ಬೀದರ್‌ನಲ್ಲಿ ನಟಭಯಂಕರನ ಸ್ನೇಹಿತರು

Public TV
2 Min Read

ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ಸಿನಿಮಾ ಜೊತೆಗೆ ಕೃಷಿ ಕೆಲಸದಲ್ಲಿ ತೊಡಗಿದ್ದು, ಸಾಮಾಜಿಕ ಕಾರ್ಯಗಳ ಕುರಿತು ಸಹ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಅದೀಗ ನಟ ಭಯಂಕ ಚಿತ್ರ ತಂಡದ ಅವರ ಸ್ನೇಹಿತರು ಸಹಾಯ ಹಸ್ತ ಚಾಚಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಲಾಕ್‍ಡೌನ್ ಹಿನ್ನೆಲೆ ಬಡ ಜನರು ಊಟವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ನಟ, ನಟಿಯರು, ಧನಿಕರು ಬಡವರ ಸಹಾಯಕ್ಕೆ ಧಾವಿಸುತ್ತಿದ್ದು, ಆಹಾರ ಸಾಮಗ್ರಿಗಳು, ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ರೀತಿಯ ಸಹಾಯ ಮಾಡುತ್ತಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಹಲವರು ಸಿಎಂ ಪರಿಹಾರ ನಿಧಿಗೆ ಹಣ ಸಂದಾಯ ಮಾಡುವ ಮೂಲಕ ಸಹಾಯ ಮಾಡಿದರೆ, ಹಾಸ್ಯ ನಟ ಸಾಧುಕೋಕಿಲಾ ಅವರು ಮನೆ ಮನೆಗೆ ಆಹಾರ ಪದಾರ್ಥಗಳನ್ನು ನೀಡಿ ನೆರವಾಗಿದ್ದಾರೆ.

ಅದೇ ರೀತಿ ಪ್ರಥಮ್ ಟೀಮ್ ಕೆಲಸ ಮಾಡುತ್ತಿದ್ದು, ಬೆಂಗಳೂರಿನಿಂದ ಗಡಿ ಜಿಲ್ಲೆ ಬೀದರ್‍ಗೆ ಹೋಗಿ ಅಲ್ಲಿನ ಬಡ ಜನರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡುವ ಕಾರ್ಯದಲ್ಲಿ ತೊಡಗಿದೆ. ಈ ಕುರಿತು ಪ್ರಥಮ್ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಪ್ರಥಮ್ ಇಲ್ಲದೆಯೂ ಈ ತಂಡ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಫೇಸ್ಬುಕ್‍ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದಲ್ಲವೆ ಮಾನವೀಯತೆ, ಗಡಿಜಿಲ್ಲೆ ಮುಚ್ಚಿರೋದು ನಿಮ್ಮೆಲ್ಲರಿಗೂ ಗೊತ್ತು. ಬೆಂಗಳೂರಿಂದ ಗೆಳೆಯ ಮತ್ತವರ ಸ್ನೇಹಿತರು ನಾನಿಲ್ಲದಿದ್ದರೂ ಪ್ರತಿದಿನ ಗಡಿ ಜಿಲ್ಲೆ ಬೀದರ್‌ನಲ್ಲಿ ಹಗಲು ಇರುಳು ಎನ್ನದೆ ಬೈಕಿನಲ್ಲಿ ಹೋಗಿ ಸಹಾಯ ಮಾಡುತ್ತಿದ್ದಾರೆ. ನಟ ಭಯಂಕರ ತಂಡದಿಂದ ಆಹಾರ ವಿತರಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಲಾಕ್‍ಡೌನ್ ಮಹತ್ವ ತಿಳಿಸಿ ಎಲ್ಲರನ್ನೂ ಶಿಕ್ಷಿತರನ್ನಾಗಿಸುತ್ತಿದ್ದಾರೆ. ಇಂತಹವರು ನನ್ನ ಸ್ನೇಹಿತರು ಅನ್ನೋದೆ ನನ್ನ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಪ್ರಥಮ್ ಸಹ ತುಮಕೂರಿನ ವಿವಿಧ ಭಾಗಗಳಲ್ಲಿ ಆಹಾರ ಪದಾರ್ಥಗಳನ್ನು ಹಂಚಿದ್ದರು. ಇದನ್ನು ನಟ ಭಯಂಕರ ಚಿತ್ರ ತಂಡ ಮುಂದುವರಿಸುತ್ತಿದೆ. ಪ್ರಥಮ್ ಇತ್ತೀಚೆಗೆ ಕುರಿ ಕಾಯುವ ವಿಡಿಯೋವನ್ನು ಸಹ ಫೇಸ್ಬುಕ್‍ನಲ್ಲಿ ಹಾಕಿದ್ದರು.

ಪ್ರಥಮ್ ಸಧ್ಯ ನಟ ಭಯಂಕರ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಇತ್ತೀಚೆಗೆ ಗಾಂಚಾಲಿ ಗೀತಾ ಎಂಬ ಹಾಡನ್ನೂ ಬಿಡುಗಡೆ ಮಾಡಲಾಗಿದೆ. ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದ್ದು, ಊರಿನಲ್ಲಿ ಕೃಷಿ, ಕುರಿ ಕಾಯುವುದರಲ್ಲಿ ನಟ ಪ್ರಥಮ್ ನಿರತರಾಗಿದ್ದಾರೆ. ಅಂದಹಾಗೆ ಈ ಚಿತ್ರವನ್ನು ಪ್ರಥಮ್ ಅವರೇ ನಿರ್ದೇಶಿಸಿ, ನಟಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *