ಚೀನಾ, ಇಟಲಿ, ಇರಾನಿನಲ್ಲಿ ನಾವಿಲ್ಲ, ಭಾರತದಲ್ಲಿದ್ದೇವೆ – ಸಾವು ಗೆದ್ದ ಟೆಕ್ಕಿಯ ಪತ್ನಿಯ ಮಾತು

Public TV
3 Min Read

– ಆಸ್ಪತ್ರೆಯ ವೈದ್ಯರಿಗೆ, ಸಿಬ್ಬಂದಿಗೆ ಧನ್ಯವಾದ
– ಈಗ ಮತ್ತೆ ನಮಗೆ ಆತ್ಮವಿಶ್ವಾಸ ಮೂಡಿದೆ

ಬೆಂಗಳೂರು: ಇಡೀ ಜಗತ್ತೇ ಕೊರೊನಾ ವೈರಸ್‍ಗೆ ಸಿಲುಕಿ ಒದ್ದಾಡುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಆಗಿದೆ. ಆದರೆ ಈ ಹೊತ್ತಲ್ಲಿ ಕರ್ನಾಟಕದ ಮಂದಿಗೆ ಸಿಹಿಸುದ್ದಿ ಸಿಕ್ಕಿದೆ.

ಕೊರೊನಾ ಸೋಂಕಿಗೆ ತುತ್ತಾಗಿದ್ದ ಬೆಂಗಳೂರಿನ ಕುಟುಂಬ ಕೊರೊನಾ ಜಯಿಸಿದೆ. ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಸತತ 10 ದಿನಗಳ ಚಿಕಿತ್ಸೆ ಪಡೆದ ಟೆಕ್ಕಿ ಕುಟುಂಬ ಕೊರೊನಾ ಸೋಂಕಿನಿಂದ ಪಾರಾಗಿದೆ. ತಮ್ಮ ಇಡೀ ಕುಟುಂಬವನ್ನು ಕೊರೊನಾದಿಂದ ಪಾರು ಮಾಡಿದ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ವೈದ್ಯರಿಗೆ, ನರ್ಸ್‌ಗಳಿಗೆ ಸಿಬ್ಬಂದಿಗೆ ಟೆಕ್ಕಿ ಪತ್ನಿ ಪತ್ರದ ಮೂಲಕ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಮತ್ತೊಂದು ಪಾಸಿಟಿವ್ – ದುಬೈನಿಂದ ಬಂದ ಬೆಂಗ್ಳೂರಿನ ಮಹಿಳೆಗೆ ಕೊರೊನಾ

ಪತ್ರದಲ್ಲಿ ಏನಿದೆ?
ನಾನು ಮತ್ತು ನನ್ನ ಕುಟುಂಬ ಕೊರೊನಾ ಸೋಂಕಿತರಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾದ್ವಿ. ಅಂದಿನಿಂದ ನಮ್ಮನ್ನು ಐಸೋಲೇಷನ್‍ನಲ್ಲಿ ಇಟ್ಟಿದ್ದರು. ಅಂದಿನಿಂದ ನಮಗೆ ಸರ್ಕಾರಿ ಸೌಲಭ್ಯದೊಂದಿಗೆ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಯಲ್ಲಿ ನಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡರು. ನಮಗೆ ಈ ರೋಗದ ಭೀತಿಯಿಂದ ಹೊರಬರಲು ನೆರವಾದರು.

ಕೊರೊನಾ ವೈರಸ್ ಎಂಬುದು ಜನರನ್ನು ಭಯಬೀತರಾಗಿ ಮಾಡಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ವೈದ್ಯರು ಪ್ರಬುದ್ಧವಾಗಿ, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನನ್ನ ಪತಿಗೆ ಕೊರೊನಾ ಲಕ್ಷಣಗಳು ಕಾಣಿಸಿದಾಗ ನಾನೇ ಸ್ವತಃ ಅಂಬುಲೆನ್ಸ್‌ಗೆ ಕರೆ ಮಾಡಿ ಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಈ ವೇಳೆ ನಾವು ಯಾವುದೇ ಸಾರ್ವಜನಿಕರು, ಸಾರ್ವಜನಿಕ ಮತ್ತು ಖಾಸಗಿ ವಾಹನಕ್ಕೆ ತೊಂದರೆ ಮಾಡಲಿಲ್ಲ.

ಆಗ ವೈದ್ಯರು, ನರ್ಸ್ ಮತ್ತು ಇತರ ಎಲ್ಲ ಸಹಾಯಕ ಸಿಬ್ಬಂದಿ ನಮ್ಮ ಬಳಿ ಬಂದರು. ನಂತರ ಸ್ಕ್ರೀನಿಂಗ್ ಸೇರಿದಂತೆ ಎಲ್ಲಾ ರೀತಿಯ ಪರೀಕ್ಷೆಗೆ ಒಳಪಡಿಸಿದರು. ವರದಿಯಲ್ಲಿ ನಮಗೆ ಪಾಸಿಟಿವ್ ಬಂದ ಬಳಿಕ ನಮ್ಮನ್ನು ಐಸೋಲೇಷನ್ ವಾರ್ಡ್‌ಗೆ ಶಿಫ್ಟ್ ಮಾಡಿದರು. ವಾರ್ಡ್‍ನಲ್ಲಿ ಶುಚಿತ್ವದೊಂದಿಗೆ ನಮಗೆ ಬೇಕಾದ ಅಗತ್ಯತೆಗಳನ್ನು ನೋಡಿಕೊಂಡರು.

ನಮಗೆ ಕೊರೊನಾ ಪಾಸಿಟಿವ್ ಬಂದ ಮೇಲೆ ನಾವು ಸಂಪರ್ಕದಲ್ಲಿದ್ದವರಿಗೂ ಸಹ ಕ್ವಾರಂಟೇನ್ ಮಾಡಲಾಯಿತು. ನನ್ನ ಪತಿಯ ಕಂಪನಿ, ಸಹೋದ್ಯೋಗಿಗಳು, ನನ್ನ ಮಗುವಿನ ಶಾಲೆ, ಸ್ನೇಹಿತರು, ಕ್ಲಾಸ್‍ಮೆಟ್ಸ್, ನನ್ನ ಸ್ನೇಹಿತರು, ನೆರೆಹೊರೆಯವರು, ಅಪಾರ್ಟ್ ಮೆಂಟ್‍ನಲ್ಲಿದ್ದವರ ಮೇಲೆ ತುಂಬಾ ಅಚ್ಚುಕಟ್ಟಾಗಿ ನಿಗಾ ವಹಿಸಲಾಯಿತು.

ಆರೋಗ್ಯಾಧಿಕಾರಿಗಳು ನಮ್ಮ ಗುರುತು ಹೊರಗೆ ಗೊತ್ತಾಗದಂತೆ ನೋಡಿಕೊಂಡರು. ಯಾವುದೇ ಮಾಧ್ಯಮದವರು ಸಂಪರ್ಕಿಸಲು ಬಿಡಲಿಲ್ಲ. ನಮಗೆ ಅತ್ಯುತ್ತಮ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ್ದಾರೆ. ಇದು ನಮ್ಮಲ್ಲಿ ಮತ್ತೆ ಆತ್ಮವಿಶ್ವಾಸ ಮೂಡಿಸಿದೆ. ನಮಗೆ ಅತ್ಯುತ್ತಮವಾದ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ ವರ್ಗದವರ ತಾಳ್ಮೆ, ಕ್ರಮಬದ್ಧ ಚಿಕಿತ್ಸೆ, ಚಿಕಿತ್ಸೆ ನೀಡಿದ ಪರಿ ನೋಡಿ ನಮ್ಮಲ್ಲಿ ಭವಿಷ್ಯದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚು ಮಾಡಿತು.

ನಮ್ಮನ್ನು ಚೆನ್ನಾಗಿ ನೋಡಿಕೊಂಡ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳು, ಸರ್ಕಾರ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ. ನಮ್ಮೆಲ್ಲರನ್ನೂ ಸುರಕ್ಷಿತವಾಗಿಡಲು ಎಲ್ಲರೂ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಚೀನಾ, ಇಟಲಿ, ಇರಾನಿನಲ್ಲಿ ನಾವಿಲ್ಲ, ನಾವು ಭಾರತದಲ್ಲಿ ಇದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ನಮ್ಮನ್ನು ಕೊರೊನಾ ಸೋಂಕಿನಿಂದ ಪಾರು ಮಾಡಲು ಅವರು ಪಟ್ಟ ಶ್ರಮ ಪ್ರಶಂಸನೀಯ. ನಮ್ಮ ವ್ಯವಸ್ಥೆಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಪತ್ರದಲ್ಲಿ ಬರೆದು ತಿಳಿಸಿದ್ದಾರೆ.

ಟೆಕ್ಕಿ ಮಾರ್ಚ್ 1ರಂದು ನ್ಯೂಯಾರ್ಕ್-ದುಬೈ ಮೂಲಕ ಬೆಂಗಳೂರಿಗೆ ಬಂದಿದ್ದ. ಮಾರ್ಚ್ 8ರಂದು ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಕೂಡಲೇ ಆತನನ್ನು ಮತ್ತು ಆತನ ಪತ್ನಿ ಮತ್ತು ಪುತ್ರಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 20 ತಜ್ಞ ವೈದ್ಯರು, 60 ದಾದಿಯರು ಹಗಲಿರುಳೆನ್ನದೇ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *