ಮಧ್ಯಪ್ರದೇಶದ ಕಮಲನಾಥ್ ಸರ್ಕಾರವನ್ನು ಉಳಿಸಿದ ಕೊರೊನಾ

Public TV
3 Min Read

ಭೋಪಾಲ್: ಕೊರೊನಾ ವೈರಸ್‍ನಿಂದಾಗಿ ಮಧ್ಯಪ್ರದೇಶದಲ್ಲಿ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕೆಲ ದಿನಗಳ ಉಸಿರಾಡಲು ಅವಕಾಶ ಸಿಕ್ಕಂತಾಗಿದ್ದು, ಸ್ಪೀಕರ್ ಮಾರ್ಚ್ 26ರ ವರೆಗೆ ಅಧಿವೇಶನವನ್ನು ಮುಂದೂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಕೂಡಲೇ ವಿಶ್ವಾಸ ಮತಕ್ಕೆ ಆದೇಶಿಸಿ ಎಂದು ಮನವಿ ಮಾಡಿದೆ.

10 ದಿನಗಳ ಕಾಲ ಅಧಿವೇಶನವನ್ನು ಮುಂದೂಡಲಾಗಿದ್ದು, ಕಾಂಗ್ರೆಸ್ 10 ದಿನಗಳೊಳಗೆ ಏನಾದರೂ ಕಸರತ್ತು ಮಾಡಬೇಕಿದೆ. ಇಲ್ಲವಾದಲ್ಲಿ ಸರ್ಕಾರ ಬೀಳುವುದು ಖಚಿತ ಎನ್ನುವ ಪರಿಸ್ಥಿತಿ ಇದೆ. ಕಮಲನಾಥ್ ಅವರು ಈಗಾಗಲೇ ಹರಸಾಹಸ ಪಡುತ್ತಿದ್ದು, ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ಇನ್ನೂ ಕಗ್ಗಂಟಾಗಿದೆ.

ಇಂದು ಬೆಳಗ್ಗೆ ಅಧಿವೇಶನಕ್ಕೆ ಆಗಮಿಸುತ್ತಿದ್ದಂತೆ ಮಧ್ಯಪ್ರದೇಶ ರಾಜ್ಯಪಾಲ ಲಾಲ್‍ಜಿ ಟಂಡನ್ ಅವರು ಭಾಷಣ ಮಾಡುತ್ತಿದ್ದಂತೆ ಕಮಲ್‍ನಾಥ್ ಅವರಿಗೆ ವಿಶ್ವಾಸ ಮತಯಾಚನೆ ಮಾಡುವಂತೆ ಸೂಚಿಸಿದರು. ಆಗ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ, ವಿಶ್ವಾಸ ಮತಯಾಚನೆಯನ್ನು ಮುಂದೂಡಬೇಕೆಂದು ಕೇಳಿಕೊಂಡರು. ನಮ್ಮ ಕೆಲ ಶಾಸಕರು ಒತ್ತೆಯಾಳುಗಳಾಗಿದ್ದಾರೆ. ಅವರೆಲ್ಲರೂ ಸ್ವತಂತ್ರರಾದ ನಂತರ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಇತ್ತ ಬಿಜೆಪಿ ಸುಪ್ರೀಂ ಕೋರ್ಟ್ ಈ ಕುರಿತು ಅರ್ಜಿ ಸಲ್ಲಿಸಿದ್ದು, ಮಧ್ಯಪ್ರದೇಶ ಮುಖ್ಯಮಂತ್ರಿಗಳಿಗೆ ಬಹುಮತ ಸಾಬೀತುಪಡಿಸಲು ಸೂಚಿಸಬೇಕು. ವಿಶ್ವಾಸ ಮತಯಾಚನೆಗೆ ಸರ್ಕಾರ ವಿನಾಕಾರಣ ತಡಮಾಡುತ್ತಿದೆ ಎಂದು ಕೋರಿದೆ. ನಾಳೆಯೇ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿದ್ದು, ನ್ಯಾಯಾಧೀಶರಾದ ಡಾ.ಡಿ.ವೈ.ಚಂದ್ರಚೂಡ್ ಹಾಗೂ ಹೇಮಂತ್ ಗುಪ್ತಾ ದ್ವಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.

ರಾಜ್ಯಪಾಲರು ಸಹ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಗಡುವು ನೀಡುತ್ತಿದ್ದು, ಸೋಮವಾರ ಯಾವುದೇ ಕಾರಣಕ್ಕೂ ನೆಪವೊಡ್ಡುವಂತಿಲ್ಲ. ಮುಂದೂಡುವುದು, ಸಮಯ ವ್ಯರ್ಥ ಮಾಡದೆ ನೇರವಾಗಿ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಯಬೇಕು ಎಂದು ತಿಳಿಸಿದ್ದರು. ಆದರೆ ಕೊರೊನಾ ಭೀತಿ ಹಿನ್ನೆಲೆ ಸ್ಪೀಕರ್ ಇಂದು ಅಧಿವೇಶನವನ್ನು ಮುಂದೂಡಿದರು. ಇಂದೂ ಸಹ ರಾಜ್ಯಪಾಲರು ಗಡುವು ನೀಡಿದ್ದು, ಸಿಎಂ ಕಮಲ್‍ನಾಥ್ ಅವರಿಗೆ ಪತ್ರ ಬರೆದಿರುವ ಅವರು, ಮಂಗಳವಾರ ಯಾವುದೇ ಕಾರಣಕ್ಕೂ ತಪ್ಪಿಸುವಂತಿಲ್ಲ. ಮಾರ್ಚ್ 17ರಂದು ನೀವು ವಿಶ್ವಾಸ ಮತಯಾಚನೆ ಮಾಡದಿದ್ದಲ್ಲಿ ನಿಮ್ಮ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಆರು ಸಚಿವರ ರಾಜೀನಾಮೆ ಅಂಗೀಕಾರ
ಕಾಂಗ್ರೆಸ್ಸಿನ 22 ಶಾಸಕರ ರಾಜೀನಾಮೆ ಪೈಕಿ ಆರು ಬಂಡಾಯ ಮಂತ್ರಿಗಳ ರಾಜೀನಾಮೆಯನ್ನು ಮಧ್ಯಪ್ರದೇಶದ ವಿಧಾನಸಭಾ ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಅವರು ಶನಿವಾರ ಅಂಗೀಕರಿಸಿದ್ದಾರೆ. ಗೋವಿಂದ್ ಸಿಂಗ್ ರಜಪೂತ್, ಮಹೇಂದ್ರ ಸಿಂಗ್ ಸಿಸೋಡಿಯಾ, ಪ್ರಭುರಾಮ್ ಚೌಧರಿ, ಪ್ರದುಮನ್ ತೋಮರ್, ತುಳಸಿರಾಮ್ ಸಿಲಾವತ್ ಹಾಗೂ ಇಮಾರ್ತಿ ದೇವಿ ಅವರನ್ನು ರಾಜ್ಯಪಾಲರು ಸಚಿವ ಸಂಪುಟದದಿಂದ ವಜಾ ಮಾಡಿದ್ದಾರೆ.

ಇತ್ತೀಚೆಗಷ್ಟೇ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷಕ್ಕೆ ಗುಡ್‍ಬೈ ಹೇಳಿದ್ದರು. ಅವರೊಂದಿಗೆ ಸಿಂಧಿಯಾ ಆಪ್ತರಾಗಿದ್ದ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ನಂತರ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿದ್ದರು. ಒಟ್ಟು 22 ಶಾಸಕರ ರಾಜೀನಾಮೆಯಿಂದ ಕಮಲನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. 230 ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಇಬ್ಬರು ಶಾಸಕರ ನಿಧನದಿಂದ ಸದ್ಯ 228 ಶಾಸಕರಿದ್ದಾರೆ. ಸದ್ಯ 22 ಮಂದಿ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಸಿಎಂ ಕಮಲನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಈಗ ಸದನದಲ್ಲಿ 206 ಶಾಸಕರಿದ್ದು ಬಹುಮತ ಸಾಧಿಸಲು 104 ಶಾಸಕರ ಬೆಂಬಲ ಬೇಕಿದೆ. ಬಿಜೆಪಿ ಬಳಿ 107 ಶಾಸಕರಿದ್ದರೆ, ಕಾಂಗ್ರೆಸ್ ಬಳಿ 92 ಶಾಸಕರಿದ್ದಾರೆ.

ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿತ್ತು. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *