ವಿಧಾನಸಭೆ ಮೊಗಸಾಲೆಯಲ್ಲಿ ಕೊರೊನಾ ವೈರಸ್ ಸದ್ದು

Public TV
1 Min Read

ಬೆಂಗಳೂರು: ಕೊರೊನಾ ವೈರಸ್ ಈಗ ದೇಶದಲ್ಲೆಡೆ ಭೀತಿ ತಂದಿದೆ. ರಾಜ್ಯದಲ್ಲಿದ್ದ ಟೆಕ್ಕಿ ಒಬ್ಬರಿಗೂ ಹರಡಿದ ಸುದ್ದಿ ಎಲ್ಲರನ್ನೂ ಆತಂಕಗೊಳಿಸಿದೆ. ಈ ಬೆನ್ನಲ್ಲೇ ಕೊರೊನಾ ವೈರಸ್ ಬಗ್ಗೆ ಶಾಸಕರಿಗೆ ಭಯ ಶುರುವಾಗಿತ್ತು. ಅಧಿವೇಶನದಲ್ಲಿ ಭಾಗವಹಿಸಿದ್ದ ಶಾಸಕರು ಮೊಗಸಾಲೆಗಳಲ್ಲಿ ಕೊರೊನಾದ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿದ್ದರು. ಕೆಲವು ಶಾಸಕರಂತೂ ನಮಗೆ ಕೊರೊನಾ ಬಂದ್ರೆ ಅದೇ ಓಡಿ ಹೋಗುತ್ತೆ ಅಂತಾ ಹಾಸ್ಯ ಮಾಡುತ್ತಿದ್ದ ದೃಶ್ಯಗಳು ಕಂಡುಬಂತು.

ಅಂದಹಾಗೆ ಕಲಾಪ ಆರಂಭಕ್ಕೂ ಮುನ್ನ ಆಡಳಿತ ಪಕ್ಷದ ಸದಸ್ಯರೇ ಹೆಚ್ಚು ಚರ್ಚೆ ಮಾಡುತ್ತಿದ್ದರು. ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಕೊರೊನಾ ಬಗ್ಗೆ ಬಿಜೆಪಿ ಶಾಸಕರು ಚರ್ಚಿಸುತ್ತಿದ್ದರು. ಪರಿಸ್ಥಿತಿ ಹೀಗೇ ಮುಂದುವರಿದರೆ ಶಾಸಕರು, ಮಾಧ್ಯಮದವರು ಹಾಗೂ ಸರ್ಕಾರಿ ಸಿಬ್ಬಂದಿ ಕೂಡ ಮಾಸ್ಕ್ ಹಾಕಿಕೊಂಡು ಬರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಆಗಮಿಸಿದರು. ಡಾಕ್ಟರ್ ಇಬ್ಬರು, ಸಚಿವರು ಕೂಡ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಅಂತಾ ಬಿಜೆಪಿ ಶಾಸಕರು ಸಲಹೆ ನೀಡಿದ್ರು. ಸಿಎಂ ಯಡಿಯೂರಪ್ಪ ಸಹ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ, ಸಭೆ ನಡೆಸ್ತಾರೆ ಅಂತಾ ಡಿಸಿಎಂ ಭರವಸೆ ನೀಡಿ ತೆರಳಿದರು.

ಇನ್ನು ಮೊಗಸಾಲೆಯಲ್ಲಿ ಮಾಧ್ಯಮದವರನ್ನ ಮಾತನಾಡಿಸುತ್ತಿದ್ದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಕೈ ಕುಲುಕುವಾಗ ಹಾಸ್ಯ ಮಾಡಿದ್ರು. ಸರ್, ಈಗ ಹ್ಯಾಂಡ್ ಶೇಕ್ ಕೂಡ ಮಾಡಬಾರದಂತೆ, ಕೊರೊನಾ ಭಯ ಅಂತಾ ನಕ್ಕರು. ಅಷ್ಟೇ ಅಲ್ಲ ಕೊರೊನಾ ನಮ್ ಶಾಸಕರ ಇರುವ ಕಡೆ ಬರಲ್ಲ ಬಿಡಿ, ಎಲ್ಲವನ್ನೂ ಅರಗಿಸಿಕೊಳ್ಳವರಿಗೆ ಕೊರೊನಾ ಯಾವ ಲೆಕ್ಕ, ಅದೇ ಓಡಿ ಹೋಗುತ್ತೆ ಅಂತಾ ನಗುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *