಸ್ತಿರುವ ಅನಾಹುತಗಳಿಂದ ಸದ್ಯದ ಸ್ಥಿತಿಯಲ್ಲಿ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇದಕ್ಕೆ ಮದ್ದು ಕಂಡು ಹಿಡಿಯೋವರೆಗೂ ಈ ವೈರಸ್ ಕಾಟ ಇದ್ದೇ ಇರುತ್ತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ವ್ಯಾಕ್ಸಿನ್ ಕಂಡುಹಿಡಿಯೋವರೆಗೂ ಈ ವೈರಸ್ ಬೆನ್ನುಬಿಡದ ಬೇತಾಳನಂತೆ ಮಾನವರನ್ನು ಕಾಡಲಿದೆ ಎಂದು ಎಚ್ಚರಿಸಿದೆ. ಸ್ವಲ್ಪ ಕಡಿಮೆ ಆಯ್ತು ಅಂತಾ ಅಂದ್ಕೊಳ್ಳುವ ಹೊತ್ತಿಗೆ ಈ ಕೊರೊನಾ ವೈರಸ್ ವಿಜೃಂಭಿಸುವ ಸಾಧ್ಯತೆಗಳಿವೆ. ಹೀಗಾಗಿ ಸೋಂಕಿತರನ್ನು ತಕ್ಷಣವೇ ಗುರುತಿಸಿ, ಐಸೋಲೇಟ್ ಮಾಡುವ ಪದ್ದತಿಯನ್ನು ಮುಂದುವರೆಸಬೇಕಿದೆ. ಇದಕ್ಕೆ ಜಗತ್ತಿನ ಎಲ್ಲಾ ದೇಶಗಳು ಸಜ್ಜಾಗಿರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ಈ ಮಧ್ಯೆ, ಕೊರೊನಾಗೆ ಮದ್ದು ಕಂಡುಹಿಡಿಯುವ ಪ್ರಯತ್ನಗಳು ಸಾಗಿವೆ. ಅಮೆರಿಕಾದ ಗೀಲೀಡ್ ಸೈನ್ಸಸ್ ಎಂಬ ಕಂಪನಿ, ರೆಮ್-ಡೆಸಿವಿರ್ ಎಂಬ ಔಷಧಿ ಕಂಡುಹಿಡಿದಿದ್ದು, ಕ್ಲಿನಿಕಲ್ ಟ್ರಯಲ್ಸ್ ಕೂಡ ಯಶಸ್ವಿ ಆಗಿದೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *