ನೀವೆಷ್ಟು ಸಹಾಯ ಮಾಡಿದ್ದೀರಿ ಎಂದಿದ್ದಕ್ಕೆ ನಟಿ ಗರಂ

Public TV
2 Min Read

ನವದೆಹಲಿ: ನಟಿ ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಕುರಿತು ಆಗಾಗ ಅಪ್‍ಡೇಟ್ ಮಾಡುತ್ತಲೇ ಇರುತ್ತಾರೆ. ಹಲವು ವಿಚಾರಗಳ ಕುರಿತು ಟ್ರೋಲ್‍ಗೆ ಒಳಗಾಗುತ್ತಾರೆ ಸಹ. ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜಟಾಪಟಿಗೆ ಇಳಿದಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆ ದೇಶದ ಪರಿಸ್ಥಿತಿ ಹೇಳತೀರದಾಗಿದ್ದು, ಕೊರೊನಾ ವೈರಸ್ ಪ್ರಕರಣಗಳನ್ನು ಹತ್ತಿಕ್ಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಆದರೆ ಈ ಮಹಾಮಾರಿ ಯಾವುದಕ್ಕೂ ಬಗ್ಗುತ್ತಿಲ್ಲ. ದೇಶವನ್ನೇ ಸಂಪೂರ್ಣವಾಗಿ ಲಾಕ್‍ಡೌನ್ ಮಾಡಿದರೂ ಮತ್ತೆ ಮತ್ತೆ ಕಾಡುತ್ತಿದೆ. ಆದರೂ ಸರ್ಕಾರಗಳು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿವೆ.

ಇದೆಲ್ಲದರ ಮಧ್ಯೆ ಕಾರ್ಮಿಕರು, ಬಡವರು ನರಳಾಡುತ್ತಿದ್ದಾರೆ. ಇದನ್ನು ಕಂಡ ಧನಿಕರು ಹಾಗೂ ನಟ, ನಟಿಯರು ಸಹಾಯ ಹಸ್ತ ಚಾಚುತ್ತಿದ್ದಾರೆ. ಕೆಲವರು ಪಿಎಂ ಕೇರ್ಸ್ ಹಾಗೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಹಾಕುತ್ತಿದ್ದಾರೆ. ಅಕ್ಷಯ್ ಕುಮಾರ್, ಸುರೇಶ್ ರೈನಾ, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಈ ರೀತಿ ಸಹಾಯ ಮಾಡಿದ್ದಾರೆ. ಇನ್ನೂ ಕೆಲವರು ಸಿನಿಮಾ ದಿನಗೂಲಿ ನೌಕರರು, ಕಾರ್ಮಿಕರಿಗೆ ನೇರವಾಗಿ ಸಹಾಯ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಹಾಗೂ ನಿಖಿಲ್ ಕುಮಾರಸ್ವಾಮಿ ಈ ರೀತಿಯಾಗಿ ಸಹಾಯ ಮಾಡಿದ್ದಾರೆ.

ಇದೆಲ್ಲವನ್ನು ಗಮನಿಸುತ್ತಿರುವ ನೆಟ್ಟಿಗರು, ಈ ಕುರಿತು ಸಹಾಯ ಮಾಡದೆ ಸುಮ್ಮನೇ ಕುಳಿತಿರುವ ನಟ, ನಟಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಇದೀಗ ಸೋನಾಕ್ಷಿ ಸಿನ್ಹಾ ಬಲಿಯಾಗಿದ್ದಾರೆ. ಹಲವು ಟ್ರೋಲ್ ಪೇಜ್‍ಗಳು ಸೋನಾಕ್ಷಿ ಸಿನ್ಹಾ ಅವರನ್ನು ಟ್ರೋಲ್ ಮಾಡುತ್ತಿದ್ದು, ನೀವು ಎಷ್ಟು ದಾನ ಮಾಡಿದಿರಿ. ಯಾರಿಗೆ ಮಾಡಿದಿರಿ ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ. ಇದರಿಂದ ಬೇಸರಗೊಂಡ ಸೋನಾಕ್ಷಿ, ಸಾಮಾಜಿಕ ಜಾಲತಾಣಗಳಲ್ಲೇ ತಕ್ಕ ಉತ್ತರ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ದಾನ ನೀಡಿರುವುದನ್ನು ಹೇಳಿಕೊಂಡಿಲ್ಲ ಎಂದ ಮೇಲೆ ಮಾಡಿಯೇ ಇಲ್ಲ ಎಂದರ್ಥವಲ್ಲ. ಈ ಅರ್ಥದಲ್ಲಿ ಭಾವಿಸಿ ಟ್ರೋಲ್ ಮಾಡುತ್ತಿರುವವರ ಕುರಿತು ಒಂದು ನಿಮಿಷ ಮೌನಾಚರಣೆ ಆಚರಿಸುತ್ತೇನೆ. ಸಹಾಯ ಮಾಡಿದ್ದನ್ನು ಎಲ್ಲೂ ಹೇಳಿಕೊಳ್ಳಬಾರದು. ಕೆಲವರು ಈ ನಿಯಮವನ್ನು ಪಾಲಿಸುತ್ತಾರೆ. ಈಗಲಾದರೂ ಶಾಂತರಾಗಿ, ಯಾವುದಾದರೂ ಒಳ್ಳೆಯ ಕೆಲಸಗಳಿಗೆ ನಿಮ್ಮ ಸಮಯವನ್ನು ಬಳಸಿಕೊಳ್ಳಿ ಎಂದಿದ್ದಾರೆ. ಅಲ್ಲದೆ ಸಹಾಯ ಮಾಡಿದ್ದನ್ನು ಹೇಳಿಕೊಳ್ಳುವುದು, ಹೇಳಿಕೊಳ್ಳದೇ ಇರುವುದು ಅವರ ವೈಯಕ್ತಿಕ ವಿಚಾರ ಎಂದು ತಿವಿದಿದ್ದಾರೆ.

https://twitter.com/sonakshisinha/status/1244998693465378821

ಈ ಮೂಲಕ ಬಾಲಿವುಡ್ ಬ್ಯೂಟಿ ಸೀನಾಕ್ಷಿ ಸಿನ್ಹಾ ಸಿಕ್ಕಾಪಟ್ಟೆ ಗರಂ ಆಗಿ, ಟ್ರೋಲ್ ಪೇಜ್‍ಗಳ ವಿರುದ್ಧ ಹರಿಹಾಯ್ದಿದ್ದಾರೆ. ಕ್ಲಾಸ್ ಮಾಡಿದ್ದಾರೆ ಸಹ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *