ಬೆಂಗಳೂರು: ಪಾದರಾಯನಪುರದಲ್ಲಿ ಚೆಕ್ ಪೋಸ್ಟ್ ನಾಶ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೆಜೆ ನಗರ ಪೊಲೀಸರಿಂದ ಪಾದರಾಯನಪುರ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್‍ನನ್ನು ಬಂಧಿಸಲಾಗಿದ್ದು, ಕಳೆದ ಒಂದು ವಾರದಿಂದ ಇರ್ಫಾನ್‍ಗಾಗಿ ಪೊಲೀಸರು ಬಲೆ ಬೀಸಿದ್ದರು. ಆದರೆ ಬಂಧನ ಸಾಧ್ಯವಾಗಿರಲಿಲ್ಲ. ಪ್ರಮುಖ ಆರೋಪಿ ಬೆಂಗಳೂರಿನಲ್ಲೇ ತಲೆಮರೆಸಿಕೊಂಡಿದ್ದ. ಇದೀಗ ಇರ್ಫಾನ್‍ನನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 150ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಗಲಾಟೆಯ ಮಾಸ್ಟರ್‍ಮೈಂಡ್ ಇರ್ಫಾನ್‍ನನ್ನೂ ಬಂಧಿಸಿದ್ದಾರೆ. ಇರ್ಫಾನ್ ಫರ್ಜುವಾ ಜೊತೆ ಸೇರಿ ದಂಗೆ ಎಬ್ಬಿಸಿ ತಲೆಮರಿಸಿಕೊಂಡಿದ್ದ. ಕೆಎಫ್‍ಡಿ(ಕರ್ನಾಟಕ ಫೋರಂ ಫಾರ್ ಡಿಗ್ನಿಟಿ) ಇರ್ಫಾನ್ ಎಂದು ಗುರುತಿಸಿಕೊಂಡಿದ್ದ ಆರೋಪಿ, ತನ್ನ ಜೊತೆ ಇದ್ದ ಹುಡುಗರಿಗೆ ಬ್ಯಾರಿಕೇಡ್ ಹಾಗೂ ಚೆಕ್‍ಪೋಸ್ಟ್‍ನ ಪೆಂಡಾಲ್ ಧ್ವಂಸಗೊಳಿಸುವಂತೆ ಸೂಚಿಸಿದ್ದ ಎನ್ನಲಾಗಿದೆ. ಕಳೆದೊಂದು ವಾರದಿಂದ ಈತನಿಗಾಗಿ ಜೆಜೆ ನಗರ ಪೊಲೀಸರು ಹುಡುಕಾಟ ನಡೆಸಿದ್ದು, ಇದೀಗ ಬಂಧಿಸಿದ್ದಾರೆ.
ಇರ್ಫಾನ್ ಯಾರು..?
ಕೆಎಫ್ ಡಿಯ ಇರ್ಫಾನ್ ಕೇವಲ ಕೆಎಫ್ ಡಿ ಅಲ್ಲಿ ಇರಲಿಲ್ಲ. ಕಳೆದ ಬಾರಿ ಎಸ್‍ಡಿಪಿಐಯಿಂದ ಕಾರ್ಪೋರೇಷನ್ ಎಲೆಕ್ಷನ್ ಗೆ ನಿಂತು ಸೋತಿದ್ದ. ಈ ಮೂಲಕ ಎಸ್ ಡಿಪಿಐ ಅಲ್ಲಿ ಕೂಡ ಗುರುತಿಸಿಕೊಂಡಿದ್ದ. ಹಾಲಿ ಕಾರ್ಫೊರೇಟರ್ ಇಮ್ರಾನ್ ಪಾಷಾ ವಿರುದ್ಧ ತೊಡೆ ತಟ್ಟೋದೆ ಈತನ ಉದ್ದೇಶವಾಗಿದೆ.
ಸದ್ಯ ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರ ದಂಡು ನೆರೆದಿದ್ದು, ಇಂದು ಬೆಳಗ್ಗೆ ಖಾಕಿಗಳಿಂದ ಪಥಸಂಚಲನ ನಡೆಯಿತು. ದೊಂಬಿ ಬಳಿಕ ಸೀಲ್‍ಡೌನ್ ಪಾದರಾಯನಪುರದಲ್ಲಿ ಖಾಕಿ ಭದ್ರಕೋಟೆಯಿದ್ದು, ಗಲಭೆ ಎಬ್ಬಿಸಿದ 54 ಪುಂಡರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ದೊಂಬಿ ಸಂಬಂಧ ಮತ್ತೆ 80 ಮಂದಿಯನ್ನ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.